ಲಖನೌ: ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ನಿತ್ಯವೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿರುವ ಅಯೋಧ್ಯೆಯಲ್ಲಿ 650 ಕೋಟಿ ರು. ವೆಚ್ಚದಲ್ಲಲಿ ದೇಗುಲಗಳ ವಸ್ತು ಸಂಗ್ರಹಾಲಯ ಆರಂಭಿಸಲು ನಿರ್ಧರಿಸಲಾಗಿದೆ.
ಟಾಟಾ ಕಂಪನಿಗಳ ಮಾತೃ ಸಂಸ್ಥೆಯಾದ ‘ಟಾಟಾ ಸನ್ಸ್’ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯಡಿ ನಿರ್ಮಿಸಲಿದೆ. ಇದಕ್ಕಾಗಿ ಅಗತ್ಯವಾದ ಜಾಗವನ್ನು 1 ರು. ಶುಲ್ಕಕ್ಕೆ 90 ವರ್ಷಗಳ ಕಾಲ ಟಾಟಾ ಸನ್ಸ್‌ಗೆ ಗುತ್ತಿ ಗೆ ನೀಡಲಾಗುವುದು.
ಸನಾತನ ಧರ್ಮ ಪ್ರಚಾರ:
ಭಾರತದಲ್ಲಿರುವ ಪ್ರಮುಖ ದೇಗುಲಗಳ ಬಗ್ಗೆ ಮಾಹಿತಿ ನೀಡಲು ಮತ್ತು ಸನಾತನ ಧರ್ಮದ ಬಗ್ಗೆ ಪ್ರಚಾರಕ್ಕಾಗಿ ಈ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ.
ಮುಖ್ಯವಾಗಿ ಸನಾತನ ಧರ್ಮದ ಮೂಲ ಪರಿಕಲ್ಪನೆ, ಸಂಸ್ಕೃತಿ, ನಿರ್ದಿಷ್ಟ ಸ್ಥಳಗಳಲ್ಲಿ ದೇವಾಲಯಗಳ ನಿರ್ಮಾಣದ ಹಿಂದಿನ ತಾರ್ಕಿಕತೆ ಮತ್ತು ಅವುಗಳ ರಚನೆಗೆ ಮಾರ್ಗದರ್ಶನ ನೀಡಲು ಆಧಾರವಾಗಿರುವ ತತ್ವಶಾಸ್ತ್ರದ ಬಗ್ಗೆ ಯುವಜನತೆಗೆ ಅರಿವು ಮೂಡಿಸಲು ಮ್ಯೂಸಿಯಂ ನೆರವಾಗಲಿದೆ ಎಂಬ ಉದ್ದೇಶವಿದೆ. ಜೊತೆಗೆ ದೇವಾಲಯ ನಿರ್ಮಾಣಕ್ಕೆ ವಾಸ್ತುಶಿಲ್ಪ, ವಿನ್ಯಾಸ, ಪ್ರಾಚೀನ ಕಾಲದ ಶಿಕ್ಷಣ ಪದ್ಧತಿ, ಮಠಗಳು ಮತ್ತು ಪೀಠಗಳ ಬಗ್ಗೆಯೂ ಪರಿಚಯ ನೀಡಲಾಗುವುದು.
12 ಗ್ಯಾಲರಿಗಳಲ್ಲಿ ಮ್ಯೂಸಿಯಂ ನಿರ್ಮಾಣ:
650 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇಗುಲಗಳ ವಸ್ತು ಸಂಗ್ರಹಾಲಯವು ಪ್ರಮುಖವಾಗಿ 12 ಗ್ಯಾಲರಿಗಳನ್ನು ಒಳಗೊಂಡಂತೆ ವಿನ್ಯಾಸ ಮಾಡಲಾಗುವುದು. 12 ಗ್ಯಾಲರಿಗಳ ಹೊರತಾಗಿ, ವಸ್ತುಸಂಗ್ರಹಾಲಯವು ಸುಂದರವಾದ ಉದ್ಯಾನವನ, ಕೆಫೆಟೇರಿಯಾ, ಕೊಳ ಮತ್ತು ನೆಲಮಾಳಿಗೆಯ ಪಾರ್ಕಿಂಗ್ ಅನ್ನು ಸಹ ಒಳಗೊಂಡಿದೆ.