ದುಬೈ: ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್‌ ಸೇರಿದಂತೆ ಕೆಲ ದೇಶಗಳು ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಬೆನ್ನಲ್ಲೇ ಇದೀಗ ಕೊಲ್ಲಿ ದೇಶವಾದ ಯುಎಇ ಕೂಡ 15 ವರ್ಷದೊಳಗಿನ ಮಕ್ಕಳು ಜಾಲತಾಣ ಬಳಸುವುದನ್ನು ನಿಷೇಧಿಸಿದೆ. ಈ ಮೂಲಕ ಇಂಥ ಕಾನೂನು ತಂದ ಮೊದಲ ಅರಬ್ ದೇಶ ಎನಿಸಿಕೊಂಡಿದೆ. ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವುದರಿಂದ ಆಗುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಯುಎಇ ಸರ್ಕಾರ ಈ ಕಾನೂನು ಜಾರಿಗೆ ತಂದಿದೆ. ಅದರ ಪ್ರಕಾರ, ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಖಾತೆ ಹೊಂದುವುದು, ಅವುಗಳನ್ನು ಬಳಸುವುದಕ್ಕೆ ಕಡಿವಾಣ ಬೀಳಲಿದೆ.

==

ಸ್ವಿಸ್‌ ಬ್ಯಾಂಕ್‌ನಲ್ಲಿರುವ ಭಾರತದ ಹಣ ಶೇ.8ರಷ್ಟು ಇಳಿಕೆ

₹39,000 ಕೋಟಿಯಿಂದ ₹36000 ಕೋಟಿಗಿಳಿಕೆ


ಪಿಟಿಐ ನವದೆಹಲಿ/ಜ್ಯೂರಿಚ್

ತೆರಿಗೆ ವಂಚಕರ ಸ್ವರ್ಗವಾಗಿರುವ ಸ್ವಿಜರ್ಲೆಂಡ್‌ನ ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಹಣದ ಪ್ರಮಾಣ ಕಳೆದ ವರ್ಷ ಶೇ.8ರಷ್ಟು ಇಳಿಕೆಯಾಗಿ, 36 ಸಾವಿರ ಕೋಟಿ ರು. ಆಗಿದೆ ಎಂದು ತಿಳಿದುಬಂದಿದೆ. 2024ರಲ್ಲಿ ಈ ಮೊತ್ತವು ಹಿಂದಿನ ವರ್ಷಗಳಿಗಿಂತ 3 ಪಟ್ಟು ಹೆಚ್ಚಿ 39 ಸಾವಿರ ಕೋಟಿ ರು. ಆಗಿತ್ತು. ಸ್ವಿಸ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.ಸ್ವಿಸ್‌ ಬ್ಯಾಂಕುಗಳಲ್ಲಿರುವ ಭಾರತೀಯರ ಹಣದ ಪ್ರಮಾಣ ಕಡಿಮೆಯಾಗಿದ್ದರೂ, 2025ರಲ್ಲಿ ಭಾರತೀಯ ವ್ಯಕ್ತಿಗಳು ಮತ್ತು ಕಂಪನಿಗಳು ಗ್ರಾಹಕ ಖಾತೆಯಲ್ಲಿ ಇಟ್ಟ ಮೊತ್ತದಲ್ಲಿ ಶೇ.50ರಷ್ಟು (6 ಸಾವಿರ ಕೋಟಿ) ಹೆಚ್ಚಳವಾಗಿದೆ. ಇದು, ಒಟ್ಟು ಮೊತ್ತದ ಶೇ.16ರಷ್ಟಾಗುತ್ತದೆ.ಸ್ವಿಸ್‌ ಬ್ಯಾಂಕ್‌ನ ಈ ದಾಖಲೆಯಲ್ಲಿ ಕಪ್ಪುಹಣ ಹಾಗೂ ಬೇರೊಂದು ದೇಶದವರೆಂದು ಬಿಂಬಿಸಿಕೊಂಡು ಭಾರತೀಯರು ಇಟ್ಟಿರುವ ಹಣವನ್ನು ಸೇರಿಸಲಾಗಿಲ್ಲ.

==

ಸಿಎ ಪರೀಕ್ಷೆ: ಪಂಜಾಬ್‌ನ ನೂರ್ ಸಿಂಗ್ಲಾ ಟಾಪರ್

ನವದೆಹಲಿ: ಪಟಿಯಾಲಾದ ನೂರ್ ಸಿಂಗ್ಲಾ ಅವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಗುರುವಾರ ಪ್ರಕಟಿಸಿದ 2026ರ ಸಿಎ ಅಂತಿಮ ಫಲಿತಾಂಶಗಳಲ್ಲಿ ದೇಶಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾರೆ,ನೂರ್ 600 ಅಂಕಗಳಲ್ಲಿ 499 ಅಂಕಗಳನ್ನು ಗಳಿಸಿ, ಶೇ.83.17 ಅಂಕಗಳನ್ನು ಗಳಿಸಿದ್ದಾರೆ, ನಂತರ ಬಂಗಾಳದ ಹೌರಾದ ರಿತಿಜ್ ಸರಾಫ್ 475 ಅಂಕಗಳೊಂದಿಗೆ (ಶೇ. 79.17) 2ನೇ ರ್‍ಯಾಂಕ್‌, ಮಹಾರಾಷ್ಟ್ರದ ಡೊಂಬಿವಿಲಿಯ ಸೋಹನ್ ಅನಿಲ್ ಮಾಂಜ್ರೇಕರ್ 473 ಅಂಕಗಳೊಂದಿಗೆ (ಶೇ. 78.83) 3ನೇ ರ್‍ಯಾಂಕ್‌ ಪಡೆದಿದ್ದಾರೆ.

==

ಜಾರ್ಖಂಡ್‌ನಲ್ಲಿ ಅಡ್ಡಮತದಾನ: ಬಿಜೆಪಿ ಬೆಂಬಲಿತಗೆ ಜಯ

ರಾಂಚಿ: ಜೆಎಂಎಂ-ಕಾಂಗ್ರೆಸ್‌ ಆಳ್ವಿಕೆಯ ಜಾರ್ಖಂಡ್‌ನಲ್ಲಿ ಗುರುವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಪರಿಮಳ್‌ ನಾಥ್ವಾನಿ ಅಚ್ಚರಿಯ ರೀತಿಯಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಣವ್‌ ಝಾ ಸೋತಿದ್ದಾರೆ.ಆಡಳಿತ ಕೂಟದಲ್ಲಿನ ಸಿಪಿಐ (ಎಂಎಲ್) ಮತ್ತು ಲಾಲು ಯಾದವ್ ಅವರ ಆರ್‌ಜೆಡಿ ಶಾಸಕರು ಅಡ್ಡ ಮತದಾನ ಮಾಡಿದ ಕಾರಣ ನಾಥ್ವಾನಿ ಜಯಗಳಿಸಿದ್ದಾರೆ. ಬಿಜೆಪಿ 24 ಸ್ಥಾನ ಹೊಂದಿದ್ದರೂ ಗೆಲ್ಲಲು ಬೇಕಾದ 28 ಮತ (ಹೆಚ್ಚುವರಿ 4 ಮತ) ಪಡೆದಿದ್ದಾರೆ.

ಇನ್ನೊಂದು ಸ್ಥಾನವನ್ನು ಜೆಎಂಎಂನ ಬೈಜ್‌ನಾಥ್ ರಾಮ್ ಗೆದ್ದಿದ್ದಾರೆ. ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಪ್ರಣವ್ ಝಾ 20 ಮತ ಪಡೆದರು.

==

ನಾಳೆ 23ನೇ ಕಂತಿನ ಪಿಎಂ ಕಿಸಾನ್‌ ಹಣ ಬಿಡುಗಡೆ: ₹18,880 ಕೋಟಿ ಜಮೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪಿಎಂ ಕಿಸಾನ್‌ ಯೋಜನೆಯ 23ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ದೇಶಾದ್ಯಂತ ಇರುವ 9.44 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ಒಟ್ಟು 18,880 ಕೋಟಿ ರು. ಜಮೆ ಆಗಲಿದೆ.ಜೂ.20ಕ್ಕೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಗೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಈ ವೇಳೆ ಕಿಸಾನ್ ಯೋಜನೆ ಹಣ ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಮಾಹಿತಿ ನೀಡಿದ್ದು, ‘ಪಶ್ಚಿಮ ಬಂಗಾಳವೊಂದರಲ್ಲಿಯೇ 45.35ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗೆ 907 ಕೋಟಿ ರು.ಗಳು ವರ್ಗಾವಣೆ ಆಗಲಿದೆ’ ಎಂದಿದ್ದಾರೆ.ರೈತರಿಗೆ ವರ್ಷಕ್ಕೆ 6 ಸಾವಿರ (ಪ್ರತಿ 4 ತಿಂಗಳಿಗೊಮ್ಮೆ 2000 ರು.ನಂತೆ) ನೀಡುವ ಕೇಂದ್ರ ಸರ್ಕಾರದ ಯೋಜನೆ ಇದಾಗಿದೆ.