ವಾಷಿಂಗ್ಟನ್: ಈ ಹಿಂದೆ ತಾವು ವಿಶ್ವದ ವಿವಿಧ ದೇಶಗಳ ಮೇಲೆ ಹೇರಿದ್ದ ತೆರಿಗೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಬೆನ್ನಲ್ಲೇ ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರ, ಇದೀಗ ಭಾರತವೂ ಸೇರಿ 60 ರಾಷ್ಟ್ರಗಳ ಮೇಲೆ ಅಡ್ಡದಾರಿ ಮೂಲಕ ಹೊಸದಾಗಿ ತೆರಿಗೆ ಹೇರಲು ಹೊರಟಿದೆ.
‘ಶೋಷಿತ ಕಾರ್ಮಿಕ’ರಿಂದ (ಫೋರ್ಸ್ಡ್ ಲೇಬರ್) ತಯಾರಾದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿವೆ ಎಂಬ ಆರೋಪ ಹೊರಿಸಿ 60 ರಾಷ್ಟ್ರಗಳ ಮೇಲೆ ಶೇ.10ರಿಂದ ಶೇ.12.5ರಷ್ಟು ತೆರಿಗೆ ವಿಧಿಸಲು ಚಿಂತನೆ ನಡೆಸುತ್ತಿದೆ. ಆದರೆ ತಕ್ಷಣ ಇದು ಜಾರಿಯಾಗಲ್ಲ. ಸಾರ್ವಜನಿಕರ ಅಭಿಪ್ರಾಯ ಕೋರಲಾಗಿದೆ. ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ.
ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಬುಧವಾರ ಈ ಕುರಿತು ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್, ಸ್ವಿಜರ್ಲೆಂಡ್, ಬ್ರಿಟನ್ ಮತ್ತಿತರ ದೇಶಗಳ ಮೇಲೆ ಶೇ.12.5ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಮಾಡಲಾಗಿದೆ. ಇನ್ನು ಈ ರೀತಿಯ ನಿರ್ಬಂಧವನ್ನು ಭಾಗಶಃ ಅನುಷ್ಠಾನಗೊಳಿಸಿರುವ ಕೆನಡಾ, ಮೆಕ್ಸಿಕೋ, ಈಕ್ವಡೋರ್, ಇಯು, ಪಾಕಿಸ್ತಾನ, ಇಂಡೋನೇಷ್ಯಾದಂಥ ದೇಶಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ.
ಅಮೆರಿಕ ತನ್ನ ವ್ಯಾಪಾರ ಪಾಲುದಾರ ದೇಶಗಳ ಮೇಲೆ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301(ಬಿ), (1) ಅಡಿ ತನಿಖೆ ನಡೆಸಿದ್ದು, ಬಲವಂತದ (ಶೋಷಣೆ) ದುಡಿಮೆ ಮೂಲಕ ತಯಾರಿಸಿದ ವಸ್ತುಗಳ ಆಮದು ತಡೆಯುವಲ್ಲಿ 60 ದೇಶಗಳು ವಿಫಲವಾಗಿವೆ ಎನ್ನಲಾಗಿದೆ.
ಯಾವುದೇ ಕಾರ್ಮಿಕನ ಮೇಲೆ ಬಲವಂತ ಮಾಡಿ ಅಥವಾ ಶೋಷಣೆ ಮಾಡಿ ಮಾಡಿಸಿಕೊಂಡ ಕೆಲಸಕ್ಕೆ ಬಲವಂತದ ಕೆಲಸ (ಫೋರ್ಸ್ಡ್ ಲೇಬರ್) ಎಂದು ಕರೆಯಲಾಗುತ್ತದೆ. ಇದೊಂದು ರೀತಿಯಲ್ಲಿ ಆಧುನಿಕ ಕಾಲದ ಜೀತಪದ್ಧತಿ. ಈ ರೀತಿಯ ಫೋರ್ಸ್ಡ್ ಲೇಬರ್ ಮೂಲಕ ಮಾನವಹಕ್ಕುಗಳ ಉಲ್ಲಂಘನೆಗೆ ಸಮ.
ಯಾವ್ಯಾವ ದೇಶಗಳ ಮೇಲೆ ತೆರಿಗೆ?ಚೀನಾ, ಭಾರತ, ಬಾಂಗ್ಲಾದೇಶ, ವಿಯೆಟ್ನಾಂ, ತೈವಾನ್, ಇರಾಕ್, ಇಸ್ರೇಲ್, ಜಪಾನ್, ಕತಾರ್, ರಷ್ಯಾ, ಸೌದಿ ಅರೇಬಿಯಾ, ಸಿಂಗಾಪುರ, ಯುಎಇ, ಬ್ರಿಟನ್, ಕೆನಡಾ, ಈಕ್ವೆಡಾರ್, ಇಯು, ಇಂಡೋನೇಷ್ಯಾ, ಮೆಕ್ಸಿಕೋ, ಪಾಕಿಸ್ತಾನ ಮತ್ತಿತರ ದೇಶಗಳ ಮೇಲೆ ಶೇ.11ರಿಂದ 12.5ರಷ್ಟು ಹೆಚ್ಚುವರಿ ತೆರಿಗೆ ಬೀಳುವ ನಿರೀಕ್ಷೆ ಇದೆ.
--
ಅಮೆರಿಕದ ಆರೋಪ ನಿರಾಕರಿಸಿದ ಭಾರತ‘ಶೋಷಿತ ಕಾರ್ಮಿಕರ’ ಕುರಿತ ಅಮೆರಿಕ ಆರೋಪವನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ. ‘ಇದು ಆಧಾರರಹಿತ ಆರೋಪ. ಈ ರೀತಿಯ ಆರೋಪಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ’ ಎಂದು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. ಇದೇ ವೇಳೆ ಈ ವಿಚಾರವನ್ನು ಸದ್ಯ ಎರಡೂ ದೇಶಗಳ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ವ್ಯಾಪಾರ ಮಾತುಕತೆ ವೇಳೆ ಚರ್ಚಿಸಲಾಗುವುದು ಎಂದೂ ತಿಳಿಸಿದೆ.