ಹೋರ್ಮುಜ್‌ ನಿರ್ಬಂಧ ಉಲ್ಲಂಘನೆ ಒಪ್ಪಲ್ಲ : ಭಾರತಕ್ಕೆ ಅಮೆರಿಕ ಎಚ್ಚರಿಕೆ

KannadaprabhaNewsNetwork |  
Published : Jun 14, 2026, 02:00 AM ISTUpdated : Jun 14, 2026, 04:46 AM IST
Rubio

ಸಾರಾಂಶ

ಹೋರ್ಮುಜ್‌ನಲ್ಲಿ ಸಂಚರಿಸುವ ಭಾರತೀಯ ಹಡಗುಗಳ ಮೇಲೆ ದಾಳಿ ಮಾಡದಂತೆ ಅಮೆರಿಕಕ್ಕೆ ಭಾರತ ತಾಕೀತು ಮಾಡಿದ ಬೆನ್ನಲ್ಲೇ, ‘ಅಮೆರಿಕದ ನಿರ್ಬಂಧವನ್ನು ಉಲ್ಲಂಘಿಸಿ, ಹೋರ್ಮುಜ್‌ನಲ್ಲಿ ಇರಾನ್‌ ತೈಲವನ್ನು ಅಕ್ರಮವಾಗಿ ಸಾಗಿಸುವುದನ್ನು ನಾವು ಸಹಿಸಲ್ಲ’ ಎಂದು ಅಮೆರಿಕ ತಿರುಗೇಟು ನೀಡಿದೆ.  

 ವಾಷಿಂಗ್ಟನ್‌: ಹೋರ್ಮುಜ್‌ನಲ್ಲಿ ಸಂಚರಿಸುವ ಭಾರತೀಯ ಹಡಗುಗಳ ಮೇಲೆ ದಾಳಿ ಮಾಡದಂತೆ ಅಮೆರಿಕಕ್ಕೆ ಭಾರತ ತಾಕೀತು ಮಾಡಿದ ಬೆನ್ನಲ್ಲೇ, ‘ಅಮೆರಿಕದ ನಿರ್ಬಂಧವನ್ನು ಉಲ್ಲಂಘಿಸಿ, ಹೋರ್ಮುಜ್‌ನಲ್ಲಿ ಇರಾನ್‌ ತೈಲವನ್ನು ಅಕ್ರಮವಾಗಿ ಸಾಗಿಸುವುದನ್ನು ನಾವು ಸಹಿಸಲ್ಲ’ ಎಂದು ಅಮೆರಿಕ ತಿರುಗೇಟು ನೀಡಿದೆ. ಇದು ಭಾರತ-ಅಮೆರಿಕ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿದೆ.

3 ಹಡಗುಗಳ ಮೇಲೆ ದಾಳಿ

ಇತ್ತೀಚೆಗೆ ಕೊಲ್ಲಿ ದೇಶಗಳಿಂದ ತೈಲ ಹೊತ್ತು ಭಾರತದತ್ತ ಹೊರಟಿದ್ದ 3 ಹಡಗುಗಳ ಮೇಲೆ ದಾಳಿ ಅಮೆರಿಕ ನೌಕಾಪಡೆ ದಾಳಿ ನಡೆಸಿತ್ತು. ಈ ಮೂರೂ ಹಡಗುಗಳಲ್ಲಿ ಸಾಕಷ್ಟು ಪ್ರಮಾಣದ ಭಾರತೀಯ ನಾವಿಕರಿದ್ದು, ದಾಳಿಯ ವೇಳೆ ಮೂವರು ನಾವಿಕರು ಸಾವನ್ನಪ್ಪಿದ್ದರು. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಜೊತೆಗೆ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಹಿರಿಯ ಸಿಬ್ಬಂದಿಗಳನ್ನು ಎರಡು ಬಾರಿ ಕರೆಸಿಕೊಂಡು ಭಾರತೀಯರ ಜೀವ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ತಾಕೀತು ಮಾಡಿತ್ತು. ಅಲ್ಲದೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರಿಗೆ ಕರೆ ಮಾಡಿ ದಾಳಿ ಮಾಡದಂತೆ ಆಗ್ರಹಿಸಿದ್ದರು.

ಅದರ ಬೆನ್ನಲ್ಲೇ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗೋಟ್ ಮಾತನಾಡಿ, ‘ಜಲಸಂಧಿಯಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಬೇಕಿರುವುದರಿಂದ, ಎಲ್ಲಾ ವಾಣಿಜ್ಯ ಹಡಗುಗಳು ಅಮೆರಿಕದ ಆದೇಶಗಳನ್ನು ತಕ್ಷಣವೇ ಪಾಲಿಸಬೇಕು ಎಂದು ರುಬಿಯೋ ತಿಳಿಸಿದ್ದಾರೆ’ ಎಂದಿದ್ದಾರೆ.

ಇದಕ್ಕೆ ಟ್ವೀಟ್ ಮೂಲಕ ತೀಕ್ಷ್ಣವಾಗಿ ಉತ್ತರಿಸಿರುವ ಜೈಶಂಕರ್‌, ‘ವಾಣಿಜ್ಯ ಸಾಗಣೆಯ ವಿರುದ್ಧ ಇಂತಹ ಮಾರಕ ಕ್ರಮಗಳು ಸಮರ್ಥನೀಯವಲ್ಲ’ ಎಂದು ಕಿಡಿ ಕಾರಿದ್ದಾರೆ.

ಜಿ7 ಶೃಂಗದ ವೇಳೆ ಮೋದಿ- ಟ್ರಂಪ್‌ ಭೇಟಿ

ವಾಷಿಂಗ್ಟನ್‌: ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಪರಸ್ಪರ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೂ.17ರಂದು ಈ ಮಾತುಕತೆ ನಡೆಯಲಿದೆ ಎಂದು ಅಮೆರಿಕ ಮಾಹಿತಿ ನೀಡಿದೆ. ಕಳೆದ ವರ್ಷದ ಫೆಬ್ರವರಿ ಬಳಿಕದ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿರಲಿದೆ. ಮೋದಿ ಈಗಾಗಲೇ ಸ್ಲೊವಾಕಿಯಾ, ಫ್ರಾನ್ಸ್‌ ಪ್ರವಾಸದಲ್ಲಿದ್ದಾರೆ. ಟ್ರಂಪ್ ಶೃಂಗಸಭೆಗಾಗಿ ಸೋಮವಾರ ಫ್ರಾನ್ಸ್‌ಗೆ ಬಂದಿಳಿಯಲಿದ್ದಾರೆ.

ಇದು ಯುದ್ಧಾಂತ್ಯದ ಸಮಯ: ನೆತನ್ಯಾಹುಗೆ ಟ್ರಂಪ್‌ 

ವಾಷಿಂಗ್ಟನ್‌: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಕುರುಹುಗಳು ಕಾಣಿಸತೊಡಗಿರುವ ನಡುವೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಯುದ್ಧಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಇರಾನ್‌ ಜತೆಗಿನ ಶಾಂತಿ ಒಪ್ಪಂದಕ್ಕೆ ಸಹಿ ಬೀಳಲಿದೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.  

ಇದಕ್ಕೆ ಪ್ರತಿಯಾಗಿ ನೆತನ್ಯಾಹು, ಇರಾನ್‌ನ ಪರಮಾಣು ಕಾರ್ಯಕ್ರಮದ ಬಗೆಗಿನ ಕಳವಳಗಳನ್ನು ಒಪ್ಪಂದದ ಮೂಲಕ ಟ್ರಂಪ್‌ ಬಗೆಹರಿಸುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ. 

ಈ ಹಿಂದೆ ಅಮೆರಿಕದ ಇಚ್ಛೆಗೆ ವಿರುದ್ಧವಾಗಿ ಇರಾನ್‌ನ ಇಂಧನ ಮೂಲಸೌಕರ್ಯದ ಮೇಲೆ ಇಸ್ರೇಲ್‌ ದಾಳಿ ಮಾಡಿತ್ತು ಹಾಗೂ ಅದಕ್ಕೆ ಟ್ರಂಪ್‌ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಇರಾನ್‌ ಕಡೆಯಿಂದಲೂ ಒಪ್ಪಂದಕ್ಕೆ ಪೂರಕವಾದ ಪ್ರತಿಕ್ರಿಯೆ ಬರುತ್ತಿರುವ ಹೊತ್ತಿನಲ್ಲಿ ಇಸ್ರೇಲ್‌ ಮತ್ತೆ ದಾಳಿ ಮಾಡಿ ಕಲ್ಲು ಹಾಕದಿರಲಿ ಎಂದು ಟ್ರಂಪ್‌ ಪರೋಕ್ಷವಾಗಿ ಸೂಚಿಸಿದ್ದಾರೆ ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಮೆರಿಕದಲ್ಲಿನ ಸ್ವಯಂ ಶ್ರೀಮಂತರಲ್ಲಿ ಜಯಶ್ರೀ: 64000 ಕೋಟಿ ರು.ಆಸ್ತಿ
ಪುರುಷ ಶವ ಬಗ್ಗೆ ಕೀಳು ಹೇಳಿಕೆ ನೀಡಿದ್ದ ವೈದ್ಯೆಗೆ ಕಡ್ಡಾಯ ರಜೆ