ಜಕಾರ್ತ: 6 ದಿನ, 3 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಭಾಗವಾಗಿ ಸೋಮವಾರ ಇಂಡೋನೇಷ್ಯಾಗೆ ಬಂದಿಳಿದರು. ಈ ವೇಳೆ ಅವರ ವಿಮಾನಕ್ಕೆ ಎಫ್‌ 16, ಸುಖೋಯ್‌-30 ಯುದ್ಧ ವಿಮಾನಗಳು ಬೆಂಗಾವಲು ನೀಡಿದವು.

ಭಾರತದ ಆ್ಯಕ್ಟ್‌ ಈಸ್ಟ್‌ ನೀತಿ

ಭಾರತದ ಆ್ಯಕ್ಟ್‌ ಈಸ್ಟ್‌ ನೀತಿ, ಮಹಾಸಾಗರ ಮತ್ತು ಮುಕ್ತ ವ್ಯಾಪಾರಕ್ಕೆ ಒತ್ತು ನೀಡುವ ದೃಷ್ಟಿಯಿಂದ ವಿದೇಶಿ ಪ್ರವಾಸ ಕೈಗೊಂಡ ಪ್ರಧಾನಿ ಮೊದಲು ಇಂಡೋನೇಷ್ಯಾಗೆ ಆಗಮಿಸಿದರು. ಈ ವೇಳೆ ಸ್ವತಃ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಂತೋ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿ ಅವರನ್ನು ಸ್ವಾಗತಿಸಿದರು. 2018ರಲ್ಲಿ ಎರಡು ದೇಶಗಳ ನಡುವೆ ನಡೆದ ಕಾರ್ಯತಂತ್ರ ಪಾಲುದಾರಿಕೆ ಬಳಿಕ ಮೋದಿಯವರು ನೀಡಿದ ಮೊದಲ ಭೇಟಿ ಇದಾಗಿದೆ.

ಫೋಟೋಗಳನ್ನು ಪ್ರಧಾನಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ

ಇದರ ಫೋಟೋಗಳನ್ನು ಪ್ರಧಾನಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು, ‘ ಈ ಭೇಟಿ ಮೂಲಕ ಉಭಯ ದೇಶಗಳ ನಡುವಿನ ಪಾಲುದಾರಿಗೆ ಮತ್ತಷ್ಟು ವೇಗ ಸಿಗಲಿದೆ’ ಎಂದಿದ್ದಾರೆ. ಮಂಗಳವಾರ ಉಭಯ ನಾಯಕರು ಮಹತ್ವದ ಮಾತುಕತೆ ನಡೆಸಲಿದ್ದು, ಎರಡು ದೇಶಗಳ ನಡುವೆ ಬ್ರಹ್ಮೋಸ್‌ ಕ್ಷಿಪಣಿ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ.