ನವದೆಹಲಿ: ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ, ಅದರ ಭಾಗವಾಗಿ ಇದೀಗ ಭಾರತೀಯ ಮೂಲದ ಅಕ್ರಮ ನಿವಾಸಿಗಳನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಸೂಕ್ತ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ನೆಲೆಸಿದ್ದ 205 ಮಂದಿ ಭಾರತೀಯರನ್ನು ಅಮೆರಿಕದ ಸ್ಯಾನ್ ಆ್ಯಂಟಾನಿಯೋ ವಿಮಾನ ನಿಲ್ದಾಣದಿಂದ ಸಿ-17 ಮಿಲಿಟರಿ ವಿಮಾನದ ಮೂಲಕ ಕಳುಹಿಸಿಕೊಡಲಾಗಿದೆ.
ಅಮೆರಿಕದ ರಾಯಭಾರ ಕಚೇರಿ ಈ ಬೆಳವಣಿಗೆಯನ್ನು ಖಚಿತಪಡಿಸಲು ನಿರಾಕರಿಸಿದೆ. ಆದರೆ ಅಮೆರಿಕವು ತನ್ನ ವಲಸೆ ನೀತಿಯನ್ನು ಕಠಿಣಗೊಳಿಸುತ್ತಿದೆ, ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸಿಕೊಡುತ್ತಿದೆ ಎಂದಷ್ಟೇ ಹೇಳಿದೆ.
ಪ್ರತಿ ವರ್ಷವೂ ಅಮೆರಿಕ ಅಕ್ರಮ ವಲಸಿಗರನ್ನು ಅವರವರ ತವರು ರಾಜ್ಯಕ್ಕೆ ಕಳುಹಿಸಿ ಕೊಡುತ್ತಿದೆಯಾದರೂ, ಟ್ರಂಪ್ 2ನೇ ಬಾರಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಭಾರತೀಯರನ್ನು ತವರಿಗೆ ಕಳುಹಿಸುತ್ತಿದೆ.18000 ಭಾರತೀಯರ ಪಟ್ಟಿ:
ಅಮೆರಿಕದಲ್ಲಿ 7.25 ಲಕ್ಷ ಮಂದಿ ಭಾರತೀಯರು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದು ಮೆಕ್ಸಿಕೋ, ಇಎಲ್ ಸಾಲ್ವೆಡಾರ್ ಬಳಿಕದ ಅತಿದೊಡ್ಡ ಅಕ್ರಮ ನಿವಾಸಿಗಳ ಸಂಖ್ಯೆ ಭಾರತೀಯರದ್ದಾಗಿದೆ.
ಅಕ್ರಮ ನಿವಾಸಿಗಳನ್ನು ವಾಪಸ್ ಕಳುಹಿಸಿಕೊಡುವ ಅಮೆರಿಕದ ಕ್ರಮಕ್ಕೆ ಭಾರತದಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ನಮ್ಮ ದೇಶದ ಅಕ್ರಮ ನಿವಾಸಿಗಳನ್ನು ಸ್ವೀಕರಿಸಲು ಭಾರತ ಸಿದ್ಧವಿದೆ ಎಂದು ಈಗಾಗಲೇ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.