ಮಧ್ಯಪ್ರದೇಶ ವಕ್ಫ್‌ ಮಂಡಳಿಗೆ ಇಬ್ಬರು ಹಿಂದೂಗಳ ನೇಮಕ

Published : Jul 07, 2026, 01:27 PM IST
Waqf Board

ಸಾರಾಂಶ

ಮಹತ್ವ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ರಾಜ್ಯ ವಕ್ಫ್ ಮಂಡಳಿಯನ್ನು ಪುನರ್‌ ರಚಿಸಲಾಗಿದ್ದು, ಸಮಿತಿಯಲ್ಲಿ ಇಬ್ಬರು ಹಿಂದೂಗಳಿಗೆ ಸ್ಥಾನ ಕಲ್ಪಿಸಲಾಗಿದೆ. 2025ರ ವಕ್ಫ್‌ ತಿದ್ದುಪಡಿ ಕಾಯ್ದೆ ಅನ್ವಯ ಮುಸ್ಲಿಮೇತರರಿಗೂ ವಕ್ಫ್ ಮಂಡಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

 ಇಂದೋರ್‌: ಮಹತ್ವ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ರಾಜ್ಯ ವಕ್ಫ್ ಮಂಡಳಿಯನ್ನು ಪುನರ್‌ ರಚಿಸಲಾಗಿದ್ದು, ಸಮಿತಿಯಲ್ಲಿ ಇಬ್ಬರು ಹಿಂದೂಗಳಿಗೆ ಸ್ಥಾನ ಕಲ್ಪಿಸಲಾಗಿದೆ. 2025ರ ವಕ್ಫ್‌ ತಿದ್ದುಪಡಿ ಕಾಯ್ದೆ ಅನ್ವಯ ಮುಸ್ಲಿಮೇತರರಿಗೂ ವಕ್ಫ್ ಮಂಡಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ವಕ್ಪ್‌ ಮಂಡಳಿಯಲ್ಲಿ ಹಿಂದೂಗಳಿಗೂ ಸ್ಥಾನ ಕಲ್ಪಿಸಿದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ.

ಈ ನಡುವೆ ಸರ್ಕಾರದ ಕ್ರಮವನ್ನು ಬಿಜೆಪಿ ಸ್ವಾಗತಿಸಿದ್ದರೆ, ಕಾಂಗ್ರೆಸ್‌ ವಿರೋಧ ಮಾಡಿದ್ದು ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.

ಮುಖ್ಯಮಂತ್ರಿ ಮೋಹನ್‌ ಯಾದವ್‌ ನೇತೃತ್ವದ ಬಿಜೆಪಿ ಸರ್ಕಾರ, ಪುನರ್‌ರಚಿಸಿದ ವಕ್ಫ್‌ ಮಂಡಳಿ ಕುರಿತು ಸೋಮವಾರ ಅಧಿಸೂಚನೆ ಹೊರಡಿಸಿದೆ. ಅದರನ್ವಯ 10 ಸದಸ್ಯರ ಮಂಡಳಿಗೆ ಸಚಿವ ಸನ್ವರ್‌ ಪಟೇಲ್‌ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ ಇಂದೋರ್‌ನ ಮನೋನ್‌ ಮಲ್ಪಾನಿ ಮತ್ತು ರಾಜೋಗಢದ ಅನಿಮೇಶ್‌ ಭಾರ್ಗವ್‌ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಇನ್ನು 2023ರಲ್ಲಿ ಹಿಂದಿನ ಸಮಿತಿಗೆ ನೇಮಕ ಆಗಿದ್ದ ಬಿಜೆಪಿ ನಾಯಕ ನಜ್ಮಾ ಹೆಫ್ತುಲ್ಲಾ ಅವರನ್ನೂ 2028ರವರೆಗೆ ಹುದ್ದೆಯಲ್ಲಿ ಮುಂದುವರೆಸಲು ನಿರ್ಧರಿಸಲಾಗಿದೆ. ಉಳಿದಂತೆ ಹಿಂದುಳಿತ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ಆಯುಕ್ತರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ವಕ್ಫ್‌ ಕಾಯ್ದೆ 1995 (ತಿದ್ದುಪಡಿ- 2025)ರ ಸೆಕ್ಷನ್‌ 13 (1) ಮತ್ತು ಸೆಕ್ಷನ್‌ 14ರ ಅನ್ವಯ ವಕ್ಫ್‌ ಮಂಡಳಿಯನ್ನು ಪುನರ್ ರಚಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಆಕ್ಷೇಪ:

ಈ ನಡುವೆ ವಕ್ಫ್‌ ಮಂಡಳಿಗೆ ಹಿಂದೂಗಳ ನೇಮಕ ಸೂಕ್ತವಾದುದಲ್ಲ ಎಂದಿರುವ ಕಾಂಗ್ರೆಸ್‌ ನಾಯಕರು, ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಶಾಸಕ ಆರಿಫ್‌ ಮಸೂದ್‌, ವಕ್ಫ್‌ ತಿದ್ದುಪಡಿ ಮಸೂದೆ ವಿಷಯ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಕೋರ್ಟ್‌ ಇನ್ನೂ ತನ್ನ ತೀರ್ಪು ನೀಡಿಲ್ಲ. ಹೀಗಾಗಿ ಈ ಹಂತದಲ್ಲಿ ಹಿಂದೂಗಳ ನೇಮಕ ಸರಿಯಲ್ಲ. ಇದನ್ನು ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್‌ ಮೆಟ್ಟಿಲೇರಲಿದ್ದೇವೆ ಎಂದು ಹೇಳಿದ್ದಾರೆ.

ಈ ನಡುವೆ ಸರ್ಕಾರದ ಕ್ರಮವನ್ನು ಬಿಜೆಪಿ ಸ್ವಾಗತಿಸಿದೆ. ಇಲ್ಲಿ ಹಿಂದೂಗಳ ನೇಮಕವನ್ನು ಕೇವಲ ಧರ್ಮದ ಆಧಾರದಲ್ಲಿ ನೋಡಬಾರದು. ವಕ್ಫ್‌ ಮಂಡಳಿ ಕೇವಲ ಮಸೀದಿಗಳಿಗೆ ಸೀಮಿತವಲ್ಲ. ಅದರ ವ್ಯಾಪ್ತಿ ಇನ್ನೂ ವಿಸ್ತಾರವಿದೆ. ವಕ್ಫ್‌ ಜಾಗ ಯಾವುದೇ ಮುಲ್ಲಾ ಅಥವಾ ಮುಸ್ಲಿಂ ಧಾರ್ಮಿಕ ನಾಯಕರಿಗೆ ಸೇರಿದ್ದಲ್ಲ. ಅದು ಮುಸ್ಲಿಂ ಸಮುದಾಯದ ಬಡವರಿಗೆ ಸೇರಿದ್ದು. ಅವರ ಕಲ್ಯಾಣಕ್ಕಾಗಿ ಮಂಡಳಿಯ ಹಿಂದೂ ಸದಸ್ಯರು ಕೂಡಾ ಶ್ರಮಿಸಲಿದ್ದಾರೆ ಎಂದು ಬಿಜೆಪಿ ಶಾಸಕ ರಾಮೇಶ್ವರ್‌ ಶರ್ಮಾ ಹೇಳಿದ್ದಾರೆ.

ಕೆಲಸ ಏನು?:

ರಾಜ್ಯದ ವ್ಯಾಪ್ತಿಯಲ್ಲಿನ ವಕ್ಫ್ ಆಸ್ತಿಗಳ ನಿರ್ವಹಣೆ, ರಕ್ಷಣೆ ಮತ್ತು ಆಸ್ತಿಗಳ ದಾಖಲೆ ಸಂರಕ್ಷಣೆ, ವಕ್ಫ್‌ ಆಸ್ತಿಗಳಿಂದ ಸಂಗ್ರಹವಾಗುವ ಆದಾಯದ ಮೇಲೆ ನಿಗಾ ಮತ್ತು ಬಳಕೆ, ವಕ್ಫ್‌ ಆಸ್ತಿ ಕೇವಲ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕೆಲಸಗಳಿಗೆ ಮಾತ್ರ ಬಳಕೆ ಆಗುವಂತೆ ನೋಡಿಕೊಳ್ಳುವ ಹೊಣೆಯನ್ನು ವಕ್ಫ್‌ ಮಂಡಳಿ ಹೊಂದಿರುತ್ತದೆ.

ತಿದ್ದುಪಡಿ ಕಾಯ್ದೆ:

2025ರಲ್ಲಿ ಸಂಸತ್ತಿನ ಅನುಮೋದನೆ ಪಡೆದು, ರಾಷ್ಟ್ರಪತಿಗಳ ಸಹಿ ಪಡೆದು ಜಾರಿಗೆ ಬಂದಿದ್ದ ವಕ್ಫ್‌ ತಿದ್ದುಪಡಿ ಕಾಯ್ದೆ ಅನ್ವಯ ವಕ್ಫ್‌ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ವ್ಯಕ್ತಿಗಳ ನೇಮಕಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಕೆಲ ಭಾಗಗಳಿಗೆ ತಡೆ:

ಈ ಮಸೂದೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಹಲವು ಮುಸ್ಲಿಂ ಸಂಘಟನೆಗಳು ಪ್ರಶ್ನಿಸಿ ಅರ್ಜಿ ಸಲ್ಲಿಸಿವೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಡೀ ಮಸೂದೆಗೆ ತಡೆ ನೀಡಲು ನಿರಾಕರಿಸಿತ್ತು. ಆದರೆ ಕೇಂದ್ರ ವಕ್ಫ್‌ ಮಂಡಳಿಯ 22 ಸದಸ್ಯರ ಪೈಕಿ 4 ಕ್ಕಿಂತ ಹೆಚ್ಚು ಮುಸ್ಲಿಮೇತರರು ಮತ್ತು ರಾಜ್ಯ ವಕ್ಫ್‌ ಮಂಡಳಿಯ 11 ಸದಸ್ಯರ ಪೈಕಿ ಮೂವರಿಗೆ ಹೆಚ್ಚು ಮುಸ್ಲಿಮೇತರ ಸದಸ್ಯರು ಇರಕೂಡದು ಎಂದು ಮಧ್ಯಂತರ ಮಿತಿ ಹೇರಿತ್ತು. ಜೊತೆಗೆ ವಕ್ಫ್‌ಗೆ ಆಸ್ತಿ ದಾನ ಮಾಡುವವರು ಅದಕ್ಕೂ ಮೊದಲು ಕನಿಷ್ಠ 5 ವರ್ಷ ಇಸ್ಲಾಂ ಧರ್ಮ ಪಾಲಿಸುತ್ತಿರಬೇಕು ಎಂಬ ಅಂಶಗಳಿಗೆ ತಡೆ ನೀಡಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರಾಮಚರಿತ ಮಾನಸ ಸೇರಿ ಅಮೂಲ್ಯ ಕಾಣಿಕೆ ಪ್ರದರ್ಶನ
ಇಂಡೋನೇಷ್ಯಾಗೆ ಮೋದಿ : ಇಂದು ಬ್ರಹ್ಮೋಸ್‌ ಡೀಲ್‌?