ಯುದ್ಧ ಅಂತ್ಯಕ್ಕೆ ಸಮೀಪದಲ್ಲಿದ್ದೇವೆ : ಟ್ರಂಪ್‌

KannadaprabhaNewsNetwork |  
Published : Apr 16, 2026, 01:45 AM ISTUpdated : Apr 16, 2026, 04:39 AM IST
Donald Trump

ಸಾರಾಂಶ

ಇರಾನ್‌ ಒಪ್ಪಂದ ಮಾಡಿಕೊಳ್ಳಲು ತೀವ್ರವಾಗಿ ಬಯಸುತ್ತಿದೆ. ಯುದ್ಧ ಮುಗಿಯುವ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ‘ಯುದ್ಧ ಮುಗಿಯುವ ಹಂತದಲ್ಲಿದೆ ಎಂದು ನಾವು ಭಾವಿಸುತ್ತೇನೆ

ವಾಷಿಂಗ್ಟನ್: ಇರಾನ್‌ ಒಪ್ಪಂದ ಮಾಡಿಕೊಳ್ಳಲು ತೀವ್ರವಾಗಿ ಬಯಸುತ್ತಿದೆ. ಯುದ್ಧ ಮುಗಿಯುವ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ‘ಯುದ್ಧ ಮುಗಿಯುವ ಹಂತದಲ್ಲಿದೆ ಎಂದು ನಾವು ಭಾವಿಸುತ್ತೇನೆ. ಇರಾನ್‌ ಒಪ್ಪಂದ ಮಾಡಿಕೊಳ್ಳಲು ತೀವ್ರವಾಗಿ ಬಯಸುತ್ತಿದೆ. ನಾನು ಈಗಲೇ ಮುಂದುವರಿಸಿದರೆ, ಆ ದೇಶವನ್ನು ಪುನರ್ನಿರ್ಮಿಸಲು ಅವರಿಗೆ 20 ವರ್ಷಗಳು ಬೇಕಾಗುತ್ತದೆ. ನಾವು ಇನ್ನೂ ಮುಗಿಸಿಲ್ಲ’ ಎಂದರು.

‘ಇರಾನ್ ಜೊತೆ ಕದನ ವಿರಾಮ ವಿಸ್ತರಿಸುವ ಬಗ್ಗೆ ಯೋಚಿಸುತ್ತಿಲ್ಲ. ಆದರೆ ಮಾತುಕತೆ ಮೂಲಕ ಒಪ್ಪಂದವು ಉತ್ತಮ ಫಲಿತಾಂಶ ನೀಡಲಿದೆ.

ಇದು ಎರಡೂ ರೀತಿಯಲ್ಲಿ ಕೊನೆಗೊಳ್ಳಬಹುದು. ಆದರೆ ಒಪ್ಪಂದ ಉತ್ತಮವಾದದ್ದು’ ಎಂದು ಇನ್ನೊಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ನಡುವೆ ಕದನ ವಿರಾಮ ವಿಸ್ತರಣೆ ಮತ್ತು ಅಮೆರಿಕ-ಇರಾನ್‌ ನಡುವೆ 2ನೇ ಸುತ್ತಿನ ಮಾತುಕತೆ ಆರಂಭಿಸುವ ಸಂಬಂಧ ಹಿಂಬಾಗಿಲ ಮಾತುಕತೆಗಳು ಸಕಾರಾತ್ಮಕ ನಿಟ್ಟಿನಲ್ಲಿ ಸಾಗಿದೆ ಎಂದು ಹಲವು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.ಟ್ರಂಪ್‌ ಷರತ್ತು:

ಇದೇ ವೇಳೆ 2ನೇ ಸುತ್ತಿನ ಮಾತುಕತೆ ನಡೆಸುವ ಮುನ್ನ, ಇರಾನ್‌ ಹೋರ್ಮಜ್‌ ಜಲಸಂಧಿಯನ್ನು ಎಲ್ಲರಿಗೂ ಪೂರ್ಣವಾಗಿ ಮುಕ್ತಗೊಳಿಸಬೇಕು ಮತ್ತು ಸಂಧಾನಕ್ಕೆ ಆಗಮಿಸುವ ಇರಾನ್‌ನ ಪ್ರತಿನಿಧಿಗಳು, ಸಂಧಾನದ ಫಲಶ್ರುತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಬಗ್ಗೆ ಇರಾನ್‌ ಅರೆಸೇನಾಪಡೆಯಾದ ರೆವಲ್ಯೂಷನರಿ ಗಾರ್ಡ್ಸ್‌ನಿಂದ ಭರವಸೆ ಹೊತ್ತು ತರಬೇಕು ಎಂದು ಟ್ರಂಪ್‌ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.

ಪಾಕ್‌ಗೆ ಸೌದಿಯಿಂದ ಮತ್ತೆ ₹28 ಸಾವಿರ ಕೋಟಿ ಸಾಲ:

ಇಸ್ಲಾಮಾಬಾದ್‌: ಆರ್ಥಿಕತೆ ನೆಲಕಚ್ಚಿ, ಸಾಲದ ಮೇಲೆಯೇ ದಿನಗಳನ್ನು ದೂಡುತ್ತಿರುವ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಮತ್ತೆ 28 ಸಾವಿರ ಕೋಟಿ ರು. ಸಾಲ ನೀಡಲು ಮುಂದಾಗಿದೆ. ಜತೆಗೆ, ಈ ಹಿಂದೆ ನೀಡಿದ್ದ 4.68 ಲಕ್ಷ ಕೋಟಿ ರು. ಸಾಲ ಮರುಪಾವತಿ ಅವಧಿಯನ್ನು ಮತ್ತೆ 3 ವರ್ಷ ವಿಸ್ತರಿಸಿದೆ. ಇರಾನ್‌ ಮತ್ತು ಅಮೆರಿಕ ನಡುವೆ ಸಂಧಾನ ಮಾತುಕತೆಗೆ ಪಾಕಿಸ್ತಾನ ಸರ್ಕಾರ ಮಧ್ಯಸ್ಥಿಕೆ ವಹಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದೇ ತಿಂಗಳು ಪಾಕಿಸ್ತಾನ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ಗೆ (ಯುಎಇ) 33 ಸಾವಿರ ಕೋಟಿ ರು. ಸಾಲ ಮರುಪಾವತಿ ಮಾಡಬೇಕಿದೆ. ವಿದೇಶಿ ವಿನಿಮಯ ಮೀಸಲಿನಲ್ಲಿ ಸಾಕಷ್ಟು ಒತ್ತಡವನ್ನೂ ಎದುರಿಸುತ್ತಿದೆ. ಈ ಸಂಕಷ್ಟದ ಸಮಯದಲ್ಲೇ ಸೌದಿಯಿಂದ ನೆರವಿನ ಭರವಸೆ ಸಿಕ್ಕಿದೆ.

ಫ್ಲೈಟ್‌ ಹತ್ತಿ ಬಂದಿದ್ದ ಇರಾನ್‌ ನಿಯೋಗ ಬಸ್‌ನಲ್ಲಿ ವಾಪಸ್‌ 

ಟೆಹ್ರಾನ್‌: ಪಾಕಿಸ್ತಾನದ ರಾಜಧಾನಿಯಲ್ಲಿ ಅಮೆರಿಕ ಜತೆಗಿನ ಸಂಧಾನ ಮಾತುಕತೆ ವಿಫಲವಾದ ಬಳಿಕ ಇರಾನ್‌ಗೆ ಮರಳಲಿದ್ದ ನಿಯೋಗಕ್ಕೆ ಬೆದರಿಕೆ ಇದ್ದ ಕಾರಣ ಅದು ನಡುನಡುವೆ ವಿಮಾನ ಬದಲಿಸಿ, ರೈಲು, ಬಸ್‌ ಪ್ರಯಾಣ ಮಾಡಿ ಸ್ವದೇಶಕ್ಕೆ ತಲುಪಿತ್ತು ಎಂದು ತಿಳಿದುಬಂದಿದೆ. ಈ ವಿಷಯವನ್ನು ನಿಯೋಗದೊಂದಿಗೆ ಬಂದಿದ್ದ ಇರಾನಿನ ರಾಜಕೀಯ ವಿಶ್ಲೇಷಕ ಮೊಹಮ್ಮದ್ ಮರಾಂಡಿ ಬಾಯ್ಬಿಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮರಾಂಡಿ, ‘ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ, ಸಂಸತ್‌ ಸ್ಪೀಕರ್‌ ಘಾಲಿಬಾಫ್‌ ಜತೆ ಮಾತುಕತೆಗೆಂದು ಇಸ್ಲಾಮಾಬಾದ್‌ಗೆ ಹೊರಟಿದ್ದಾಗಲೇ ನಾವಿದ್ದ ವಿಮಾನದ ಮೇಲೆ ದಾಳಿಯ ಬೆದರಿಕೆ ಬಂದಿದ್ದವು. ಆದ್ದರಿಂದ ಮರಳುವಾಗ ವಿಮಾನದ ಮೇಲೆ ಕ್ಷಿಪಣಿ ದಾಳಿ ಭೀತಿಯಿಂದ ನಾವು ಒಂದೇ ವಿಮಾನದಲ್ಲಿ ಟೆಹ್ರಾನ್‌ಗೆ ಪ್ರಯಾಣಿಸಲಿಲ್ಲ. ಬೇರೊಂದು ವಿಮಾನ ಹತ್ತಿ ಮಶಾದ್‌ಗೆ ಹೋದೆವು. ಅಲ್ಲಿಂದ ಟ್ರೈನ್‌, ಕಾರ್‌, ಬಸ್‌ನಲ್ಲಿ ಟೆಹ್ರಾನ್‌ ತಲುಪಿದೆವು’ ಎಂದು ಹೇಳಿದ್ದಾರೆ.ಜತೆಗೆ ಅಮೆರಿಕವನ್ನು ‘ವಂಚಕ’ ಎಂದು ಕರೆದ ಮರಾಂಡಿ, ‘ನಾವು ಮತುಕತೆಯಲ್ಲಿ ತೊಡಗಿದ್ದ ವೇಳೆಯೂ ಅಲ್ಲ ನಮ್ಮ ಸೇನೆ ದಾಳಿಗೆ ತಯಾರಿ ನಡೆಸುತ್ತಲೇ ಇತ್ತು’ ಎಂದು ಹೇಳಿದ್ದಾರೆ.

ಇಂಧನ ತತ್ವಾರ: ಪಾಕ್‌ನಲ್ಲಿ ನಿತ್ಯ 2 ಗಂಟೆ ವಿದ್ಯುತ್‌ ಕಡಿತ

ಇಸ್ಲಾಮಾಬಾದ್‌: ಮಧ್ಯಪ್ರಾಚ್ಯ ಕದನ ಆರಂಭದ ಬಳಿಕ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿಸಿ ಭಾರೀ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ಸರ್ಕಾರ, ಇದೀಗ ನಿತ್ಯ 2 ಗಂಟೆ ವಿದ್ಯುತ್‌ ಕಡಿತಕ್ಕೆ ನಿರ್ಧರಿಸಿದೆ. ಅತಿ ಹೆಚ್ಚು ವಿದ್ಯುತ್ ಬೇಡಿಕೆ ಇರುವ ಸಂಜೆ 5ರಿಂದ ಮಧ್ಯರಾತ್ರಿ 1 ಗಂಟೆಯ ಅವಧಿಯಲ್ಲಿ ವಿದ್ಯುತ್‌ ಕಡಿತಕ್ಕೆ ಸರ್ಕಾರ ನಿರ್ಧರಿಸಿದೆ. ಆದರೆ ಈ ಕಡಿತದ ವ್ಯಾಪ್ತಿಯಿಂದ ಕರಾಚಿ ಮತ್ತು ಹೈದರಾಬಾದ್‌ ಹೊರಗಿಡಲಾಗಿದೆ. ಪಾಕ್‌ನಲ್ಲಿ ಜಲವಿದ್ಯುತ್‌ ಉತ್ಪಾದನೆ ಕುಂಠಿತವಾಗಿದೆ. ಹೀಗಾಗಿ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನ ಬಳಸಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಆದರೆ ಇದೀಗ ಅದಕ್ಕೂ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್‌ ಕಡಿತಕ್ಕೆ ಸರ್ಕಾರ ಮುಂದಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

2 ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ಸೇರಿ 3 ವಿಧೇಯಕ ಮಂಡನೆಗೆ ಕ್ಷಣಗಣನೆ
ಹೋರ್ಮುಜ್‌ನಲ್ಲಿ ಇದೀಗ ಸಂಪೂರ್ಣ ನಿರ್ಬಂಧ ಜಾರಿ