ದುಬೈ: ಮರುಭೂಮಿ ನೆಲ ಸೌದಿ ಅರೇಬಿಯಾದಲ್ಲಿ ಹಿಮಪಾತ, ವರುಣನ ಅಬ್ಬರದ ಬೆನ್ನಲ್ಲೇ ದುಬೈ, ಅಬುದಾಭಿಯಲ್ಲಿಯೂ ಗುರುವಾರದಿಂದ ಭಾರೀ ಮಳೆ ಸುರಿದಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ದುಬೈ, ಅಬುದಾಭಿಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ಸ್ಥಳೀಯಾಡಳಿತ ಜನರಿಗೆ ಎಚ್ಚರಿಕೆ ನೀಡಿದೆ.
ದುಬೈನಲ್ಲಿ ಗುರುವಾರ ರಾತ್ರಿಯಿಡೀ ಮಳೆ ಸುರಿದಿದ್ದು, ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸನಿರ್ವಹಿಸುವಂತೆ ಆಡಳಿತ ಸೂಚಿಸಿದೆ. ಮತ್ತೊಂದೆಡೆ ಅಬುದಾಭಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ಸಲಹೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಡಲತೀರಗಳು, ಉದ್ಯಾನವನಗಳು ಮತ್ತು ಪ್ರವಾಸಿ ಸ್ಥಳಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಭಾರೀ ಮಳೆ, ಬಿರುಗಾಳಿಯ ಪರಿಣಾಮ ಹಲವು ವಿಮಾನಗಳ ಸಂಚಾರದಲ್ಲೂ ವ್ಯತ್ಯಯವಾಗಿದೆ.ಕೊಲ್ಲಿ ರಾಷ್ಟ್ರದಲ್ಲಿ ಈ ರೀತಿಯ ಹವಾಮಾನ ವೈಪರೀತ್ಯ ಹೊಸತೇನಲ್ಲ. ಮರಭೂಮಿಯಲ್ಲಿ ಅಪರೂಪಕ್ಕೆ ಮಾತ್ರ ಮಳೆಯಾಗುವುದರಿಂದ ಅದರ ಪರಿಣಾಮ ತುಸು ಹೆಚ್ಚು. ಕಳೆದ ವರ್ಷವೂ ದುಬೈ, ಅಬುಧಾಬಿಯಲ್ಲಿ ಇದೇ ರೀತಿ ಮಳೆ ಬಿದ್ದು, ಹಲವು ನಗರಗಳು ಜಲಾವೃತವಾಗಿದ್ದವು.
ನವದೆಹಲಿ: ಯೆಸ್‌ಬ್ಯಾಂಕ್‌ಗೆ ಬಹುಕೋಟಿ ರು.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯಡಿ ಜಾರಿ ನಿರ್ದೇಶನಾಲಯವು (ಇ.ಡಿ.) ಉದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಜೈಅನ್ಮೋಲ್ ಅಂಬಾನಿ ಅವರನ್ನು ವಿಚಾರಣೆ ನಡೆಸಿದೆ. ಶನಿವಾರವೂ ಮುಂದುವರೆಯಲಿದೆ.2017ರಲ್ಲಿ ಅನಿಲ್ ಅಂಬಾನಿ ಅವರ ಒಡೆತನದ ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್, ಯೆಸ್ ಬ್ಯಾಂಕ್‌ನಿಂದ 6000 ಕೋಟಿ ರು. ಸಾಲ ಪಡೆದಿದ್ದರು. ಈ ಮೊತ್ತ ಒಂದೇ ವರ್ಷದಲ್ಲಿ 13,000 ಕೋಟಿ ರು.ಗೆ ಏರಿಕೆಯಾಗಿತ್ತು. ಇದು ಅನುತ್ಪಾದಕ ಹೂಡಿಕೆಯೆಂದು ಪರಿಗಣಿಸಲ್ಪಟ್ಟು, ಬ್ಯಾಂಕ್‌ಗೆ 3,300 ಕೋಟಿ ರು. ನಷ್ಟಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಇ.ಡಿ. ಅನಿಲ್ ಅವರನ್ನು ವಿಚಾರಣೆ ನಡೆಸಿದೆ. ಬಹುಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರ ಡೀಪ್‌ಫೇಕ್ ಎಐ ವಿಡಿಯೋವನ್ನು ಕೂಡಲೇ ತೆಗೆದು ಹಾಕುವಂತೆ ಗುಜರಾತ್‌ನ ಕೋರ್ಟ್, ಕಾಂಗ್ರೆಸ್ ಪಕ್ಷ ಮತ್ತು ಅದರ 4 ನಾಯಕರಿಗೆ ಆದೇಶಿಸಿದೆ.ಕಾಂಗ್ರೆಸ್ ಡಿ.15ರಂದು ತನ್ನ ಎಕ್ಸ್ ಖಾತೆಯಲ್ಲಿ ಮೋದಿ ಮತ್ತು ಅದಾನಿ ಅವರ ಡೀಪ್‌ಫೇಕ್ ವಿಡಿಯೋ ಹಂಚಿಕೊಂಡಿತ್ತು. ಈ ವಿಡಿಯೋ ವಿರುದ್ಧ ಅದಾನಿ ಕಂಪನಿಯು ಕೋರ್ಟ್ ಮೊರೆ ಹೋಗಿತ್ತು. ಪರಿಣಾಮ ಆದೇಶದ 48 ಗಂಟೆಯೊಳಗೆ ವಿಡಿಯೋ ತೆಗೆಯುವಂತೆ ಕೋರ್ಟ್ ಸೂಚಿಸಿದೆ. ಜೈರಾಂ ರಮೇಶ್, ಪವನ್ ಖೇರಾ, ಸುಪ್ರಿಯಾ ಶ್ರೀನೇತ್ ಮತ್ತು ಉದಯ್ ಭಾನು ಚಿಬ್ ಅವರಿಗೂ ವಿಡಿಯೋ ತೆಗೆವಂತೆ ಸೂಚಿಸಿದೆ. ಜೊತೆಗೆ ಎಕ್ಸ್, ಗೂಗಲ್‌ಗೂ ನೋಟಿಸ್ ನೀಡಿದೆ. ಮುಂದಿನ ವಿಚಾರಣೆಯನ್ನು ಡಿ.29ಕ್ಕೆ ಮುಂದೂಡಿದೆ.