ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ಮಕ್ಕಳಿಗೆ ಮೊಬೈಲ್ ಬಳಕೆ ಮೂಲಕ ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ನಿರ್ಬಂಧಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.

ಇಲ್ಲಿನ ಶ್ರೀ ರಾಮ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಶ್ರೀ ರಾಮ ನರ್ಸಿಂಗ್ ಕಾಲೇಜಿನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಾದಿ ತಪ್ಪುತ್ತಿರುವ ಮಕ್ಕಳು ಹಾಗೂ ಕುಟುಂಬವನ್ನು ಸರಿದಾರಿಗೆ ತರುವ ಗುರುತರ ಹೊಣೆಗಾರಿಕೆ ಮಹಿಳೆಯಿರಿಗಿದ್ದು, ಆ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕಿದೆ. ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಕಡೆಗಣಿಸುತ್ತಿರುವ ಇಂದಿನ ದಿನಗಳಲ್ಲಿ ಸಮಾಜ ಸೇವೆ ಕಡಿಮೆಯಾಗುತ್ತಿದೆ. ಈ ನಡುವೆಯೂ ಕುಟುಂಬವನ್ನು ಪೋಷಿಸುವ ಮೂಲಕ ಸಮಾಜ ಸೇವೆ ಮಾಡುತ್ತಿರುವ ಮಹಿಳೆಯರ ಪಾತ್ರ ಅನನ್ಯವಾಗಿದೆ ಎಂದರು.

ಹೊಸ ಜೀವದ ಜನನಕ್ಕೆ ಕಾರಣಳಾದ ಮಹಿಳೆ ಸಂಪದ್ಬರಿತ ಸಮಾಜ ನಿರ್ಮಾಣ ಮಾಡುವ ಶಕ್ತಿ ಹೊಂದಿದ್ದಾಳೆ. ಆದರೆ ಎಲ್ಲದಕ್ಕೂ ಪುರುಷರನ್ನು ಮಾತ್ರ ದೂಷಿಸುವುದು ಸರಿಯಲ್ಲ. ಮಹಿಳೆಯರು, ಪುರುಷರಾದಿಯಾಗಿ ದಾರಿ ತಪ್ಪುತ್ತಿರುವುದು ಸಾಮಾನ್ಯವಾಗಿದ್ದು, ಭಯಾನಕ ಸಮಾಜವನ್ನು ನೋಡುತ್ತಿದ್ದೇವೆ. ಈ ದಿಸೆಯಲ್ಲಿ ಮಹಿಳೆಯರ ಜವಾಬ್ದಾರಿ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ಭ್ರಷ್ಟಾಚಾರದಿಂದ ಸಂಪಾದಿಸಿದ್ದನ್ನು ಅನುಭವಿಸುವ ಮುಂಚೆ ಪ್ರಶ್ನಿಸಬೇಕು. ಮಕ್ಕಳ ಕೈಗೆ ಮೊಬೈಲ್ ನೀಡುವ ಪರಿಪಾಠಕ್ಕೆ ಅಂತ್ಯ ಹಾಡುವುದು ಮಹಿಳೆಯ ಕೈಯಲ್ಲಿದೆ. ಗಂಡ, ಮನೆ ಮಕ್ಕಳನ್ನು ಸರಿದಾರಿಗೆ ತರಬೇಕಿದೆ. ದುಷ್ಟರನ್ನು ಧಮನಿಸುವ ಸ್ತ್ರೀ ಶಕ್ತಿ ಆಗಬೇಕು ಎಂದರು.


ಸಮಾಜದ ಆಗುಹೋಗುಗಳಿಗೆ ಗಂಡು ಹೆಣ್ಣು ಇಬ್ಬರೂ ಭಾಗಿದಾರರೇ. ಶಾಂತಿ ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಹಕ್ಕುಗಳು ಇಬ್ಬರಿಗೂ ಬೇಕು. ಆದರೆ ಮಹಿಳೆಯರು ಹೆಚ್ಚು ಶ್ರಮದ ಕೆಲಸ ಮಾಡಿದರೂ ಅವರಿಗೆ ಸಿಗುವ ಕೂಲಿ ಕಡಿಮೆ. ಈ ದಿಸೆಯಲ್ಲಿ ಮಹಿಳಾ ದಿನಾಚರಣೆ ಮಹಿಳೆಯರ ಸ್ವಾಭಿಮಾನ ಅಸ್ತಿತ್ವದ ಪ್ರಶ್ನೆಯಾಗಿ ಆಚರಿಸಲಾಗುತ್ತಿದ್ದು, ಮಹಿಳೆಯರಿಗೆ ಪುರುಷರಂತೆಯೇ ಸಮಾಜದಲ್ಲಿ ಮನ್ನಣೆ ಸಿಗಬೇಕು. ಆಗ ಮಹಿಳೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.

ಭೂಮಿಕಾಸ್ ಕಿಚನ್ ಯೂಟ್ಯೂಬರ್ ಭೂಮಿಕಾ ಸುದರ್ಶನ್ ಮಾತನಾಡಿ, ದೃಷ್ಟಿ ದೋಷದಿಂದಾಗಿ ನಾನು ಪ್ರಪಂಚ ನೋಡಲು ಆಗದಿದ್ದರೂ, ಹಿತೈಷಿಗಳು ನೀಡಿದ ಮಾರ್ಗದರ್ಶನದಂತೆ ಸವಾಲಾಗಿ ಸ್ವೀಕರಿಸಿ ಇಂದು ವಿಷುಯಲ್ ಇಂಪಾಯರ್ಡ್ ಯೂ ಟೂಬರ್ ಗೆ ಲಕ್ಷದ ಸಮೀಪ ವೀಕ್ಷಕರಿದ್ದಾರೆ. ನಮ್ಮ ನ್ಯೂನತೆಯೇ ನಮ್ಮ ಏಳಿಗೆಗೆ ಮೆಟ್ಟಿಲಾಗಬಹುದು ಎನ್ನುವುದಕ್ಕೆ ನಾನೇ ನಿದರ್ಶನ ಎಂದರು.

ಜಾನಪದ ಕಲಾವಿದೆ ಗಂಗಮ್ಮ ಮಾತನಾಡಿ, ಅಕ್ಷರದ ಜ್ಞಾನವಿಲ್ಲದ ಬಡತನದಿಂದ ಬಂದ ನಾವು ಹಾಡುಗಳಿಂದ ಮನ್ನಣೆ ಗಳಿಸಲು ಹಲವಾರು ಮಹನೀಯರು ಕಾರಣರಾಗಿದ್ದಾರೆ. ಅಂತಹವರನ್ನು ನಾವು ಸ್ಮರಿಸಬೇಕಿದೆ. ನಮ್ಮ ಕಲೆ ಪರಂಪರೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಶ್ರೀ ರಾಮ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ.ಮಾಲಾ ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗಾಗುತ್ತಿದ್ದ ತಾರತಮ್ಯ, ಶೋಷಣೆಗಳ ವಿರುದ್ದ ದನಿ ಎತ್ತಿದ ಪ್ರತೀಕವಾಗಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು, ಇದರ ಹಿನ್ನೆಲೆ ಅರಿಯಬೇಕಿದೆ. ಇಂದು ವಿವಿಧ ಕ್ಷೇತ್ರದ ಮಹಿಳಾ ಸಾಧಕರನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಿಕ್ಷಕರಾದ ಗಾಯತ್ರಿ ದೇವಿ, ಸಿ.ವಿಶಾಲಾಕ್ಷಿ, ವೈದ್ಯೆ ಡಾ.ಗೀತಾ.ಎಂ.ಎಸ್, ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಕೆ.ವತ್ಸಲಾ, ಜಾನಪದ ಕಲಾವಿದೆ ಗಂಗಮ್ಮ, ನಗರಸಭಾ ಸದಸ್ಯೆ ಎಸ್.ವತ್ಸಲಾ, ಎಚ್.ಸಿ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಮಾಧುರಿ ರಂಗನಾಥ್, ಭೂಮಿಕಾಸ್ ಕಿಚನ್ನ ಭೂಮಿಕಾ ಸುದರ್ಶನ್ ಅವರನ್ನು ಸನ್ಮಾನಿಸಲಾಯಿತು.

ಶ್ರೀ ರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ.ವಿಜಯ ಕುಮಾರ್, ಸುಜ್ಞಾನ ದೀಪಿಕಾ ಜಾಗೃತಿ ಸಂಚಾಲಕ ಎಂ.ಎಸ್.ಮಂಜುನಾಥ್, ಎಚ್ಇಎಚ್ಎಸ್ ಪ್ಯಾರಾಮೆಡಿಕಲ್ ಕಾಲೇಜು ಪ್ರಾಂಶುಪಾಲ ರಾಮಮೂರ್ತಿ ಭಾಗವಹಿಸಿದ್ದರು.