ಮುಂಬೈ: ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದ ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ನಟ ಮನೋಜ್ ಕುಮಾರ್ (87) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಶನಿವಾರ ಬೆಳಿಗ್ಗೆ 11.30ಕ್ಕೆ ಜುಹುವಿನ ಪವನ್ ಹನ್ಸ್ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಿತು ಮನೋಜ್ ಅವರ ಪುತ್ರರಾದ ವಿಶಾಲ್ ಮತ್ತು ಕುನಾಲ್ ಅಂತಿಮ ವಿಧಿವಿಧಾನ ನೆರವೇರಿಸಿದರು. ಬಳಿಕ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು. ಅಮಿತಾಭ್ ಬಚ್ಚನ್, ಸಲೀಂ ಖಾನ್, ರಾಜ್ ಬಬ್ಬರ್, ಅಭಿಷೇಕ್ ಬಚ್ಚನ್, ಜಿಮ್ಮಿ ಶೆರ್ಗಿಲ್, ಅರ್ಬಾಜ್ ಖಾನ್, ಸುಭಾಷ್ ಘಾಯ್,ಅನು ಮಲಿಕ್, ಜಾಯೇದ್ ಖಾನ್, ಪ್ರೇಮ್ ಚೋಪ್ರಾ, ರಾಜ್‌ಪಾಲ್ ಯಾದವ್, ರಂಜಿತ್ ಮತ್ತು ಸುನೀಲ್ ದರ್ಶನ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು. ಮನೋಜ್ ಕುಮಾರ್ 1960-70ರ ದಶಕದಲ್ಲಿ ದೇಶಭಕ್ತಿ ಆಧರಿತ ಚಿತ್ರಗಳ ಮೂಲಕ ದೇಶಾದ್ಯಂತ ಮನೆಮಾತಾಗಿದ್ದರು.
ಎಂಪುರಾನ್ ನಿರ್ಮಾಪಕರ ಕಚೇರಿ ಮೇಲೆ ಇ.ಡಿ. ದಾಳಿ: ₹1.5 ಕೋಟಿ ವಶಕ್ಕೆ
ನವದೆಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ನಿಯಮ ಉಲ್ಲಂಘನೆ ಆರೋಪದಲ್ಲಿ ಮಲಯಾಳಂನ ಎಲ್2: ಎಂಪುರಾನ್ ಸಿನಿಮಾ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಗೋಪಾಲನ್ ಚಿಟ್ ಫಂಡ್ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶಾನಯ (ಇ.ಡಿ.) ಅಧಿಕಾರಿಗಳು ಶೋಧದ ವೇಳೆ 1.5 ಕೋಟಿ ರು. ಮೌಲ್ಯದ ನಗದು ವಶಪಡಿಸಿಕೊಂಡಿದ್ದಾರೆ.ಕೇರಳದ ಕಲ್ಲಿಕೋಟೆ ಮತ್ತು ಚೆನ್ನೈನ 2 ಸ್ಥಳಗಳಲ್ಲಿ ದಾಳಿ ಆರಂಭಿಸಿದ್ದ ಇ.ಡಿ. ಅಧಿಕಾರಿಗಳು ಶನಿವಾರ ಅಂತ್ಯಗೊಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು ‘ಶೋಧದ ವೇಳೆ 1.50 ಕೋಟಿ ರು. ನಗದು ಮತ್ತು ಫೆಮಾ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದಿದ್ದಾರೆ.
ನಕ್ಸಲರ ಹತ್ಯೆ ಖುಷಿಯ ವಿಚಾರ ಅಲ್ಲ: ಅಮಿತ್ ಶಾ
ದಂತೇವಾಡ: ‘ನಕ್ಸಲರು ಮಾವೋವಾದಿಗಳು ಹತರಾದಾಗ ಯಾರೂ ಕೂಡ ಅದರಿಂದ ಖುಷಿ ಪಡುವುದಿಲ್ಲ. ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಛತ್ತೀಸ್‌ಗಢದ ಬಸ್ತರ್ ಪ್ರದೇಶದಲ್ಲಿ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಸ್ತರ್‌ನಲ್ಲಿ ಗುಂಡು ಹಾರಿಸಿ ಬಾಂಬ್ ಸ್ಫೋಟಗೊಳ್ಳುತ್ತಿದ್ದ ದಿನಗಳು ಅಂತ್ಯಗೊಂಡಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ನಕ್ಸಲ್ ಸಹೋದರರನ್ನು ನಾನು ಒತ್ತಾಯಿಸುತ್ತೇನೆ. ನೀವು ನಮ್ಮವರು. ಮಾವೋವಾದಿಗಳು ಹತ್ಯೆಯಾದಾಗ ಯಾರೂ ಕೂಡ ಖುಷಿ ಪಡುವುದಿಲ್ಲ. ನಕ್ಸಲರು ಮುಖ್ಯವಾಹಿನಿಗೆ ಬಂದಾಗ ಅಭಿವೃದ್ಧಿ ಸಾಧ್ಯ’ ಎಂದರು.
ಚಾಕು ದಾಳಿಗೆ ಒಳಗಾಗಿದ್ದ ಸೈಫ್ ಈಗ ಕರ್ತವ್ಯಕ್ಕೆ ವಾಪಸ್
ಮುಂಬೈ: ಜನವರಿಯಲ್ಲಿ ದುಷ್ಕರ್ಮಿಯೊಬ್ಬನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ನಟ ಸೈಫ್ ಅಲಿ ಖಾನ್ ಪೂರ್ಣ ಗುಣಮುಖರಾಗಿದ್ದು, ತಮ್ಮ ಕೆಲಸ ಕಾರ್ಯಗಳಿಗೆ ಮರಳಿದ್ದಾರೆ ಎಂದು ಅವರ ಸಹೋದರಿ, ನಟಿ ಸೋಹಾ ಅಲಿ ಖಾನ್ ತಿಳಿಸಿದ್ದಾರೆ.ಜ.16ರಂದು ಮುಂಬೈನ ಬಾಂದ್ರಾದಲ್ಲಿನ ತಮ್ಮ ಮನೆಯಲ್ಲಿ ಸೈಫ್ ದಾಳಿಗೆ ಒಳಗಾಗಿದ್ದರು. ದುಷ್ಕರ್ಮಿಯೊಬ್ಬ ಅವರನ್ನು 6 ಬಾರಿ ಚಾಕುವಿನಿಂದ ತಿವಿದಿದ್ದ. ಆ ಬಳಿಕ ಸೈಫ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಬೆನ್ನುಮೂಳೆ ಮತ್ತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
‘ಘಟನೆಯಿಂದ ನಮಗೆಲ್ಲ ಬಹಳ ಆತಂಕವಾಗಿತ್ತು. ಅವರ (ಸೈಫ್) ಆರೋಗ್ಯವೇ ನಮ್ಮೆಲ್ಲರ ಕಾಳಜಿಯಾಗಿತ್ತು. ಈಗ ಅವರು ಪೂರ್ತಿ ಗುಣಮುಖರಾಗಿದ್ದು, ತಮ್ಮ ಕೆಲಸಕ್ಕೆ ಮರಳಿದ್ದಾರೆ. ಇದೇ ನಮ್ಮ ಗುರಿಯಾಗಿತ್ತು. ದೇವರಿಗೆ ಧನ್ಯವಾದಗಳು’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸೋಹಾ ತಿಳಿಸಿದ್ದಾರೆ.