1960-70ರ ದಶಕದ ದೇಶಭಕ್ತಿ ಚಿತ್ರಗಳ ನಾಯಕ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತ ಮನೋಜ್‌ ಕುಮಾರ್‌ ನಿಧನ

KannadaprabhaNewsNetwork |  
Published : Apr 05, 2025, 12:48 AM ISTUpdated : Apr 05, 2025, 05:52 AM IST
ಮನೋಜ್ | Kannada Prabha

ಸಾರಾಂಶ

 1960-70ರ ದಶಕದಲ್ಲಿ ದೇಶಭಕ್ತಿ ಆಧರಿತ ಚಿತ್ರಗಳ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಮನೋಜ್‌ ಕುಮಾರ್‌ (87) ಶುಕ್ರವಾರ ಇಲ್ಲಿ ನಿಧನರಾದರು.

ಮುಂಬೈ: 1960-70ರ ದಶಕದಲ್ಲಿ ದೇಶಭಕ್ತಿ ಆಧರಿತ ಚಿತ್ರಗಳ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಮನೋಜ್‌ ಕುಮಾರ್‌ (87) ಶುಕ್ರವಾರ ಇಲ್ಲಿ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ನಸುಕಿನ 3.30ರ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ. ಖ್ಯಾತ ನಟನ ನಿಧನಕ್ಕೆ ಪ್ರಧಾನಿ ಮೋದಿಯಾಗಿ ರಾಜಕೀಯ ಗಣ್ಯರು, ಚಲನಚಿತ್ರರಂಗದ ಎಲ್ಲಾ ಹಿರಿ-ಕಿರಿಯರು ಕಂಬನಿ ಮಿಡಿದಿದ್ದಾರೆ.

ಪಾಕ್‌ನಲ್ಲಿ ಜನಿಸಿ ಭಾರತದಲ್ಲಿ ಮಿನುಗಿದ್ದ ನಕ್ಷತ್ರ ಹರಿಕೃಷ್ಣ

‘ಭಾರತ್‌ ಕುಮಾರ್‌’ ಎಂದೇ ಖ್ಯಾತರಾಗಿರುವ ಮನೋಜ್‌ ಕುಮಾರ್‌ರ ಮೂಲ ಹೆಸರು ಹರಿಕೃಷ್ಣ ಗಿರಿ ಗೋಸ್ವಾಮಿ. ಪ್ರಸ್ತುತ ಪಾಕಿಸ್ತಾನದಲ್ಲಿರುವ ಅಬೋಟಾಬಾದ್‌ನಲ್ಲಿ 1937ರಲ್ಲಿ ಜನಿಸಿದ ಗೋಸ್ವಾಮಿ, ದೇಶ ವಿಭಜನೆಯಾದಾಗ, ತಮ್ಮ ಪರಿವಾರದೊಂದಿಗೆ ದೆಹಲಿಗೆ ಆಗಮಿಸಿ ನೆಲೆಸಿದರು. ದೆಹಲಿಯ ಹಿಂದೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇವರು ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ನಟ ದಿಲೀಪ್‌ ಕುಮಾರ್‌ ಅವರ ಅಭಿಮಾನಿಯಾಗಿದ್ದ ಹರಿಕೃಷ್ಣ, ಶಬ್ನಮ್‌ ಚಿತ್ರದಲ್ಲಿನ ದಿಲೀಪ್‌ ಕುಮಾರ್‌ ಅವರ ನಟನೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಅದೇ ಕಾರಣಕ್ಕೆ ಆ ಚಿತ್ರದಲ್ಲಿನ ದಿಲೀಪ್‌ ಅವರ ಮನೋಜ್‌ ಎಂಬ ಹೆಸರನ್ನೇ ತಾವು ಇಟ್ಟುಕೊಂಡಿದ್ದರು.

1962ರಲ್ಲಿ ವೋ ಕೌನ್‌ ಹೈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಮನೋಜ್‌ ಕುಮಾರ್‌ ಬಳಿಕ ಭಗತ್‌ ಸಿಂಗ್‌ ಕುರಿತ ಶಹೀದ್‌, ಉಪಕಾರ್‌ ಉಪಕಾರ್‌, ಪೂರಬ್‌ ಔರ್‌ ಪಶ್ಚಿಮ್‌, ರೋಟಿ ಕಪಡಾ ಔರ್‌ ಮಕಾನ್‌ನಂತಹ ಸಿನಿಮಾಗಳ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ್ದರು.

ಆ ಗಲೇ ಲಗಾ ಜಾ, ಮೆರೆ ದೇಶ್‌ ಕಿ ಧರ್ತಿ ಮನೋಜ್‌ ಕುಮಾರ್‌ ಅಭಿನಯದ ಚಿತ್ರಗಳ ಅತ್ಯಂತ ಜನಪ್ರಿಯ ಹಾಡುಗಳಾಗಿದ್ದವು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ