ಅಧ್ಯಕ್ಷ ಆಗುತ್ತಿದ್ದಂತೆ ಟ್ರಂಪ್‌ ಉಭಯ ದೇಶಗಳ ಸಂಬಂಧ ವೃದ್ಧಿಗಾಗಿ ಚೀನಾ, ಭಾರತ ಭೇಟಿ?

KannadaprabhaNewsNetwork |  
Published : Jan 20, 2025, 01:32 AM ISTUpdated : Jan 20, 2025, 04:29 AM IST
donald trump

ಸಾರಾಂಶ

47ನೇ ಅಧ್ಯಕ್ಷರಾಗಿ ಅಧಿಕಾರಕ್ಕೇರಲಿರುವ ಟ್ರಂಪ್‌, ಉಭಯ ದೇಶಗಳ ಸಂಬಂಧ ವೃದ್ಧಿಗಾಗಿ ಚೀನಾಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಭಾರತಕ್ಕೂ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್‌: 47ನೇ ಅಧ್ಯಕ್ಷರಾಗಿ ಅಧಿಕಾರಕ್ಕೇರಲಿರುವ ಡೊನಾಲ್ಡ್‌ ಟ್ರಂಪ್‌, ಉಭಯ ದೇಶಗಳ ಸಂಬಂಧ ವೃದ್ಧಿಗಾಗಿ ಚೀನಾಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಭಾರತಕ್ಕೂ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.

‘ಚೀನಾದ ಆಮದಿನ ಮೇಲೆ ಭಾರೀ ತೆರಿಗೆ ಹೇರಲು ಮುಂದಾಗಿರುವ ಟ್ರಂಪ್‌, ಅಧ್ಯಕ್ಷರಾಗುತ್ತಿದ್ದಂತೆ ಚೀನಾಗೆ ಭೇಟಿ ನೀಡಿ ಸಂಬಂಧವನ್ನು ಬಲಪಡಿಸಲು ಬಯಸಿರುವುದಾಗಿ ತಮ್ಮ ಸಲಹೆಗಾರರಿಗೆ ಹೇಳಿದ್ದಾರೆ. ಜತೆಗೆ, ಅವರು ಭಾರತಕ್ಕೂ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ’ ಎಂದು ಅಲ್ಲಿನ ಪ್ರತಿಷ್ಠಿತ ಮಾಧ್ಯಮಗಳು ವರದಿ ಮಾಡಿವೆ.

ಟ್ರಂಪ್‌ರ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ರನ್ನು ಆಹ್ವಾನಿಸಲಾಗಿದೆ. ಇತ್ತ ಭಾರತ ಕ್ವಾಡ್‌ ಶೃಂಗಸಭೆ ಆಯೋಜಿಸಲಿದ್ದು, ಟ್ರಂಪ್‌ ಇದಕ್ಕೆ ಆಗಮಿಸುವ ಸಾಧ್ಯತೆಯಿದೆ. ಇಲ್ಲವೇ, ಪ್ರಧಾನಿ ನರೇಂದ್ರ ಮೋದಿಯವರನ್ನೇ ವೈಟ್‌ಹೌಸ್‌ಗೆ ಆಹ್ವಾನಿಸುವ ಸಂಭವವೂ ಇದೆ.

ಟ್ರಂಪ್‌ ಪ್ರಮಾಣಕ್ಕೆ ಜೈಶಂಕರ್‌, ಅಂಬಾನಿ ದಂಪತಿ

ವಾಷಿಂಗ್ಟನ್‌: ಟ್ರಂಪ್‌ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಇವರೊಂದಿಗೆ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಹಾಗೂ ಅವರ ಪತ್ನಿ ನೀತಾ ಕೂಡ ಶಪಥ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.ಇದಕ್ಕಾಗಿ ಈಗಾಗಲೇ ಅಮೆರಿಕ್ಕೆ ತೆರಳಿರುವ ಅಂಬಾನಿ ದಂಪತಿ, ಟ್ರಂಪ್‌ರೊಂದಿಗೆ ಕ್ಯಾಂಡಲ್‌ ಲೈಟ್‌ ಭೋಜನದಲ್ಲಿ ಭಾಗಿಯಾಗಿದ್ದರು.

ಟ್ರಂಪ್‌ ಹಾಗೂ ಅಂಬಾನಿ ಪರಿವಾರದ ನಡುವೆ ಮೊದಲಿಂದಲೂ ಸ್ನೇಹವಿದೆ. ಅಂಬಾನಿಯ ಕಿರಿಯ ಪುತ್ರ ಅನಂತ್‌ ಅವರ ವಿವಾಹದಲ್ಲೂ ಟ್ರಂಪ್‌ರ ಪುತ್ರಿ ಇವಾಂಕಾ ದಂಪತಿ ಭಾಗಿಯಾಗಿದ್ದರು.

ಅಧಿಕಾರಕ್ಕೇರುತ್ತಿದ್ದಂತೆ 100 ಆದೇಶಗಳಿಗೆ ಟ್ರಂಪ್‌ ಸಹಿ?

ವಾಷಿಂಗ್ಟನ್‌: ಚುನಾವಣಾ ಪ್ರಚಾರದ ವೇಳೆ ನೀಡಿದ ಭರವಸೆಗಳನ್ನು ಈಡೇರಿಸುವ 100 ಆದೇಶಗಳಿಗೆ ಡೊನಾಲ್ಡ್‌ ಟ್ರಂಪ್‌ 2ನೇ ಬಾರಿಗೆ ಅಧ್ಯಕ್ಷರಾಗುತ್ತಿದ್ದಂತೆ ಸಹಿ ಹಾಕುವ ನಿರೀಕ್ಷೆಯಿದೆ.ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್‌, ‘ದಾಖಲೆ ಪ್ರಮಾಣದ ಆದೇಶಗಳಿಗೆ ಸಹಿ ಹಾಕುವ ಯೋಜನೆ ಹೊಂದಿರು’ ಎಂದಿದ್ದರು. ಇವುಗಳು ಅಧ್ಯಕ್ಷರು ಏಕಪಕ್ಷೀಯವಾಗಿ ಹೊರಡಿಸುವ ಆದೇಶಗಳಾಗಿವೆ.

ಟ್ರಂಪ್‌ ಸಹಿ ಮಾಡಲಿರುವ ಆದೇಶಗಳು ಮುಖ್ಯವಾಗಿ 5 ವಿಷಯಗಳಿಗೆ ಸಂಬಂಧಿಸಿದವುಗಳಾಗಿವೆ. ಅವುಗಳು, ದಕ್ಷಿಣ ಗಡಿಯನ್ನು ಮುಚ್ಚುವುದು, ಸಾಮೂಹಿಕ ಗಡೀಪಾರು, ತೃತೀಯ ಲಿಂಗಿಯರು ಮಹಿಳಾ ಕ್ರೀಡೆಗಳಲ್ಲಿ ಭಾಗವಹಿಸದಂತೆ ತಡೆಯುವುದು, ಶಕ್ತಿ ಅನ್ವೇಷಣೆಯ ಮೇಲಿನ ನಿರ್ಬಂಧ ತೆಗೆದುಹಾಕುವುದು, ಸರ್ಕಾರದ ದಕ್ಷತೆಯನ್ನು ಸುಧಾರಿಸುವುದು.ಅಂತೆಯೇ, 2021ರ ಕ್ಯಾಪಿಟಲ್‌ ಕಟ್ಟಡ ದಾಳಿಯ ಸಂಬಂಧ ಬಂಧಿತರಾಗಿರುವ ತಮ್ಮ ಬೆಂಬಲಿಗರ ಬಿಡುಗಡೆ ಮಾಡುವ ಆದೇಶವನ್ನೂ ಹೊರಡಿಸುವ ಸಾಧ್ಯತೆಯಿದೆ. ಅಧ್ಯಕ್ಷ ಬೈಡೆನ್‌ ತಂದಿದ್ದ ಕೆಲ ಆದೇಶಗಳನ್ನು ಹಿಂಪಡೆಯುವ ನಿರೀಕ್ಷೆಯೂ ಇದೆ.

ಟ್ರಂಪ್‌ ಪ್ರಮಾಣಕ್ಕೂ ಮೊದಲೇ ಪ್ರತಿಭಟನೆ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್‌ ಪ್ರಮಾಣ ಸ್ವೀಕರಿಸುವ ಮುನ್ನವೇ ಅವರ ನೀತಿಗಳ ವಿರುದ್ಧ ರಾಜಧಾನಿಯಲ್ಲಿ ಭಾರೀ ಪ್ರತಿಭಟನೆ ನಡೆದಿದೆ.‘ಪೀಪಲ್ಸ್‌ ಮಾರ್ಚ್‌’ ಎಂಬ ಲಾಭರಹಿತ ಸಂಸ್ಥೆಯೆಂಬ ಹೆಸರಿನಡಿ ಸಖಿ ಫಾರ್‌ ಸೌತ್‌ ಏಷ್ಯನ್‌ ಸರ್ವೈವರ್ಸ್‌ ಈ ಪ್ರತಿಭಟನೆಯನ್ನು ಆಯೋಜಿಸಿದ್ದು, ಟ್ರಂಪ್‌ ಹಾಗೂ ಅವರ ನಿಕಟ ಬೆಂಬಲಿಗರಾದ ಎಲಾನ್‌ ಮಸ್ಕ್‌ರ ವಿರುದ್ಧ ಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.

‘ನಾವು ಫ್ಯಾಸಿಸಂಗೆ ತಲೆಬಾಗುವುದಿಲ್ಲ ಎಂಬ ಸಂದೇಶ ಸಾರಲು ಪ್ರತಿಭಟನೆಯೇ ಪರಿಣಾಮಕಾರಿ ಮಾರ್ಗವಾಗಿದೆ’ ಎಂಬ ಆಶಯದೊಂದಿಗೆ ಈ ಪ್ರತಿಭಟನೆ 3 ಕಡೆಗಳಲ್ಲಿ ಆರಂಭವಾಗಿ ಲಿಂಕನ್ ಮೆಮೋರಿಯಲ್‌ ಬಳಿ ಸೇರಲಿದೆ. 2017ರಲ್ಲಿ ಟ್ರಂಪ್‌ ಮೊದಲ ಬಾರಿ ಅಧಿಕಾರಕ್ಕೇರಿದಾಗಲೂ ಇಂತಹ ಪ್ರತಿಭಟನೆ ನಡೆದಿತ್ತು.ಟ್ರಂಪ್‌ ಪ್ರಮಾಣದ ಹಿನ್ನೆಲೆಯಲ್ಲಿ ಇನ್ನೂ ಅನೇಕ ಪ್ರತಿಭಟನೆಗಳು ನಡೆಯುವ ನಿರೀಕ್ಷೆಯಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ