ಉಜ್ಜೈನಿಯ ವೈದಿಕ ಗಡಿಯಾರಕ್ಕೆ ಸೈಬರ್‌ ದಾಳಿ: ವೇಗ ಇಳಿಮುಖ

KannadaprabhaNewsNetwork | Updated : Mar 09 2024, 08:44 AM IST

ಸಾರಾಂಶ

ಈ ಕುರಿತು ಸೈಬರ್‌ ಪೋರ್ಟಲ್‌ನಲ್ಲಿ ದೂರು ದಾಖಲಿಸಿರುವ ನಿರ್ವಹಣಾ ಸಂಸ್ಥೆ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕೋರಿದೆ.

ಉಜ್ಜಯಿನಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡ ವಿಕ್ರಮಾದಿತ್ಯ ವೈದಿಕ ಗಡಿಯಾರದ ತಂತ್ರಜ್ಞಾನಕ್ಕೆ ಗುರುವಾರ ದುಷ್ಕರ್ಮಿಗಳು ಸೈಬರ್‌ ದಾಳಿ ನಡೆಸಿದ ಪರಿಣಾಮ ಗಡಿಯಾರದ ವೇಗ ಇಳಿಮುಖಗೊಂಡಿದೆ. 

ಈ ಕುರಿತು ಮಾಹಿತಿ ನೀಡಿದ ವಿಕ್ರಮಾದಿತ್ಯ ಶೋಧಪೀಠದ ನಿರ್ದೇಶಕರಾದ ಶ್ರೀರಾಮ್‌ ತಿವಾರಿ, ‘ವಿಕ್ರಮಾದಿತ್ಯ ವೈದಿಕ ಗಡಿಯಾರ ನಿರ್ವಹಣೆ ಮಾಡುವ ಆ್ಯಪ್‌ಗೆ ಗುರುವಾರ ರಾತ್ರಿ ದುಷ್ಕರ್ಮಿಗಳು ಸೈಬರ್‌ ದಾಳಿ ಮಾಡಿದ ಪರಿಣಾಮ ಗಡಿಯಾರದ ವೇಗ ಕಡಿಮೆಯಾಗಿದೆ. 

ಶುಕ್ರವಾರ ಪರಿಶೀಲನೆ ನಡೆಸಿ ರಾಷ್ಟ್ರೀಯ ಸೈಬರ್‌ ಅಪರಾಧ ನಿಗ್ರಹ ದಳಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ಏನಿದು ವೈದಿಕ ಗಡಿಯಾರ?
ಉಜ್ಜೈನಿಯಲ್ಲಿರುವ ವೈದಿಕ ಗಡಿಯಾರವು 300 ವರ್ಷಕ್ಕೂ ಮುಂಚೆ ಪ್ರಪಂಚದ ಕಾಲಮಾನವನ್ನು ನಿರ್ಧರಿಸಲಾಗುತ್ತಿತ್ತು ಎಂದು ನಂಬಲಾಗಿದೆ.

ಇದರ ಸಮಯ ನಿರ್ಧಾರಕ ಭಾರತೀಯ ಪಂಚಾಂಗ ಮತ್ತು ಖಗೋಳಶಾಸ್ತ್ರದ ಪದ್ಧತಿಯನ್ನು ಅನುಸರಿಸಿ ರೂಪಿಸಲಾಗಿದೆ. ಇದು ಅತ್ಯಂತ ಕರಾರುವಕ್ಕಾದ ಮತ್ತು ದೋಷರಹಿತ ಸಮಯ ನಿರ್ವಹಣಾ ಸಾಧನವಾಗಿದೆ. 

ಇದರಲ್ಲಿ ದಿನದ ಆರಂಭ ಗ್ರೀನ್‌ವಿಚ್‌ ಕಾಲಮಾನದಂತೆ ರಾತ್ರಿ 12 ಗಂಟೆಗೆ ಬದಲಾಗಿ ಸೂರ್ಯೋದಯದ ವೇಳೆ ಬರುವ ಬ್ರಾಹ್ಮಿ ಮುಹೂರ್ತದಲ್ಲಿ ಆಗುತ್ತದೆ. 

ಭಾರತೀಯ ಸಂಸ್ಕೃತಿಯನ್ನು ಪುನರುತ್ಥಾನ ಮಾಡುವ ಉದ್ದೇಶದೊಂದಿಗೆ ಇದನ್ನು ಪ್ರಧಾನಿ ಮೋದಿ ಕಳೆದ ಫೆ.29ರಂದು ಮರುಸ್ಥಾಪನೆ ಮಾಡಿದ್ದರು.

Share this article