ಕಾಶ್ಮೀರ ನಮ್ಮ ಕಂಠನಾಳವಿದ್ದಂತೆ. ಇದನ್ನು ನಾವು ಮರೆಯುವುದಿಲ್ಲ : ಪಾಕ್‌ ಸೇನಾ ಮುಖ್ಯಸ್ಥನ ಕ್ಯಾತೆ

KannadaprabhaNewsNetwork |  
Published : Apr 18, 2025, 12:42 AM ISTUpdated : Apr 18, 2025, 06:00 AM IST
ಪಾಕ್ | Kannada Prabha

ಸಾರಾಂಶ

ಕಾಶ್ಮೀರ ನಮ್ಮ ಕಂಠನಾಳವಿದ್ದಂತೆ. ಇದನ್ನು ನಾವು ಮರೆಯುವುದಿಲ್ಲ. ಪಾಕ್‌ನೊಂದಿಗೆ ಸೇರಲು ಹೋರಾಡುತ್ತಿರುವ ನಮ್ಮ ಕಾಶ್ಮೀರಿ ಸೋದರರನ್ನು ನಾವು ಹಾಗೆಯೇ ಬಿಡವುದಿಲ್ಲ ಎಂದು ನೆರೆಯ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್‌ ಹೇಳಿದ್ದಾರೆ.

 ಇಸ್ಲಾಮಾಬಾದ್‌: ಕಾಶ್ಮೀರ ನಮ್ಮ ಕಂಠನಾಳವಿದ್ದಂತೆ. ಇದನ್ನು ನಾವು ಮರೆಯುವುದಿಲ್ಲ. ಪಾಕ್‌ನೊಂದಿಗೆ ಸೇರಲು ಹೋರಾಡುತ್ತಿರುವ ನಮ್ಮ ಕಾಶ್ಮೀರಿ ಸೋದರರನ್ನು ನಾವು ಹಾಗೆಯೇ ಬಿಡವುದಿಲ್ಲ ಎಂದು ನೆರೆಯ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್‌ ಹೇಳಿದ್ದಾರೆ.

ವಿದೇಶಗಳಲ್ಲಿ ನೆಲೆಸಿರುವ ಪಾಕ್‌ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಮುನೀರ್‌, ‘ನಾವು ಮತ್ತು ಹಿಂದೂಗಳು ಭಿನ್ನರು. ನಮ್ಮ ಧರ್ಮ, ಸಂಪ್ರದಾಯ, ಸಂಸ್ಕೃತಿ, ವಿಚಾರ, ಮಹತ್ವಾಕಾಂಕ್ಷೆಗಳು ಬೇರೆಬೇರೆ. ಆದ್ದರಿಂದಲೇ ಎರಡೂ ದೇಶಗಳನ್ನು ಪ್ರತ್ಯೇಕಿಸಲಾಯಿತು. ನಮ್ಮ ಪೂರ್ವಜರು ಇದಕ್ಕಾಗಿ ನಿರಂತರ ಹೋರಾಟ ನಡೆಸಿದ್ದರು. ಬಂಧುಗಳೇ, ಪಾಕಿಸ್ತಾನದ ಕತೆಯನ್ನು ಮರೆಯಬೇಡಿ ಹಾಗೂ ಅದನ್ನು ಮುಂದಿನ ಪೀಳಿಗೆಯವರಿಗೂ ತಿಳಿಸಿ’ ಎಂದು ಕರೆ ನೀಡಿದರು. ಅಂತೆಯೇ, ‘ಭಾರತದಿಂದ ವಿಭಜನೆಗೊಂಡು ಪಾಕ್‌ ಪ್ರತ್ಯೇಕ ದೇಶವಾದರೂ ವಿಭಜನೆ ವೇಳೆ ಕಾಶ್ಮೀರ ನಮಗೆ ಸಿಗಲಿಲ್ಲ. ಆದರೆ ಅದು ನಮ್ಮ ಕಂಠನಾಳವಿದ್ದಂತೆ. ಇದನ್ನು ನಾವು ಎಂದೂ ಮರೆಯುವುದಿಲ್ಲ. ಕಾಶ್ಮೀರಿ ಸಹೋದರರನ್ನು ಅವರ ಹೋರಾಟದಲ್ಲಿ ನಾವು ಕೈಬಿಡುವುದಿಲ್ಲ’ ಎಂದರು.

ಇದೇ ವೇಳೆ ಪಾಕ್‌ ಸೇನೆ ಉಗ್ರರ ಕಪಿಮುಷ್ಟಿಯಲ್ಲಿದೆ ಎಂಬ ಆರೋಪ ನಿರಾಕರಿಸಿ ಭಾರತದ ಬಗ್ಗೆ ನಾಲಗೆ ಹರಿಬಿಟ್ಟ ಮುನೀರ್‌, ‘13 ಲಕ್ಷ ಭಾರತೀಯ ಸೈನಿಕರಿಗೇ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಹೀಗಿರುವಾಗ ಉಗ್ರರಿಗೆ ಹೆದರುವುದುಂಟೇ? ಬಲೂಚಿಸ್ತಾನ ಪಾಕಿಸ್ತಾನದ ಹೆಮ್ಮೆ. ಅದನ್ನು ಕಸಿಯಲು ಉಗ್ರರ 10 ತಲೆಮಾರುಗಳಿಗೂ ಸಾಧ್ಯವಿಲ್ಲ’ ಎಂದರು.

ಕಾಶ್ಮೀರ ಯಾವತ್ತೂ ನಮ್ಮದು: ಭಾರತ ತಿರುಗೇಟು 

ನವದೆಹಲಿ: ‘ಕಾಶ್ಮೀರ ನಮ್ಮ ಕಂಠನಾಳ’ ಎಂಬ ಪಾಕ್‌ ಸೇನಾ ಮುಖ್ಯಸ್ಥ ಜ। ಅಸೀಂ ಮುನೀರ್‌ ಹೇಳಿಕೆ ಬಗ್ಗೆ ಭಾರತ ಕೆಂಡಾಮಂಡಲವಾಗಿದ್ದು, ‘ಕಾಶ್ಮೀರ ಯಾವತ್ತೂ ನಮ್ಮದು’ ಎಂದು ತಿರುಗೇಟು ನೀಡಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಬಾಹ್ಯ ವಸ್ತುವೊಂದು (ಕಾಶ್ಮೀರ) ಒಂದು ದೇಹದ (ಪಾಕ್‌ನ) ಕಂಠನಾಳವಾಗಲು ಹೇಗೆ ಸಾಧ್ಯ? ಕಾಶ್ಮೀರ ಭಾರತದ ಕೇಂದ್ರಾಡಳಿತ ಪ್ರದೇಶ. ನಮ್ಮ ಅವಿಭಾಜ್ಯ ಅಂಗ’ ಎಂದು ತಿರುಗೇಟು ನೀಡಿದ್ದಾರೆ. ಜೊತೆಗೆ, ‘ಪಾಕ್‌ ಜತೆಗಿನ ನಮ್ಮ ಏಕೈಕ ಸಂಬಂಧವೆಂದರೆ, ಅವರು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭೂಭಾಗವನ್ನು ಬಿಟ್ಟು ತೊಲಗಿಸುವುದು’ ಎಂದು ಖಾರವಾಗಿ ಉತ್ತರಿಸಿದ್ದಾರೆ.

ಇದೇ ವೇಳೆ, 26/11 ಉಗ್ರ ತಹಾವುರ್‌ ರಾಣಾನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ ಪಾಕ್‌ನ ಯತ್ನಕ್ಕೆ ತಿರುಗೇಟು ನೀಡಿದ ಅವರು, ‘ಪಾಕಿಸ್ತಾನ ಎಷ್ಟೇ ಯತ್ನಿಸಿದರೂ, ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಂಬ ಕುಖ್ಯಾತಿ ಕಡಿಮೆಯಾಗುವುದಿಲ್ಲ. ರಾಣಾನ ಹಸ್ತಾಂತರವು ಪಾಕಿಸ್ತಾನಕ್ಕೆ, ತಾನು ರಕ್ಷಿಸುತ್ತಿರುವ ಮುಂಬೈ ದಾಳಿಯ ಇತರ ಅಪರಾಧಿಗಳನ್ನು ಶಿಕ್ಷಿಸಬೇಕು ಎಂಬುದನ್ನು ನೆನಪಿಸುತ್ತದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ