ವಿಶ್ವದ ಇತರೆ ಪ್ರಜಾಪ್ರಭುತ್ವಗಳಿಗೆ ಹೋಲಿಸಿದರೆ ಭಾರತದಲ್ಲಿನ ಚುನಾವಣೆ ಅದ್ವಿತೀಯ : ಕೇಂದ್ರ ಚುನಾವಣಾ ಆಯೋಗ

KannadaprabhaNewsNetwork | Updated : Dec 27 2024, 05:05 AM IST

ಸಾರಾಂಶ

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಮತ್ತು 4 ರಾಜ್ಯಗಳ ವಿಧಾನಸಭಾ ಚುನಾವಣೆ ಕುರಿತು ವಿಪಕ್ಷಗಳು ಅನುಮಾನ ವ್ಯಕ್ತಪಡಿಸಿದ ಹೊತ್ತಿನಲ್ಲೇ, ಈ ಚುನಾವಣೆಗಳ ಕುರಿತ ಸಮಗ್ರ ಅಂಕಿ ಅಂಶಗಳನ್ನು ಕೇಂದ್ರ ಚುನಾವಣಾ ಆಯೋಗ ಗುರುವಾರ ಬಿಡುಗಡೆ ಮಾಡಿದೆ.

ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಮತ್ತು 4 ರಾಜ್ಯಗಳ ವಿಧಾನಸಭಾ ಚುನಾವಣೆ ಕುರಿತು ವಿಪಕ್ಷಗಳು ಅನುಮಾನ ವ್ಯಕ್ತಪಡಿಸಿದ ಹೊತ್ತಿನಲ್ಲೇ, ಈ ಚುನಾವಣೆಗಳ ಕುರಿತ ಸಮಗ್ರ ಅಂಕಿ ಅಂಶಗಳನ್ನು ಕೇಂದ್ರ ಚುನಾವಣಾ ಆಯೋಗ ಗುರುವಾರ ಬಿಡುಗಡೆ ಮಾಡಿದೆ.

ಅದರಲ್ಲಿ ವಿಶ್ವದ ಇತರೆ ಪ್ರಜಾಪ್ರಭುತ್ವಗಳಿಗೆ ಹೋಲಿಸಿದರೆ ಭಾರತದಲ್ಲಿನ ಚುನಾವಣೆ ಅದ್ವಿತೀಯ ಎಂದು ಚುನಾವಣಾ ಆಯೋಗ ಬಣ್ಣಿಸಿದೆ.

ಈ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ 64.64 ಕೋಟಿ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಇದು ಇದುವರೆಗೆ ದೇಶದ ಚುನಾವಣೆ ಇತಿಹಾಸದಲ್ಲಿ ನಡೆದ ದಾಖಲೆಯ ಮತದಾನವಾಗಿದೆ. ಈ ಪೈಕಿ ಇವಿಎಂ ಮತ್ತು ಅಂಚೆ ಮತಗಳನ್ನು ಬಳಸಿಕೊಂಡು 64.64 ಕೋಟಿ ಜನರು ಮತ ಚಲಾಯಿಸಿದ್ದಾರೆ ಎಂದು ಹೇಳಿದೆ.

ಜೊತೆಗೆ 2024ರ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಮತ ಚಲಾವಣೆ ಮಾಡಿದ್ದಾರೆ. ಮಹಿಳೆಯರ ಮತಚಲಾವಣೆ ಪ್ರಮಾಣ ಶೇ.65.78ರಷ್ಟಿದ್ದರೆ, ಪುರುಷರ ಪ್ರಮಾಣ ಶೇ.65.55ರಷ್ಟಿದೆ. 13 ಸಾವಿರ ತೃತೀಯ ಲಿಂಗಿಗಳು ಮತ ಹಾಕಿದ್ದಾರೆ.

800 ಮಹಿಳೆಯರು ಸ್ಪರ್ಧೆ:

ಈ ಬಾರಿ 800 ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದು 2019ರ ಚುನಾವಣೆಗಿಂತ ಅಧಿಕ. ಹಿಂದಿನ ಚುನಾವಣೆಯಲ್ಲಿ 726 ಮಹಿಳೆಯರು ಸ್ಪರ್ಧಿಸಿದ್ದರು. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 111 ಮಹಿಳೆಯರು ಸ್ಪರ್ಧಿಸಿದ್ದರು. ಉಳಿದಂತೆ ಉತ್ತರ ಪ್ರದೇಶದಲ್ಲಿ 80, ತಮಿಳುನಾಡಿನಲ್ಲಿ 77 ಮಹಿಳೆಯರು ಚುನಾವಣಾ ಕಣದಲ್ಲಿದ್ದರು. ಇದರ ಜೊತೆಗೆ 543 ಕ್ಷೇತ್ರಗಳ ಪೈಕಿ 152 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳೇ ಇರಲಿಲ್ಲ. ಈ ಸಲ 97.97 ಕೋಟಿ ಜನರು ಮತದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದು 2019ರ ಚುನಾವಣೆಗಿಂತ ಶೇ.7.43ರಷ್ಟು ಹೆಚ್ಚು ಎಂದು ಆಯೋಗ ಹೇಳಿದೆ.

ದುಬ್ರಿಯಲ್ಲಿ ಅಧಿಕ ಮತದಾನ:

ಈ ಬಾರಿ ಅಸ್ಸಾಂನ ದುಬ್ರಿಯಲ್ಲಿ ಅತ್ಯಧಿಕ ಶೇ. 92.3ರಷ್ಟು ಮತ ಪ್ರಮಾಣ ದಾಖಲಾಗಿದೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಅತಿ ಕನಿಷ್ಠ ಇಲ್ಲಿ ಶೇ.38.7 ಮತದಾನ ದಾಖಲಾಗಿದೆ.

Share this article