ನ್ಯೂಯಾರ್ಕ್: ಭಾರತ- ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಈಗಾಗಲೇ 70ಕ್ಕೂ ಹೆಚ್ಚು ಬಾರಿ ಹೇಳಿರುವ ಟ್ರಂಪ್ ಇದೀಗ ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ದ್ವಿಪಕ್ಷೀಯ ಸಭೆಯಲ್ಲಿ ಈ ಬಗ್ಗೆ ಮತ್ತೆ ಮಾತನಾಡಿದ್ದಾರೆ.ಫ್ಲೋರಿಡಾದ ಪಾಮ್ ಬೀಚ್‌ನಲ್ಲಿ ನೆತನ್ಯಾಹು ಜತೆ ದ್ವಿಪಕ್ಷೀಯ ಸಭೆ ನಡೆಸಿದ ಟ್ರಂಪ್, ‘ 2ನೇ ಸಲ ಅಧಿಕಾರಕ್ಕೆ ಬಂದ ಬಳಿಕ ಒಂದು ವರ್ಷದಲ್ಲಿ 8 ಯುದ್ಧವನ್ನು ನಿಲ್ಲಿಸಿದ್ದೇನೆ. ಅದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವೂ ಸೇರಿದೆ. ಆದರೆ ನನ್ನ ಶ್ರಮಕ್ಕೆ ತಕ್ಕ ಶ್ರೇಯಸ್ಸು ಸಿಗುತ್ತಿಲ್ಲ’ ಎಂದರು.
ಭಾರತವು ಈಗಾಗಲೇ ಟ್ರಂಪ್ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಹಲವು ಬಾರಿ ನಿರಾಕರಿಸಿದೆ.
ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ತು, ಭಾರತ-ಪಾಕ್ ಯುದ್ಧದ ವೇಳೆ ಮಧ್ಯಸ್ಥಿಕೆ ವಹಿಸಿದ್ದು ನಾವು ಎಂಬ ಹೇಳಿಕೆ ನೀಡುವ ಸರದಿ ಈಗ ಚೀನಾದ್ದು.ಮಂಗಳವಾರ ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ‘ಈ ವರ್ಷ ಚೀನಾ ಮಧ್ಯಸ್ಥಿಕೆ ವಹಿಸಿದ ಹಾಟ್‌ಸ್ಪಾಟ್ ಸಮಸ್ಯೆಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯೂ ಒಂದು’ ಎಂದರು.
‘ನಾವು ಉತ್ತರ ಮ್ಯಾನ್ಮಾರ್, ಇರಾನಿನ ಪರಮಾಣು ಸಮಸ್ಯೆ, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆ, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಸಮಸ್ಯೆಗಳು ಮತ್ತು ಕಾಂಬೋಡಿಯಾ ಮತ್ತು ಥಾಯ್ಲೆಂಡ್ ನಡುವಿನ ಇತ್ತೀಚಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ’ ಎಂದು ಹೇಳಿದರು.ಈ ಹಿಂದೆಯೇ ಭಾರತವು ಭಾರತ-ಪಾಕ್ ಯುದ್ಧದಲ್ಲಿ ಯಾರೂ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಸ್ಪಷ್ಟಪಡಿಸಿತ್ತು.
ನವದೆಹಲಿ: ಜ.14ರಿಂದ ಜು.14ರವರೆಗೆ ‘ರೈಲ್‌ಒನ್’ ಆ್ಯಪ್‌ನಲ್ಲಿ ಜನರಲ್ ಟಿಕೆಟ್ ಖರೀದಿಸಿ ಡಿಜಿಟಲ್ ಪಾವತಿ ಮಾಡಿದರೆ ಶೇ.3 ರಿಯಾಯ್ತಿ ಕೊಡುವ ಕುರಿತು ರೈಲ್ವೆ ಇಲಾಖೆ ಘೋಷಿಸಿದೆ.‘ಪ್ರಸ್ತುತ ರೈಲ್‌ಒನ್‌ನಲ್ಲಿ ಜನರಲ್ ಟಿಕೆಟ್ ಖರೀದಿಸಿ ಕೇವಲ ರೈಲ್‌ಒನ್ ವ್ಯಾಲೆಟ್ ಮೂಲಕ ಪಾವತಿ ಮಾಡುವವರಿಗೆ ಮಾತ್ರ ಈ ಶೇ.3 ರಿಯಾಯ್ತಿ ಲಭಿಸುತ್ತಿದ್ದು, ಜನರನ್ನು ಹೆಚ್ಚು ಡಿಜಿಟಲ್ ಪಾವತಿ ಕಡೆಗೆ ಸೆಳೆಯುವ ಸಲುವಾಗಿ ಎಲ್ಲ ಡಿಜಿ ಪಾವತಿಗೂ ಶೇ.3 ಆಫರ್ ವಿಸ್ತರಿಸಲಾಗುತ್ತಿದೆ. ಟಿಕೆಟ್ ಮೊತ್ತದ ಮೇಳೆ ಶೇ.3 ರಿಯಾಯ್ತಿಯು ಲಭಿಸಲಿದೆ. ಮಿಕ್ಕಂತೆ ಟಿಕೆಟ್ ಕೌಂಟರ್‌ಗಳಲ್ಲಿನ ಟಿಕೆಟ್‌ಗೆ ಯಾವುದೇ ಆಫರ್ ಇರುವುದಿಲ್ಲ’ ಎಂದು ಇಲಾಖೆ ತಿಳಿಸಿದೆ.
ಪುಟಿನ್ ಮನೆ ಮೇಲೆ ದಾಳಿ ಯತ್ನಕ್ಕೆ ಮೋದಿ ಕಳವಳ
ನವದೆಹಲಿ : ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ನಿವಾಸದ ಮೇಲೆ ಉಕ್ರೇನ್ 91 ಡ್ರೋನ್ ಹಾರಿಸಿ ದಾಳಿಗೆ ಯತ್ನಿಸಿದೆ ಎಂಬ ಕುರಿತ ವರದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, ಉಭಯ ದೇಶಗಳ ನಡುವೆ ವರ್ಷಗಳಿಂದ ನಡೆಯುತ್ತಿರುವ ಹಗೆತನ ಅಂತ್ಯಕ್ಕೆ ರಾಜತಾಂತ್ರಿಕ ಮಾತುಕತೆಯ ಯತ್ನದತ್ತ ಗಮನ ಹರಿಸಲು ಸಲಹೆ ನೀಡಿದ್ದಾರೆ.‘ಎರಡೂದೇಶಗಳ ನಡುವಿನ ವೈರತ್ವದ ಅಂತ್ಯ ಮತ್ತು ಶಾಂತಿ ಸ್ಥಾಪಿಸಲು ರಾಜತಾಂತ್ರಿಕ ಯತ್ನವೊಂದೇ ಸುಲಭ ಮಾರ್ಗ. ತಮ್ಮನ್ನು ದುರ್ಬಲಗೊಳಿಸುವ ಯಾವುದೇ ಕಾರ್ಯಗಳನ್ನು ತಪ್ಪಿಸಲು ಎರಡು ರಾಷ್ಟ್ರಗಳು ಸಂಧಾನದತ್ತ ಪ್ರಯತ್ನಿಸಬೇಕು’ ಎಂದು ಮೋದಿ ಹೇಳಿದ್ದಾರೆ.
ಮಾಸ್ಕೋದ ನವ್ಗೊರೊಡ್ ಪ್ರದೇಶದಲ್ಲಿಯ ಪುಟಿನ್ ನಿವಾಸದ ಮೇಲೆ ಉಕ್ರೇನ್, ಡಿ.28ರಂದು 91 ದೀರ್ಘ ಶ್ರೇಣಿಯ ಡ್ರೋನ್‌ಗಳ ಮೂಲಕ ದಾಳಿ ನಡೆಸಲು ಯತ್ನಿಸಿತ್ತು ಎಂದು ರಷ್ಯಾ ಸೋಮವಾರ ಆರೋಪಿಸಿತ್ತು.