ಕಾಂಗ್ರೆಸ್‌ನಲ್ಲೇ ಇದ್ದು ಬಿಜೆಪಿ ಪರ ಕೆಲಸ - 40 ಮಂದಿ ಉಚ್ಚಾಟಿಸಲೂ ನಾವು ಹಿಂಜರಿಯಲ್ಲ : ರಾಗಾ

Published : Mar 09, 2025, 09:28 AM IST
Congress LoP Rahul Gandhi (Photo/ANI)

ಸಾರಾಂಶ

ಕಾಂಗ್ರೆಸ್‌ನಲ್ಲೇ ಇದ್ದು ಬಿಜೆಪಿ ಪರ ಕೆಲಸ ಮಾಡುವ ನಾಯಕರು, ಕಾರ್ಯಕರ್ತರನ್ನು ಗುರುತಿಸಿ ಪ್ರತ್ಯೇಕಿಸುವ ಅಗತ್ಯವಿದೆ ಎಂದು ಹೇಳಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು, ಅಂಥವರ ವಿರುದ್ಧ ಪಕ್ಷದಿಂದಲೇ ಉಚ್ಚಾಟಿಸುವಂಥ ಕಠಿಣ ಕ್ರಮಕ್ಕೂ ಹೇಸಲ್ಲ ಎಂದು ಎಚ್ಚರಿಸಿದ್ದಾರೆ.

 ಅಹಮದಾಬಾದ್‌: ಕಾಂಗ್ರೆಸ್‌ನಲ್ಲೇ ಇದ್ದು ಬಿಜೆಪಿ ಪರ ಕೆಲಸ ಮಾಡುವ ನಾಯಕರು, ಕಾರ್ಯಕರ್ತರನ್ನು ಗುರುತಿಸಿ ಪ್ರತ್ಯೇಕಿಸುವ ಅಗತ್ಯವಿದೆ ಎಂದು ಹೇಳಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು, ಅಂಥವರ ವಿರುದ್ಧ ಪಕ್ಷದಿಂದಲೇ ಉಚ್ಚಾಟಿಸುವಂಥ ಕಠಿಣ ಕ್ರಮಕ್ಕೂ ಹೇಸಲ್ಲ ಎಂದು ಎಚ್ಚರಿಸಿದ್ದಾರೆ. ‘ಅಗತ್ಯಬಿದ್ದರೆ ಹತ್ತು ಮಂದಿಯಾದರೂ ಸರಿ, 40 ಮಂದಿಯಾದರೂ ಸರಿ ನಾವು ಅವರನ್ನು ಪಕ್ಷದಿಂದ ಹೊರಹಾಕಲು ಸಿದ್ಧ’ ಎಂದು ಹೇಳಿದ್ದಾರೆ.

ಎರಡು ದಿನಗಳ ಗುಜರಾತ್‌ ಭೇಟಿಯಲ್ಲಿರುವ ಅವರು ಶನಿವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ‘ನಾವು ಪಕ್ಷದ ಹಿತದೃಷ್ಟಿಯಿಂದ ಮೊದಲು ಮಾಡಬೇಕಿರುವ ಕೆಲಸವೆಂದರೆ ಅದು ಕಾಂಗ್ರೆಸ್‌ನಲ್ಲಿರುವ ಎರಡು ಗುಂಪಿನ ನಾಯಕರು ಮತ್ತು ಕಾರ್ಯಕರ್ತರನ್ನು ಪ್ರತ್ಯೇಕಿಸುವುದು. ಮೊದಲನೆಯ ಗುಂಪು ಪಕ್ಷದ ಸಿದ್ಧಾಂತ ಹೃದಯದಲ್ಲಿಟ್ಟುಕೊಂಡು ಜನರ ಜನತೆ ನಿಲ್ಲುವವರದ್ದಾದರೆ, ಇನ್ನೊಂದು ಗುಂಪು ಜನರಿಂದ ಅಂತರ ಕಾಯ್ದುಕೊಂಡವರದ್ದು. ಈ ಎರಡನೇ ಗುಂಪಲ್ಲಿ ಅರ್ಧದಷ್ಟು ಮಂದಿ ಬಿಜೆಪಿ ಜತೆ ಗುರುತಿಸಿಕೊಂಡವರೇ ಇದ್ದಾರೆ. ಕಾಂಗ್ರೆಸ್‌ನಲ್ಲಿ ಈ ಎರಡು ಗುಂಪುಗಳನ್ನು ಪ್ರತ್ಯೇಕಿಸುವ ಕೆಲಸವಾಗದೆ ಹೋದರೆ ಗುಜರಾತಿನ ಜನರಿಗೆ ಯಾವತ್ತಿಗೂ ಪಕ್ಷದ ಮೇಲೆ ನಂಬಿಕೆ ಬರುವುದಿಲ್ಲ ಎಂದರು.

ಇದೇ ವೇಳೆ, ‘ಈ ಬೇರ್ಪಡಿಸುವ ಪ್ರಕ್ರಿಯೆಯಲ್ಲಿ 10, 15, 30, 40... ಮಂದಿಯನ್ನು ಪಕ್ಷದಿಂದ ಹೊರಹಾಕುವ ಅಗತ್ಯಬಿದ್ದರೂ ನಾವು ಆ ಕೆಲಸ ಮಾಡಲು ಸಿದ್ಧ. ಈ ಮೂಲಕ ನಾವು ಮೇಲ್ಪಂಕ್ತಿ ಹಾಕಬೇಕಿದೆ’ ಎಂದರು.

ಕಾಂಗ್ರೆಸ್‌ನಲ್ಲಿದ್ದುಕೊಂಡೇ ರಹಸ್ಯವಾಗಿ ಬಿಜೆಪಿ ಪರ ಕೆಲಸ ಮಾಡುತ್ತಿರುವವರು ಹೊರಹೋಗಬೇಕು, ಅವರು ಬಿಜೆಪಿ ಪರ ಬಹಿರಂಗವಾಗಿ ಕೆಲಸ ಮಾಡಲಿ. ಇಂಥವರಿಗೆ ಬಿಜೆಪಿಯಲ್ಲೂ ಜಾಗ ಇರುವುದಿಲ್ಲ. ಅವರೂ ಇವರನ್ನು ಪಕ್ಷದಿಂದ ಹೊರಗೆಸೆಯಲಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಕಿಡಿ:

ರಾಹುಲ್‌ ಗಾಂಧಿ ಹೇಳಿಕೆಗೆ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲ ಅವರು ವ್ಯಂಗ್ಯವಾಡಿದ್ದಾರೆ. ಅವರು ತಮ್ಮನ್ನು ತಾವು ಹಾಗೂ ಪಕ್ಷವನ್ನು ಟ್ರೋಲ್‌ ಮಾಡಿಕೊಂಡಿದ್ದಾರೆ. ಅವರು ತಮ್ಮ ಮುಖಕ್ಕೆ ತಾವೇ ಕನ್ನಡಿ ಇಟ್ಟುಕೊಂಡಿದ್ದಾರೆ. ಗುಜರಾತ್‌ನಲ್ಲಿ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ರಾಹುಲ್‌ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಗುಜರಾತ್‌ನಲ್ಲಿ ಕಾಂಗ್ರೆಸ್‌ ದಶಕಗಳಿಂದ ಅಧಿಕಾರದಿಂದ ವಂಚಿತವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ