‘ರಾಮನಗರ ಸೇರಿ ರಾಜ್ಯದ ವಿವಿಧೆಡೆ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಗಾಳಿಗೆ ತೂರಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರವು ಆಡಳಿತ ಯಂತ್ರ ಸಂಪೂರ್ಣ ದುರುಪಯೋಗ ಮಾಡಿಕೊಳ್ಳುತ್ತಿದೆ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

ಬೆಂಗಳೂರು: ‘ರಾಮನಗರ ಸೇರಿ ರಾಜ್ಯದ ವಿವಿಧೆಡೆ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಗಾಳಿಗೆ ತೂರಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರವು ಆಡಳಿತ ಯಂತ್ರ ಸಂಪೂರ್ಣ ದುರುಪಯೋಗ ಮಾಡಿಕೊಳ್ಳುತ್ತಿದೆ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯುಕ್ತರಿಗೆ ಖುದ್ದು ನಾನೇ ದೂರು ನೀಡುತ್ತೇನೆ. ಈ ಎಸ್ಐಆರ್‌ ಅಕ್ರಮದ ಮೂಲ ಸೂತ್ರಧಾರಿ ಈ ರಾಜ್ಯದ ಮುಖ್ಯಮಂತ್ರಿಯೇ ಆಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ವಿರುದ್ಧ ಆರೋಪಿಸಿದರು.

ಕೇಂದ್ರ ಚು.ಆಯೋಗ ಮಧ್ಯಪ್ರವೇಶಕ್ಕೆ ಆಗ್ರಹ:

ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದೆ. ಅವರನ್ನು ಹೆದರಿಸಿ ಬೆದರಿಸಿ ತನಗೆ ಬೇಕಾದ ಹಾಗೆ ಎಸ್‌ಐಆರ್‌ ಮಾಡಿಸುತ್ತಿದೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗವು ತಕ್ಷಣ ಮಧ್ಯಪ್ರವೇಶಿಸಬೇಕು. ರಾಜ್ಯದಲ್ಲಿ ಈವರೆಗೆ ಆಗಿರುವ ಪರಿಷ್ಕರಣೆ ಕೈಬಿಟ್ಟು ಹೊಸದಾಗಿ ಎಸ್ಐಆರ್‌ ನಡೆಸಬೇಕು. ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮತ ಪಟ್ಟಿ ತಿರುಚುವುದೇ ಪ್ರಜಾ ಸೇವೆಯಾ?:

ರಾಮನಗರ, ಬೆಂಗಳೂರು ನಗರ ಮಾತ್ರವಲ್ಲದೆ, ಕುಣಿಗಲ್, ಪಾವಗಡ, ಅರಕಲಗೂಡು, ಇಂಡಿ ಮುಂತಾದ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಎಸ್‌ಐಆರ್‌ ಆಕ್ರಮಗಳನ್ನು ನಡೆಸುತ್ತಿದೆ. ರಾಜ್ಯದಲ್ಲಿ ಎಸ್ಐಆರ್‌ ಹಳ್ಳ ಹಿಡಿಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೂಲಸೂತ್ರಧಾರಿ. ಇವರಿಗೆ ಮಾನ-ಮರ್ಯಾದೆ ಇಲ್ಲ. ಇಷ್ಟೆಲ್ಲಾ ಅಕ್ರಮಗಳು ಕಣ್ಣಿಗೆ ಕಾಣುತ್ತಿದ್ದರೂ ಪ್ರಜಾಸೇವಾ ಇಲಾಖೆ ಮಾಡಿದ್ದಾರೆ. ಮತದಾರರ ಪಟ್ಟಿ ತಿರುಚುವುದೇ ಪ್ರಜಾ ಸೇವೆಯಾ ಎಂದು ಕುಮಾರಸ್ವಾಮಿ ತೀಕ್ಷ್ಮವಾಗಿ ಪ್ರಶ್ನಿಸಿದರು.

ಕೇಂದ್ರ ಚುನಾವಣಾ ಆಯುಕ್ತರಿಗೆ ಖದ್ದು ದೂರು : 

ರಾಮನಗರದ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ನಗರದ ಜಿಲ್ಲಾಧಿಕಾರಿ ವಿರುದ್ಧ ಕಠಿಣ ಕ್ರಮ ಆಗಬೇಕು. ನಾವು ಜಿಲ್ಲಾಧಿಕಾರಿಗಳು, ನಮ್ಮ ಜವಾಬ್ದಾರಿಗಳೇನು ಎಂಬ ಕನಿಷ್ಠ ಪರಿಜ್ಞಾನ ಇವರಿಗೆ ಇದೆಯಾ? ನಾನೇ ಸ್ವತಃ ಕೇಂದ್ರದ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ನಡೆದಿರುವ ಎಲ್ಲಾ ಅಕ್ರಮಗಳನ್ನು ಅವರ ಗಮನಕ್ಕೆ ತರುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ರಾಜ್ಯದ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಸ್ಥಳೀಯ ಅಧಿಕಾರಿಗಳನ್ನು ಹೊರಗಿಟ್ಟು ಹೊರಗಿನ ದಕ್ಷ ಅಧಿಕಾರಿಗಳನ್ನು ನಿಯೋಜಿಸಬೇಕು. ಇಲ್ಲವಾದರೆ, ಕಾಂಗ್ರೆಸ್ ಸರ್ಕಾರ ಮನಸೋ ಇಚ್ಛೆ ಈ ಎಸ್‌ಐಆರ್‌ ಪ್ರಕ್ರಿಯೆ ದುರ್ಬಳಕೆ ಮಾಡಿಕೊಳ್ಳಲಿದೆ.

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ 

 ಅಕ್ರಮ ಮತದಾರರ ಪಟ್ಟಿ ಸಿದ್ಧತೆ:

ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಕ್ರಮ ಮತದಾರರ ಪಟ್ಟಿ ತಯಾರಿಸಲು ಹೊರಟಿದೆ. ಮುಖ್ಯಮಂತ್ರಿಗಳ ಮೂಗಿನ ನೇರದಲ್ಲಿ ಅಧಿಕಾರಿಗಳು ಅಕ್ರಮ ಮತದಾರರನ್ನು ಸೇರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಅಲ್ಪಸಂಖ್ಯಾತ ನಾಯಕರು ಅಕ್ರಮವಾಗಿ ಬಾಂಗ್ಲಾದೇಶಿಯರನ್ನು ರಾಜ್ಯಕ್ಕೆ ಕರೆತಂದಿದ್ದಾರೆ. ಅವರನ್ನು ಕರ್ನಾಟಕದ ವಾಸಿಗಳಾಗಿ ಮಾಡಲು ಮತ್ತು ಮತದಾರರನ್ನಾಗಿಸಲು ಷಡ್ಯಂತ್ರ ಮಾಡಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳ ಚುನಾವಣೆ ಬಳಿಕ ರಾಜ್ಯಕ್ಕೆ ಬಂದು ವಿವಿಧ ಭಾಗದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಮತಪಟ್ಟಿಗೆ ಸೇರಿಸಿ ಸಕ್ರಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಸೀದಿಗಳು, ಶಾದಿ ಮಹಲ್‍ಗಳು, ಕಲ್ಯಾಣ ಮಂಟಪಗಳಲ್ಲಿ ಗಣತಿ ನಮೂನೆ ಭರ್ತಿ ಮಾಡಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಅಕ್ರಮ ವಲಸಿಗರಿಗೆ ವಿಳಾಸ ಇಲ್ಲ. ಮನೆ ಸಂಖ್ಯೆ ಇಲ್ಲ. ಆದರೂ ಕಾನೂನು ಉಲ್ಲಂಘಿಸಿ ಅವರ ಹೆಸರನ್ನು ಸೇರಿಸಲಾಗುತ್ತಿದೆ. ಈ ಗಣತಿ ನಮೂನೆಗಳನ್ನು ಬಿಎಲ್‍ಒಗಳು ಖುದ್ದಾಗಿ ಮನೆಗಳಿಗೆ ಹೋಗಿ ಕೊಡಬೇಕು ಎಂಬ ನಿಯಮ ಇದೆ. ಆದರೆ ಎಲ್ಲ ನಿಯಮ ಗಾಳಿಗೆ ತೂರಿ ಬಿಎಲ್‍ಒಗಳು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ರಾಜ್ಯಾದ್ಯಂತ ಎಸ್‌ಐಆರ್‌ ಅಕ್ರಮಗಳ ಸುರಿಮಳೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವೇಳೆ ಗುರುವಾರ ರಾಮನಗರದಲ್ಲಿ ಅಕ್ರಮ ವರದಿಯಾಗಿತ್ತು. ಶುಕ್ರವಾರ ಶಿಗ್ಗಾಂವಿ-ಸವಣೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಇತರೆಡೆ ಅಕ್ರಮ ನಡೆದ ವರದಿಯಾಗಿದೆ. ಹೀಗೆ ರಾಜ್ಯಾದ್ಯಂತ ಎಸ್‌ಐಆರ್‌ ಅಕ್ರಮಗಳ ಸುರಿಮಳೆಯಾಗುತ್ತಿದೆ. ಬೃಹತ್ ಹಗರಣವೇ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಸಚಿವರು, ರಾಜ್ಯದಲ್ಲಿ ನಡೆಯುತ್ತಿರುವ ಈ ರೀತಿಯ ಎಸ್‌ಐಆರ್‌ ಪ್ರಕ್ರಿಯೆ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ನಿಯಮಗಳನ್ನೆಲ್ಲ ಗಾಳಿಗೆ ತೂರಿ ಮನೆ, ಮಸೀದಿಯಲ್ಲಿ ಕುಳಿತು ಎನ್ಯೂಮರೇಷನ್ ಫಾರ್ಮ್‌ ಭರ್ತಿ ಮಾಡುತ್ತಿರುವ ಬಗ್ಗೆ, ಅದನ್ನು ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಳ್ಳುತ್ತಿರುವ ಅಕ್ರಮಗಳ ಬಗ್ಗೆ ರಾಜ್ಯದ ಅನೇಕ ಕಡೆಗಳಿಂದ ಫೋನ್‌ ಕರೆಗಳೂ ಬರುತ್ತಿವೆ ಎಂದಿದ್ದಾರೆ.

ಕರ್ನಾಟಕದಲ್ಲಿ ಎಸ್‌ಐಆರ್‌ ಹೆಸರಲ್ಲಿ ಬೃಹತ್ ಹಗರಣವೇ ನಡೆಯುತ್ತಿದೆ. ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯನ್ನು ತಮಗೆ ಬೇಕಾದಂತೆ ಸಿದ್ಧಪಡಿಸಿಕೊಳ್ಳಲು ರಾಜ್ಯ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದಂತಿದೆ. ಈ ಹಗರಣದ ಹಿಂದೆ ಯಾರ ಹಿತಾಸಕ್ತಿ ಅಡಗಿದೆ ಎಂಬುದನ್ನು ಬಯಲಿಗೆಳೆಯಲು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಇದರ ಹಿಂದಿರುವ ರಾಜಕೀಯ ಕೈಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಜೋಶಿ ಒತ್ತಾಯಿಸಿದ್ದಾರೆ.