ಕನ್ನಡಪ್ರಭ ವಾರ್ತೆ ಬೆಂಗಳೂರು
ಹೆಬ್ಬಾಳ, ಕೆ.ಆರ್.ಪುರಂ, ರಾಜಾಜಿನಗರ, ಬೆಂಗಳೂರು ಕೇಂದ್ರ, ಶಿವಾಜಿನಗರ ಯಲಹಂಕ ಸೇರಿದಂತೆ ಅನೇಕ ಕಡೆಗಳಲ್ಲಿ ಕರವೇ ಕಾರ್ಯಕರ್ತರು ‘ಉಳಿಸಿ, ಉಳಿಸಿ ಕನ್ನಡ ಉಳಿಸಿ’ ಘೋಷವಾಕ್ಯದೊಂದಿಗೆ ಕನ್ನಡ ನಾಮಫಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಸೇಂಟ್‌ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಕೆಂಪೇಗೌಡ ರಸ್ತೆ, ಚಾಮರಾಜಪೇಟೆ ಸೇರಿದಂತೆ ಯುಬಿ ಸಿಟಿ ಸಮೀಪವೂ ಹಲವು ಇಂಗ್ಲಿಷ್ ನಾಮಫಲಕಗಳಿಗೆ ಕಪ್ಪು ಮಸಿ ಬಳಿದರು. ಅಲ್ಲದೆ ಹಲವು ನಾಮಫಲಕಗಳನ್ನು ಪುಡಿಪುಡಿ ಮಾಡಿದರು. ಸ್ಟೇಬೂಮ್ ಹೋಟೆಲ್ ಮೇಲೆ ದಾಳಿ ಮಾಡಿದ ಕಾರ್ಯಕರ್ತರು ಹೂಕುಂಡಗಳನ್ನು ಒಡೆದು ಹಾಕಿದರು.ಕೆಲ ಬಸ್ ತಂಗುನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದ ಇಂಗ್ಲಿಷ್ ಜಾಹೀರಾತುಗಳು, ಸಾದಹಳ್ಳಿಯ ಮೆಕ್ ಡೊನಾಲ್ಡ್ ಮಳಿಗೆ, ಕರ್ಲಾನ್ ಮಳಿಗೆ, ಸತ್ವ ಮ್ಯಾಗ್ನಿಫಿಷಿಯ ರಿಯಲ್ ಎಸ್ಟೇಟ್‌ನ ನಾಮಫಲಕ , ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ನಾಮಫಲಕ, ನಮ್ಮ ಮೆಟ್ರೋ ಇಂಗ್ಲಿಷ್ ಫಲಕ ಹೀಗೆ ಆಂಗ್ಲ ಭಾಷೆಯಲ್ಲಿದ್ದ ಎಲ್ಲ ನಾಮಫಲಕಗಳಿಗೆ ಮಸಿ ಬಳಿದರೆ, ಕೆಲವೆಡೆ ನಾಮಫಲಕಗಳನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ರಾಜಾಜಿನಗರ, ಶಿವಾಜಿನಗರ, ಎಂ.ಜಿ.ರಸ್ತೆ ಸೇರಿದಂತೆ ಹಲವೆಡೆ ಮೈಕ್ ಮೂಲಕ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಎಚ್ಚರಿಕೆ ನೀಡಿದರು.
ಪೆಪ್ಪರ್‌ಸ್ಪ್ರೇ ಹಾಕಿದ ಕಾರ್ಯಕರ್ತೆಯರು:ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುವ ಮುನ್ಸೂಚನೆ ಹಿನ್ನೆಲೆಯಲ್ಲಿ ಫಿನಿಕ್ಸ್ ಮಾಲ್ ಆಫ್ ಏಷ್ಯಾ ಬಂದ್ ಮಾಡಲಾಗಿತ್ತು. ಆದರೂ, ಹಿಂಬಾಗಿಲ ಮೂಲಕ ಒಳಗೆ ಪ್ರವೇಶಿಸಲು ಯತ್ನಿಸಿದ ಕರವೇ ಮಹಿಳಾ ಕಾರ್ಯಕರ್ತೆಯರು ಅಲ್ಲಿನ ಭದ್ರತಾ ಸಿಬ್ಬಂದಿ ಮೇಲೆ ಪೆಪ್ಪರ್‌ಸ್ಪ್ರೇ ಹಾಕಿ ಒಳಗೆ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕರ್ತೆಯರನ್ನು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ಮಾಲ್ ಮುಂದೆಯೇ ಮಲಗಿ ಪ್ರತಿಭಟಿಸಿದರು. ಪೊಲೀಸರು ಎಲ್ಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಆಟೋ, ಜೀಪ್‌ಗಳಲ್ಲಿ ಕರೆದೊಯ್ದರು.
ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ಫೀನಿಕ್ಸ್ ಮಾಲ್ ಆಫ್ ಏಷ್ಯಾಗೆ ಪತ್ರ ಬರೆದು ಕನ್ನಡದಲ್ಲಿ ನಾಮಫಲಕ ಹಾಕುವಂತೆ ಎಚ್ಚರಿಕೆ ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳು ಕೂಡ ಕನ್ನಡ ಬಳಸುವಂತೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಈವರೆಗೂ ಇಂಗ್ಲೀಷ್‌ನಲ್ಲಿದ್ದ ನಾಮಫಲಕವನ್ನು ಕನ್ನಡದಲ್ಲಿ ಹಾಕಿದ್ದು ಗಮನ ಸೆಳೆಯಿತು.
ಸಾದಹಳ್ಳಿ ಗೇಟ್‌ನಿಂದ ಸುಮಾರು 10 ಕಿ.ಮೀ.ವರೆಗೂ ರ್‍ಯಾಲಿಯಲ್ಲಿ ಬರುತ್ತಿದ್ದ ವೇಳೆ ರಸ್ತೆಯ ಅಕ್ಕಪಕ್ಕದ ಅಂಗಡಿಗಳು, ಮಳಿಗೆಗಳಲ್ಲಿ ಕನ್ನಡೇತರ ಭಾಷೆಯಲ್ಲಿ ಇದ್ದ ನಾಮಫಲಕಗಳನ್ನು ಕಾರ್ಯಕರ್ತರು ಯಾವುದೆ ಮುಲಾಜಿಲ್ಲದೇ ಕಿತ್ತು ಹಾಕುತ್ತಿದ್ದರು. ಕೆಲವೆಡೆ ಅಂಗಡಿ ಮಾಲೀಕರು ವಾಗ್ವಾದಕ್ಕೆ ಇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪೊಲೀಸರು ಫಲಕ ಕೀಳದಂತೆ ಹೇಳುತ್ತಿದ್ದರೂ ಕಿವಿಗೊಡುವವರು ಯಾರೂ ಇರಲಿಲ್ಲ. ರ್‍ಯಾಲಿ ಯಲಹಂಕ ಸಮೀಪಕ್ಕೆ ಬರುತ್ತಿದ್ದಂತೆ ನಾರಾಯಣಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ಯಲು ಮುಂದಾದರು.
5 ಕಡೆ ಕೇಸು ದಾಖಲು: