ಉದ್ಯಮಿಯೊಬ್ಬರ ಮಗಳಿಗೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್ ಸೀಟ್‌ ಆಸೆ ತೋರಿಸಿ ₹1.57 ಕೋಟಿ ನಾಮ

KannadaprabhaNewsNetwork | Updated : Oct 05 2024, 05:28 AM IST

ಸಾರಾಂಶ

ಹೊರರಾಜ್ಯದ ಉದ್ಯಮಿಯೊಬ್ಬರ ಮಗಳಿಗೆ ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಕೊಡಿಸುವುದಾಗಿ ನಂಬಿಸಿ 1.57 ಕೋಟಿ ರು. ಪಡೆದು ವಂಚಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಹೊರರಾಜ್ಯದ ಉದ್ಯಮಿಯೊಬ್ಬರ ಮಗಳಿಗೆ ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಕೊಡಿಸುವುದಾಗಿ ನಂಬಿಸಿ 1.57 ಕೋಟಿ ರು. ಪಡೆದು ವಂಚಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ಟಿ.ಮಂಜಪ್ಪ (47) ಮತ್ತು ಆತನ ಸ್ನೇಹಿತ ವಿರೂಪಾಕ್ಷಪ್ಪ(52) ಬಂಧಿತರು. ಆರೋಪಿಗಳು ಪಶ್ಚಿಮ ಬಂಗಾಳ ಮೂಲದ ಉದ್ಯಮಿ ಪ್ರದೀಪ್ ಭಾಸ್ಕರ್ ಪೌಲ್ ಎಂಬುವವರ ಪುತ್ರಿಗೆ ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಕೊಡಿಸುವುದಾಗಿ ನಂಬಿಸಿ 1.57 ಕೋಟಿ ರು. ಪಡೆದು ವಂಚಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

ದೂರುದಾರ ಉದ್ಯಮಿ ಪ್ರದೀಪ್‌ ಭಾಸ್ಕರ್‌ ಪುತ್ರಿ ನಗರದ ವೈಟ್‌ಫೀಲ್ಡ್‌ ಬಳಿರುವ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡಿ 2018ರಲ್ಲಿ ತೇರ್ಗಡೆಯಾಗಿದ್ದರು. ಮಗಳು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಆಸಕ್ತಿ ತೋರಿದ ಹಿನ್ನೆಲೆ ಉದ್ಯಮಿ ಪ್ರದೀಪ್‌, ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಸೀಟಿಗಾಗಿ ಹುಡುಕಾಡುತ್ತಿದ್ದರು. ಈ ವೇಳೆ ಕಳೆದ 8 ವರ್ಷಗಳಿಂದ ತನಗೆ ಪರಿಚಯವಿದ್ದ ಸ್ನೇಹಿತ ವಿರೂಪಾಕ್ಷ ಬಳಿ ತನ್ನ ಮಗಳ ಉನ್ನತ ವ್ಯಾಸಂಗದ ಬಗ್ಗೆ ಹೇಳಿಕೊಂಡಿದ್ದರು.

ಈ ವೇಳೆ ಆರೋಪಿ ವಿರೂಪಾಕ್ಷ, ನನ್ನ ಸ್ನೇಹಿತ ಮಂಜಪ್ಪ ಎಂಬಾತ ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಸದಸ್ಯರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾನೆ. ಆತನನ್ನು ಸಂಪರ್ಕಿಸಿದರೆ ನಿಮ್ಮ ಮಗಳಿಗೆ ಸೀಟು ಕೊಡಿಸುತ್ತಾನೆ ಎಂದು ಉದ್ಯಮಿ ಪ್ರದೀಪ್‌ ಭಾಸ್ಕರ್‌ ಅವರನ್ನು ನಂಬಿಸಿದ್ದಾನೆ. ಅದರಂತೆ 2023ರ ಜೂ.21ರಂದು ಈ ಇಬ್ಬರು ಆರೋಪಿಗಳು ಉದ್ಯಮಿ ಪ್ರದೀಪ್‌ ಭಾಸ್ಕರ್‌ ಅವರನ್ನು ಬ್ಯಾಡರಹಳ್ಳಿಯ ತಮ್ಮ ಪರಿಚಿತರೊಬ್ಬರ ಕಚೇರಿಗೆ ಕರೆಸಿಕೊಂಡಿದ್ದಾರೆ.

1.30 ಕೋಟಿ ರು.ಗೆ ಡೀಲ್‌ ಕುದುರಿಸಿದರು:

ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜೊಂದರಲ್ಲಿ ನಿಮ್ಮ ಮಗಳಿಗೆ ಮ್ಯಾನೇಜ್ಮೆಂಟ್‌ ಸೀಟು ಕೊಡಿಸುತ್ತೇನೆ ಎಂದು ಹೇಳಿ 1.30 ಕೋಟಿ ರು.ಗೆ ವ್ಯವಹಾರ ಕುದುರಿಸಿದ್ದಾರೆ. ಇವರ ಮಾತು ನಂಬಿದ ಉದ್ಯಮಿ ಪ್ರದೀಪ್‌ ಭಾಸ್ಕರ್‌, ಆರೋಪಿ ಮಂಜಪ್ಪ ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ವಿವಿಧ ಹಂತಗಳಲ್ಲಿ 1.31 ಕೋಟಿ ರು. ವರ್ಗಾಯಿಸಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಆರೋಪಿಗಳ ಸೂಚನೆ ಮೇರೆಗೆ ಮತ್ತೆ 26 ಲಕ್ಷ ರು. ಹಣ ವರ್ಗಾಯಿಸಿದ್ದಾರೆ. ಹೀಗೆ ಈ ಇಬ್ಬರು ಆರೋಪಿಗಳು ಉದ್ಯಮಿಯಿಂದ ಒಟ್ಟು 1.57 ಕೋಟಿ ರು. ಪಡೆದುಕೊಂಡಿದ್ದಾರೆ.

ಷೇರಿನಲ್ಲಿ ಹೂಡಿಕೆ ಮಾಡಿ ದುಪ್ಪಟ್ಟು ಹಣದ ಭರವಸೆ!

ಉದ್ಯಮಿ ಆರೋಪಿಗಳಿಗೆ ಹಣ ನೀಡುವಾಗ, ಒಂದು ವೇಳೆ ವೈದ್ಯಕೀಯ ಸೀಟು ಕೊಡಿಸಲು ಆಗದಿದ್ದರೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಆಗ ಆರೋಪಿ ಮಂಜಪ್ಪ, ನಾನು ಷೇರು ಮಾರುಕಟ್ಟೆ ಏಜೆಂಟ್‌ ಆಗಿದ್ದೇನೆ. ನೀವು ಕೊಡುವ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಿ ದುಪ್ಪಟ್ಟು ಮಾಡಿ ವಾಪಾಸ್‌ ನೀಡುವುದಾಗಿ ಭರವಸೆ ನೀಡಿದ್ದ. ಬಳಿಕ ಉದ್ಯಮಿ ಮಗಳಿಗೆ ಸೀಟು ಕೊಡಿಸಲಿಲ್ಲ. 

ಹಣವನ್ನೂ ವಾಪಾಸ್‌ ನೀಡಲಿಲ್ಲ. ಉದ್ಯಮಿ ಹಣ ವಾಪಾಸ್‌ ಕೇಳಿದಾಗ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಉದ್ಯಮಿ ಪ್ರದೀಪ್‌ ಅನ್ಯ ಮಾರ್ಗ ಇಲ್ಲದೆ ತನಗಾದ ವಂಚನೆ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article