;Resize=(412,232))
ಬೆಂಗಳೂರು : ವಿಷ್ಣು ಆಚಾರಿ ಬಳ್ಕೂರು, ರೆಂಜಾಳ ರಾಮಕೃಷ್ಣ ರಾವ್, ರಾಜೀವ್ ಶೆಟ್ಟಿ ಹೊಸಂಗಡಿ, ಅಶೋಕ ಹಾಸ್ಯಗಾರ, ದೇವದಾಸ ರಾವ್ ಕೊಡ್ಲಿ ಸೇರಿ ಯಕ್ಷಗಾನ ಕ್ಷೇತ್ರದ ವಿವಿಧ ಸಾಧಕರು ಕರ್ನಾಟಕ ಯಕ್ಷಗಾನ ಅಕಾಡೆಮಿಯ 2025ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಐವರು ಸಾಧಕರಿಗೆ ವಾರ್ಷಿಕ ಗೌರವ ಪ್ರಶಸ್ತಿ, 10 ಸಾಧಕರಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ಮೂರು ಪುಸ್ತಕ ಬಹುಮಾನ ಪ್ರಶಸ್ತಿ ಹಾಗೂ ಒಬ್ಬರಿಗೆ ದಿ.ಕರ್ಕಿ ಪರಮಯ್ಯ ಹಾಸ್ಯಗಾರ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಬೆಂಗಳೂರಿನ ಕನ್ನಡಭವನದಲ್ಲಿ ಬುಧವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಕಟಿಸಿದರು.
ಆಯ್ಕೆಯಾದವರಿಗೆ ಉಡುಪಿಯ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದಲ್ಲಿ ಡಿ.21ರಂದು ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ, ಪುಸ್ತಕ ಬಹುಮಾನ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ದತ್ತಿ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರು. ನಗದು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಅಕಾಡೆಮಿ ಸದಸ್ಯರಾದ ವಿನಯ ಕುಮಾರ್ ಶೆಟ್ಟಿ, ಸತೀಶ್ ಅಡಪ ಸಂಕಬೈಲ್, ಕೃಷ್ಣಪ್ಪ ಪೂಜಾರಿ ಕಿನ್ಯಾ, ರಿಜಿಸ್ಟ್ರಾರ್ ಎನ್.ನಮ್ರತಾ ಉಪಸ್ಥಿತರಿದ್ದರು.
ಬೆಳ್ತಂಡಿಯ ತೆಂಕುತಿಟ್ಟು ರೆಂಜಾಳ ರಾಮಕೃಷ್ಣ ರಾವ್, ಉತ್ತರ ಕನ್ನಡದ ಬಡಾಬಡಗು ವಿಷ್ಣುಆಚಾರಿ ಬಳ್ಕೂರು, ಬಂಟ್ವಾಳದ ತೆಂಕುತಿಟ್ಟು ಡಿ.ಮನೋಹರ್ ಕುಮಾರ್, ಉಡುಪಿಯ ಬಡಗುತಿಟ್ಟು ಮುರಲಿ ಕಡೆಕಾರ್, ರಾಮನಗರದ ಮುಖವೀಣೆ ಮೂಡಲಪಾಯದ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾಸರಗೋಡು ತೆಂಕುತಿಟ್ಟು ದಾಸನಡ್ಕರಾಮ ಕುಲಾಲ್, ಕುಂದಾಪುರದ ಬಡಗುತಿಟ್ಟು ರಾಜೀವ್ ಶೆಟ್ಟಿ ಹೊಸಂಗಡಿ, ಬೆಳ್ತಂಗಡಿ ತೆಂಕುತಿಟ್ಟು ದಾಸಪ್ಪಗೌಡ ಗೇರುಕಟ್ಟೆ, ಮಂಗಳೂರಿನ ತೆಂಕುತಿಟ್ಟು ಶ್ರೀನಿವಾಸ್ ಸಾಲ್ಯಾನ್, ವೇಣೂರು ತೆಂಕುತಿಟ್ಟು ಸದಾಶಿವ ಕುಲಾಲ್, ತೆಂಕುತಿಟ್ಟು ಬೆಳ್ಳಾರೆ ಮಂಜುನಾಥ ಭಟ್, ದಕ್ಷಿಣ ಕನ್ನಡದ ತೆಂಕುತಿಟ್ಟು ಕೇಶವ ಶಕ್ತಿನಗರ, ದಕ್ಷಿಣ ಕನ್ನಡದ ತೆಂಕುತಿಟ್ಟು ಲಕ್ಷ್ಮಣಗೌಡ ಬೆಳಾಲ್, ಮೈಸೂರು ಮೂಡಲಪಾಯ ಯಕ್ಷಗಾನದ ಸಣ್ಣ ಮಲ್ಲಯ್ಯ ಹಾಗೂ ತುಮಕೂರು ಮೂಡಲಪಾಯ ಯಕ್ಷಗಾನದ ಎ.ಜಿ.ನಾಗರಾಜು ಅವರನ್ನು ಆಯ್ಕೆ ಮಾಡಲಾಗಿದೆ.
ಪುಸ್ತಕ ಬಹುಮಾನ ಪ್ರಶಸ್ತಿಗೆ:
ಉತ್ತರ ಕನ್ನಡದ ಅಶೋಕ ಹಾಸ್ಯಗಾರ ಅವರ ‘ದಶರೂಪಗಳ ದಶಾವತಾರ’, ಉತ್ತರ ಕನ್ನಡದ ಕೆರೆ ಮನೆ ಶಿವಾನಂದ ಹೆಗಡೆ ಅವರ ‘ಆಟದ ಮೇಳ’ ಹಾಗೂ ಉಡುಪಿಯ ಮಣಿಪಾಲ ಯುನಿವರ್ಸಲ್ ಪ್ರೆಸ್‌ನ ‘ದೊಡ್ಡ ಸಾಮಗರ ನಾಲ್ಮೊಗ’ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ದಿ.ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಕುಂದಾಪುರದ ಬಡಗುತಿಟ್ಟು ದೇವದಾಸ ರಾವ್ ಕೊಡ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.