ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಕಳಪೆ ಸ್ಮಾರ್ಟ್‌ಫೋನ್ ಸ್ಕ್ರೀನ್ ಗಾರ್ಡ್‌ಗಳನ್ನು 2027ರ ಏ.1ರಿಂದ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
- 2027ರ ಏ.1ರಿಂದ ಹೊಸ ನಿಯಮ ಅನ್ವಯ
- ಗಾಜಿನ ಗುಣಮಟ್ಟ, ಸ್ಪಷ್ಟತೆಗೆ ಮಹತ್ವ
ನವದೆಹಲಿ: ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಕಳಪೆ ಸ್ಮಾರ್ಟ್‌ಫೋನ್ ಸ್ಕ್ರೀನ್ ಗಾರ್ಡ್‌ಗಳನ್ನು 2027ರ ಏ.1ರಿಂದ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸ್ಕ್ರೀನ್ ಗಾರ್ಡ್‌ಅನ್ನು ‘ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್’ ನೋಂದಣಿ ಚೌಕಟ್ಟಿನ ವ್ಯಾಪ್ತಿಗೆ ತಂದಿದೆ. ಹೀಗಾಗಿ ಅಂತಹ ಉತ್ಪನ್ನಗಳು 2027ರ ಏ.1ರಿಂದ ಭಾರತೀಯ ಮಾನದಂಡವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತವೆ.
ಸೋಮವಾರ ಈ ಬಗ್ಗೆ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ, ಕಳಪೆ ಸ್ಟ್ರೀನ್ ಪ್ರೊಟೆಕ್ಟರ್‌ಗಳನ್ನು ತಕ್ಷಣದಿಂದ ನಿಷೇಧಿಸುವ ಬಗ್ಗೆ ಘೋಷಿಸಲಾಗಿಲ್ಲ. ಬದಲಿಗೆ, ಮಾನದಂಡಗಳಿಗೆ ಹೊಂದಿಕೆಯಾಗುವಂತೆ ತಮ್ಮ ಉತ್ಪನ್ನಗಳ ಗುಣಮಟ್ಟ ಇರುವಂತೆ ಮಾಡಲು ಮುಂದಿನ ವರ್ಷದ ಏಪ್ರಿಲ್ ವರೆಗೆ ಉತ್ಪಾದಕರಿಗೆ ಹಾಗೂ ಆಮದುದಾರರಿಗೆ ಸಮಯಾವಕಾಶ ನೀಡಲಾಗಿದೆ. ಆ ಬಳಿಕ ಸ್ಕ್ರೀನ್‌ಗಾರ್ಡ್‌ಗೆ ‘IS 19348:2025’ ಮಾನದಂಡ ಅನುಸರಣೆ ಕಡ್ಡಾಯವಾಗಲಿದೆ.
ಬೆಲೆ ಹೆಚ್ಚಳ?:
ಈಗ ಸ್ಕ್ರೀನ್ ಗಾರ್ಡ್‌ಗಳು ಎಲ್ಲೆಂದರಲ್ಲಿ ಸಿಗುತ್ತಿವೆ. ಆದರೆ ಮಾನದಂಡ ಕಡ್ಡಾಯದ ಬಳಿಕ ಅವುಗಳ ಲಭ್ಯತೆ ಕಮ್ಮಿ ಆಗಬಹುದು. ಇದರಿಂದ ಸ್ಕ್ರೀನ್ ಗಾರ್ಡ್‌ಗಳ ಬೆಲೆ ಹೆಚ್ಚಲಿದೆ ಎನ್ನಲಾಗಿದೆ. ಹೊಸ ಮಾರ್ಗಸೂಚಿಯಲ್ಲಿ ಏನಿದೆ?:
ಹೊಸ ಮಾನದಂಡಗಳ ಅಡಿಯಲ್ಲಿ ಗಾಜಿನ ಗುಣಮಟ್ಟ, ಸ್ಪಷ್ಟತೆ, ಒಡೆಯದಂತಹ ಫಿಲ್ಮ್, ಒಲಿಯೊಫೋಬಿಕ್ ಲೇಪನ, ಪ್ರಜ್ವಲಿಸುವಿಕೆ ನಿರೋಧಕ, ನೀಲಿ ಬೆಳಕಿನ ಫಿಲ್ಟರ್ ಮತ್ತು ಗೌಪ್ಯತೆ ಫಿಲ್ಮ್‌ಗಳು ಇರುವುದು ಕಡ್ಡಾಯ. ಜತೆಗೆ, ಉತ್ಪಾದಕರ ಮಾಹಿತಿ, ಬ್ಯಾಚ್ ಸಂಖ್ಯೆ ಸೇರಿದಂತೆ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪ್ಯಾಕೆಟ್‌ನ ಹೊರಗೆ ಮುದ್ರಿಸಬೇಕಾಗುವುದು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.