ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಅಯೋಧ್ಯೆಯಲ್ಲಿ ನಡೆದಿರುವ ಧರ್ಮ ವಿರೋಧಿ ಘಟನೆಯಿಂದ ದೇಶದ ಆಸ್ತಿಕ ಜನತೆಯ ಭಾವನೆಗೇ ಧಕ್ಕೆಯಾಗಿದೆ. ಕೋಟ್ಯಂತರ ರು. ಹಣದ ಅಕ್ರಮದಲ್ಲಿ ಪಾಲ್ಗೊಂಡವರಿಗೆ ಶಿಕ್ಷೆಯಾಗಬೇಕು. ಈ ಪ್ರಕರಣದ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳೂ ನೈತಿಕತೆಯ ಆಧಾರದಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಿದೆ ಎಂದು ಕಾಂಗ್ರೆಸ್ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದಿರುವ ಹಣ ಅಕ್ರಮ ಪ್ರಕರಣ ಖಂಡಿಸಿ, ಶುಕ್ರವಾರ ಪಟ್ಟಣದ ಕೋದಂಡರಾಮ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆ ನಂತರ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಶ್ರೀ ರಾಮ ಮಂದಿರದ ಟ್ರಸ್ಟ್ ರಚನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಯೋಗಿಯವರೂ ನಿರ್ಣಾಯಕರು. ಈ ಟ್ರಸ್ಟಿನ ಪ್ರಮುಖರನ್ನು ಈವರೆಗೂ ಪ್ರಶ್ನೆ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಹಣ ಹೊಡೆಯುವ ಕಲೆ ಬಿಜೆಪಿಗರಿಗೇ ಮಾತ್ರ ತಿಳಿದಿರುವುದು ಎಂದೂ ಛೇಡಿಸಿದರು.ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು:
ಭೂಮಂಡಲದ ಒಡೆಯನಾಗಿರು ಶ್ರೀ ರಾಮ ಈ ದೇಶದ ಅಸ್ಮಿತೆ. ರಾಮನ ಹೆಸರಿನಲ್ಲಿ ಇಟ್ಟಿಗೆ ಸಂಗ್ರಹದಿಂದ ಆರಂಭಗೊಂಡಿರುವ ಲೂಟಿ ಮುಂದುವರೆದಿದೆ. ಈ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅಂತವರಿಗೆ ಶಿಕ್ಷೆಯಾಗಬೇಕು. ರಾಮನ ಹೆಸರಲ್ಲಿ ಗೆದ್ದು ರಾಜಕೀಯ ಸ್ಥಾನಮಾನ ಗಳಿಸಿದವರು ಭ್ರಷ್ಟಾಚಾರದ ಮೂಲಕ ಗಳಿಸಿದ ಸಂಪತ್ತನ್ನು ರಾಮನಿಗೇ ಅರ್ಪಿಸುವಂತಾಗಬೇಕು. ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದೂ ಆಗ್ರಹಿಸಿದರು.
ರಾಮಮಂದಿರ ದೇಶದ ಆಸ್ತಿಯಾಗಿದ್ದು ಪ್ರತಿಯೊಬ್ಬ ಪ್ರಜೆಗೂ ಇದನ್ನು ಪ್ರಶ್ನಿಸುವ ಹಕ್ಕಿದೆ. ಈ ವಿಚಾರ ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪ್ರಧಾನಿಯವರ ಹೇಳಿಕೆಯೇ ಅನುಮಾನಕ್ಕೆ ಕಾರಣವಾಗಿದೆ. ಮುಖ್ಯವಾಗಿ ಟ್ರಸ್ಟಿನ ಪ್ರಮುಖರನ್ನೇ ಈವರೆಗೆ ಪ್ರಶ್ನೆ ಮಾಡದಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ. ಬಿಜೆಪಿ ನೇತೃತ್ವದಲ್ಲಿ ನಡೆಯುವ ತನಿಖೆಗಳು ಪಾರದರ್ಶಕವಾಗುವ ಸಾಧ್ಯತೆಯೇ ಇಲ್ಲ ಎಂದರು.
ಅಯೋಧ್ಯೆ ಹಗರಣದ ಹಿಂದಿನ ಮಾಸ್ಟರ್ ಮೈಂಡ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ್ದೇ ಆಗಿರಬೇಕು. ಇಲ್ಲವಾದಲ್ಲಿ ಈ ಬಗ್ಗೆ ಆ ಸಂಘಟನೆಯ ಪ್ರಮುಖರು ಯಾಕೆ ಧ್ವನಿ ಎತ್ತುತ್ತಿಲ್ಲ? ಶ್ರೀರಾಮನ ಪ್ರಾಣ ಪ್ರತಿಷ್ಠೆ ಹಿಂದೂ ಧರ್ಮದ ಪ್ರಕಾರ ಶಾಸ್ತ್ರೋಕ್ತವಾಗಿ ನಡೆದಿಲ್ಲ? ಒಬ್ಬ ರಾಜಕೀಯ ಪಕ್ಷದವರಾಗಿ ಈ ವಿಧಿಯಲ್ಲಿ ಪಾಲ್ಗೊಂಡಿರುವುದೂ ಶಾಸ್ತ್ರಕ್ಕೆ ವಿರೋಧವಾಗಿದೆ ಎಂದೂ ಟೀಕಿಸಿದರು.ಮುಂದಿನ ಚುನಾವಣೆಗೆ ಸಂಬಂಧಿಸಿ ವಾಗ್ದಾನ ನೀಡಿಲ್ಲ:
ಕಾಂಗ್ರೆಸ್ ಪ್ರಮುಖರಾದ ಜಿ.ಎಸ್. ನಾರಾಯಣ ರಾವ್, ಕೆಸ್ತೂರು ಮಂಜುನಾಥ್, ಬಿ.ಕೆ.ವಾದಿರಾಜ್, ವಿನಾಯಕ ಹೊದಲ, ಪುಟ್ಟೋಡ್ಲು ರಾಘವೇಂದ್ರ, ಬಿ.ಆರ್. ರಾಘವೇಂದ್ರ ಶೆಟ್ಟಿ, ಕೇಳೂರು ಮಿತ್ರಾ, ಅಮರನಾಥ ಶೆಟ್ಟಿ, ಆದರ್ಶ ಹುಂಚದಕಟ್ಟೆ, ದಿನೇಶ್ ಹುಲ್ಲತ್ತಿ, ಕುಡುಮಲ್ಲಿಗೆ ರಮೇಶ್ ಶೆಟ್ಟಿ ಇತರರಿದ್ದರು.ಮುಂಬರುವ ಚುನಾವಣೆಗೆ ತಮ್ಮ ಸ್ಪರ್ಧೆ ಎಂಬ ಖಚಿತ ಎಂಬುದನ್ನು ಪರೋಕ್ಷವಾಗಿ ಪ್ರಕಟಿಸಿದ ಕಿಮ್ಮನೆ, ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಾನು ಯಾರಿಗೂ ಆಶ್ವಾಸನೆ ನೀಡಿಲ್ಲ. ಪಕ್ಷದ ತೀರ್ಮಾನದ ನಂತರ ಯೋಚಿಸುತ್ತೇನೆ. ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸುತ್ತೇನೆ. ಕಾಂಗ್ರೆಸ್ ಸೇರಿದ ನಂತರದಲ್ಲಿ ನಿರಂತರ ಹೋರಾಟದ ಮೂಲಕ ಸ್ವಂತ ಹಣದಿಂದಲೇ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಿದ್ದೇನೆ.- ಕಿಮ್ಮನೆ ರತ್ನಾಕರ್, ಮಾಜಿ ಸಚಿವ.