ನವದೆಹಲಿ: ಎದೆನೋವು ಹಾಗೂ ಆಯಾಸದ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭಾನುವಾರ ನಸುಕಿನ ಜಾವ ಇಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ಹೇಳಿವೆ.
‘ಭಾನುವಾರ ನಸುಕಿನ ಜಾವ 2 ಗಂಟೆಗೆ ಧನಕರ್ ಅವರಿಗೆ ಎದೆನೋವು ಹಾಗೂ ಆಯಾಸ ಕಾಣಿಸಿಕೊಂಡಿತು. ಕೂಡಲೇ ಅವರನ್ನು ಏಮ್ಸ್‌ನ ಗಂಭೀರ ನಿಗಾ ಘಟಕಕ್ಕೆ (ಸಿಸಿಯು) ದಾಖಲಿಸಲಾಗಿದೆ. ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು ನಿಗಾದಲ್ಲಿ ಇರಿಸಲಾಗಿದೆ’ ಎಂದು ಆಸ್ಪತ್ರೆಯ ಹೃದಯ ತಜ್ಞ ಡಾ। ರಾಜೀವ್ ನಾರಂಗ್ ಹೇಳಿದ್ದಾರೆ.
ಪ್ರಧಾನಿ ಮೋದಿ, ನಡ್ಡಾ ಭೇಟಿ:
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಭಾನುವಾರ ಏಮ್ಸ್‌ಗೆ ಭೇಟಿ ನೀಡಿ ಧನಕರ್ ಆರೋಗ್ಯ ವಿಚಾರಿಸಿದರು.
‘ಧನಕರ್ ಉತ್ತಮ ಆರೋಗ್ಯ ಮತ್ತು ಶೀಘ್ರ ಚೇತರಿಕೆಗೆ ನಾನು ಪ್ರಾರ್ಥಿಸುತ್ತೇನ’ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಣಿಪುರ: ಕುಕಿಗಳ ಬಂದ್‌ನಿಂದ ಜನಜೀವನ ಅಸ್ತವ್ಯಸ್ತ
ಇಂಫಾಲ್: ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿರುವ ಗಲಭೆಪೀಡಿತ ಮಣಿಪುರದಲ್ಲಿ ಪರಿಸ್ಥಿತಿ ಕೊಂಚ ಶಾಂತವಾಗಿದೆ. ಆದರೆ ಭದ್ರತಾ ಸಿಬ್ಬಂದಿಗಳ ಬಲಪ್ರಯೋಗ ವಿರೋಧಿಸಿ ಕುಕಿ ಸಮುದಾಯ ಬಂದ್‌ಗೆ ಕರೆ ನೀಡಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.ಶನಿವಾರ ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಸಂಘರ್ಷಕ್ಕೆ ಸಾಕ್ಷಿಯಾದ ಕುಕಿ ಪ್ರಾಬಲ್ಯದ ಕಾಂಗ್‌ಪೋಕ್ಪಿ, ಚುರಚಾಂದಪುರ, ತೆಂಗ್‌ನೌಪಾಲ್ ಜಿಲ್ಲೆಗಳಲ್ಲಿ ಭಾನುವಾರ ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದ್ದು, ಯಾವುದೇ ಹಿಂಸಾಚಾರ ವರದಿಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಗಮ್ಘಿಫೈ ಸೇರಿ ಜಿಲ್ಲೆಯ ವಿವಿಧೆಡೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪೊಲೀಸ್ ವಾಹನಗಳು ಗಸ್ತು ತಿರುಗುತ್ತಿವೆ.
ಗೃಹ ಸಚಿವ ಅಮಿತ್ ಶಾ ಅವರ ಆದೇಶದಂತೆ ರಾಜ್ಯದಲ್ಲಿ ಶನಿವಾರದಿಂದ ಮುಕ್ತ ಸಂಚಾರ ಜಾರಿಯಾಗಿತ್ತು. ಅದರ ಮೊದಲ ದಿನವೇ ಕುಕಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ 1 ಸಾವನ್ನಪ್ಪಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ನೀರಿನ ಟ್ಯಾಂಕ್ ಸ್ವಚ್ಛತೆ ವೇಳೆ ಉಸಿರುಗಟ್ಟಿ 5 ಕಾರ್ಮಿಕರು ಬಲಿ
ಮುಂಬೈ: ದಕ್ಷಿಣ ಮುಂಬೈನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಐವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ನಾಗಪಾಡ ಪ್ರದೇಶದ ಡಿಮ್ಟಿಮ್ಕರ್ ರಸ್ತೆಯಲ್ಲಿರುವ ಬಿಸ್ಮಿಲ್ಲಾ ಸ್ಪೇಸ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು 5 ಮಂದಿ ಒಳಗೆ ಹೋಗಿ, ಅಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿತಾದರೂ, ಅಷ್ಟರಲ್ಲಾಗಲೇ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಶೈಲಂ ಸುರಂಗ ಕುಸಿತ: ಮೊದಲ ಬಾರಿ 1 ಮೃತದೇಹ ಪತ್ತೆ
ನಾಗರಕರ್ನೂಲ್ (ತೆಲಂಗಾಣ): ನಿರ್ಮಾಣ ಹಂತದಲ್ಲಿರುವ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗ ಕುಸಿದು 2 ವಾರಗಳ ಬಳಿಕ, ಒಳಗೆ ಸಿಲುಕಿದ್ದ 8 ಕಾರ್ಮಿಕರ ಪೈಕಿ ಒಬ್ಬರ ಮೃತದೇಹ ಸಿಕ್ಕಿದೆ. ಇಲ್ಲಿ ಶವ ಪತ್ತೆ ಆಗಿದ್ದು ಇದೇ ಮೊದಲು.
ತೆಲಂಗಾಣ ಸರ್ಕಾರ ಕಾರ್ಮಿಕರ ಪತ್ತೆಗೆ ಪೊಲೀಸ್ ನಾಯಿಗಳನ್ನು ನಿಯೋಜಿಸಿತ್ತು. ನಾಯಿಗಳು ಸೂಚಿಸಿದ ಸ್ಥಳಗಳಲ್ಲಿ ರಕ್ಷಣಾ ಸಿಬ್ಬಂದಿಗಳು ಅಗೆಯುವಿಕೆ ನಡೆಸಿದ್ದರು. ಆ ಬಳಿಕ ಒಂದು ಶವ ಪತ್ತೆಯಾಗಿದೆ. ಅದನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಫೆ.22ರಂದು ಅವಘಡ ಸಂಭವಿಸಿದಂದಿನಿಂದ ಎನ್‌ಡಿಆರ್‌ಎಫ್, ಭಾರತೀಯ ಸೇನೆ, ನೌಕಾಪಡೆ ಸೇರಿದಂತೆ ಅನೇಕ ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದವು.
ಜಮ್ಮು: ಮುರಳೀಧರನ್ ಬಾಟ್ಲಿಂಗ್ ಘಟಕಕ್ಕೆ ಪುಕ್ಕಟೆ ಜಮೀನು?
ಶ್ರೀನಗರ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಮಾಲೀಕತ್ವದ ಬಾಟ್ಲಿಂಗ್ ಘಟಕ ಸ್ಥಾಪನೆಗೆ ಜಮ್ಮು ಕಾಶ್ಮೀರದ ಕಠುವಾದಲ್ಲಿ ಪುಕ್ಕಟೆಯಾಗಿ ಜಮೀನು ನೀಡಲಾಗಿದೆ ಎಂದು ವರದಿಯಾಗಿದೆ. ಇದು ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಸರ್ಕಾರದ ನಡೆಗೆ ವಿಪಕ್ಷಗಳು ಆಕ್ಷೇಪಿಸಿವೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲ, ಪರಿಶೀಲಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.ಮುರಳೀಧರನ್ ಒಡೆತನದ ಸಿಲೋನ್ ಪಾನೀಯ ಕಂಪನಿಗೆ 1,600 ಕೋಟಿ ಬಾಟಲಿಗಳಿಗೆ ನೀರು ತುಂಬಿಸುವ ಹಾಗೂ ಅಲ್ಯುಮಿನಿಯಂ ಕ್ಯಾನ್ ತಯಾರಿಸುವ ಘಟಕ ಸ್ಥಾಪಿಸಲು 25.75 ಎಕರೆ ಜಾಗವನ್ನು ಪುಕ್ಕಟೆಯಾಗಿ ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಬಜೆಟ್ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕಳವಳ ವ್ಯಕ್ತಪಡಿಸಿವೆ.
ಇದಕ್ಕೆ ಉತ್ತರಿಸಿದ ಕೃಷಿ ಉತ್ಪಾದನೆ ಸಚಿವ ಜಾವೇದ್ ಅಹ್ಮದ್ ದಾರ್, ‘ಇದು ಕಂದಾಯ ಇಲಾಖೆಗೆ ಸಂಬಂಧಿಸಿದ ವಿಷಯ. ನಮಗೆ ಯಾವ ಮಾಹಿತಿಯೂ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತೇವೆ’ ಎಂದಿದ್ದಾರೆ.ಈ ಹಿಂದೆ ಕರ್ನಾಟಕದ ಧಾರವಾಡದಲ್ಲೂ ಮುರಳೀಧರನ್ ಅವರ ಬಾಟ್ಲಿಂಗ್ ಘಟಕಕ್ಕೆ ಜಾಗ ನೀಡಿಕೆ ವಿಷಯ ವಿವಾದಕ್ಕೆ ಕಾರಣವಾಗಿತ್ತು.
ಬಿಎಂಡಬ್ಲು ಕಾರಿಂದ ಇಳಿದು ಜಂಕ್ಷನ್ನಲ್ಲೇ ಮೂತ್ರ: ಕ್ಷಮೆಯಾಚನೆ
ಪುಣೆ: ಕುಡಿದ ಮತ್ತಿನಲ್ಲಿ ಬಿಎಂಡಬ್ಲು ಕಾರಿನಿಂದಿಳಿದು ಇಲ್ಲಿನ ಯೆರವಾಡಾದ ಶಾಸ್ತ್ರಿನಗರ ಜಂಕ್ಷನ್‌ನಲ್ಲಿ ಮೂತ್ರ ಮಾಡಿದ್ದ ಉದ್ಯಮಿ ಮನೋಜ್ ಅಹುಜಾ ಅವರ ಪುತ್ರ ಗೌರವ್ ಅಹುಜಾರ ವಿಡಿಯೋ ವೈರಲ್ ಆಗಿದ್ದು, ಘಟನೆ ಸಂಬಂಧ ಅವರು ಕ್ಷಮೆ ಯಾಚಿಸಿದ್ದಾರೆ. ಬಳಿಕ ಪೊಲೀಸರೆದುರು ಶರಣಾಗಿದ್ದು, ಪುಣೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.ಕ್ಷಮಾಪಣೆಯ ವಿಡಿಯೋದಲ್ಲಿ ಅಹುಜಾ, ‘ನಾನು ಮಾಡಿದ್ದು ತಪ್ಪು. ಇದಕ್ಕಾಗಿ ಸಾರ್ವಜನಿಕರು, ಪೊಲೀಸ್ ಇಲಾಖೆ ಹಾಗೂ (ಡಿಸಿಎಂ) ಶಿಂಧೆಯವರಲ್ಲಿ ಕ್ಷಮೆ ಯಾಚಿಸುತ್ತೇನೆ. ನನ್ನ ಪರಿವಾರದವರಿಗೆ ತೊಂದರೆ ಕೊಡಬೇಡಿ. ಮುಂದಿನ 8 ಗಂಟೆಯಲ್ಲಿ ನಾನು ಯೆರವಾಡಾದ ಪೊಲೀಸ್ ಠಾಣೆಯಲ್ಲಿ ಶರಣಾಗುತ್ತೇನೆ’ ಎಂದಿದ್ದಾರೆ.
ಅಹುಜಾರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮೋಟಾರು ವಾಹನಗಳ ಕಾಯ್ದೆಯಡಿ ಸಾರ್ವಜನಿಕರಿಗೆ ಉಪದ್ರವ, ನಿರ್ಲಕ್ಷ್ಯದ ಚಾಲನೆ, ರಸ್ತೆಯಲ್ಲಿ ಅಪಾಯವನ್ನುಂಟುಮಾಡುವುದು ಸೇರಿ ಇತರೆ ಅಪರಾಧಗಳಿಗಾಗಿ ದೂರು ದಾಖಲಿಸಿಕೊಂಡಿದ್ದಾರೆ.