ನವದೆಹಲಿ: ಬಿಬಿಸಿ ಭಾರತದ ಮುಖ್ಯಸ್ಥರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹೆಸರಾಂತ ಹಿರಿಯ ಪತ್ರಕರ್ತ, ಪದ್ಮಭೂಷಣ ಮಾರ್ಕ್ ಟಲ್ಲಿ (90) ಅವರು ಭಾನುವಾರ ದೆಹಲಿಯಲ್ಲಿ ನಿಧನರಾದರು.
1935ರ ಅ.24ರಂದು ಕೋಲ್ಕತಾದಲ್ಲಿ ಬ್ರಿಟಿಷ್ ದಂಪತಿಗೆ ಜನಿಸಿದ್ದ ಟಲ್ಲಿ ಅವರು ಭಾರತದಲ್ಲಿಯೇ ಇದ್ದು, ಸೇವೆ ಸಲ್ಲಿಸಿದ್ದರು. ಇವರ ಕೆಲ ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ವಾರ ದೆಹಲಿಯ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅಸುನೀಗಿದ್ದಾರೆ ಎಂದು ಟಲ್ಲಿ ಅವರ ಸ್ನೇಹಿತ ಸತೀಶ್ ಯಾಕೋಬ್ ಅವರು ತಿಳಿಸಿದ್ದಾರೆ.
ಟಲ್ಲಿ ಅವರು ಬಿಬಿಸಿ ನವದೆಹಲಿ ಬ್ಯೂರೋದ ಮುಖ್ಯಸ್ಥರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಜೊತೆಗೆ ಬಿಬಿಸಿ ರೇಡಿಯೋಗಳಲ್ಲಿಯೂ ಕಾರ್ಯಕ್ರಮ ನಡೆಸುತ್ತಿದ್ದರು, ಸಾಕಷ್ಟು ಟೀವಿ ಚರ್ಚೆಗಳಲ್ಲಿಯೂ ಭಾಗವಹಿಸುತ್ತಿದ್ದರು. ಬ್ರಿಟಿಷ್ ರಾಜ್ ಮತ್ತು ಭಾರತೀಯ ರೈಲ್ವೆ ಕುರಿತು ಸಾಕ್ಷ್ಯ ಚಿತ್ರಗಳನ್ನು ರಚಿಸಿದ್ದರು. ಇಷ್ಟೇ ಅಲ್ಲದೇ ಭಾರತದ ಮೇಲೆ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದ ಟಲ್ಲಿ ಅವರಿಗೆ 2002ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ನೀಡಿ ಗೌರವಿಸಿತ್ತು.