ನವದೆಹಲಿ: ‘ಹಿಂದಿ ಭಾಷೆ ಬಾರದು ಎಂಬ ಏಕೈಕ ಕಾರಣಕ್ಕೆ ದೇಶದ ಮುಖ್ಯವಾಹಿನಿಯಿಂದ ಹೊರಗುಳಿಯಲು ದಕ್ಷಿಣ ಭಾರತದವರು ಬಯಸುವುದಿಲ್ಲ’ ಎಂದು ಕರ್ನಾಟಕದವರಾದ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ನ್ಯಾ। ಬಿ.ವಿ. ನಾಗರತ್ನ ಹೇಳಿದ್ದಾರೆ.
ಈ ಮೂಲಕ ಹಿಂದಿ ಹೇರಿಕೆ ಬಗ್ಗೆ ಅವರು ಪರೋಕ್ಷವಾಗಿ ಬೇಸರಿಸಿದ್ದಾರೆ.ಸುಪ್ರೀಂ ಕೋರ್ಟ್ ವಕೀಲರ ಸಂಘ ಆಯೋಜಿಸಿದ್ದ ‘ಕಾನೂನಿನಲ್ಲಿ ಮಹಿಳಾ ಸಬಲೀಕರಣ’ ಕಾರ್ಯಕ್ರಮದಲ್ಲಿ, ಆಂಗ್ಲ ಭಾಷೆ ಬಾರದ, ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ವಕೀಲರನ್ನು ಬೆಂಬಲಿಸಲು ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ವಕೀಲೆಯೊಬ್ಬರು ಕೇಳಿದ್ದರು.
ಇದಕ್ಕೆ ಉತ್ತರಿಸಿದ ನ್ಯಾ। ನಾಗರತ್ನ, ‘ವೈವಿಧ್ಯಮಯ ದೇಶವಾಗಿರುವ ಭಾರತದಲ್ಲಿ, ದಕ್ಷಿಣ ಭಾಗದಲ್ಲೇ 6 ಭಾಷೆಗಳಿವೆ. ಕನ್ನಡಿಗ ಬಾಹುಳ್ಯ ಪ್ರದೇಶಕ್ಕೆ ತಮಿಳಿಗ ಬಂದರೆ ಏನು ಮಾತನಾಡಬೇಕು? ವಿವಿಧ ಭಾಷೆಗಳನ್ನು ಮಾತನಾಡುವ ಜನರಿರುವ ಪ್ರದೇಶಗಳನ್ನು ಬೆಸೆಯಲು ಇಂಗ್ಲಿಷ್ ಅಗತ್ಯ. ಹಾಗೆಂದು, ಹಿಂದಿ ಬರುವುದಿಲ್ಲ ಎಂಬ ಏಕೈಕ ಕಾರಣಕ್ಕೆ (ಮುಖ್ಯವಾಹಿನಿಯಿಂದ) ಹೊರಗುಳಿಯಲು ದಕ್ಷಿಣ ಭಾರತೀಯರು ಬಯಸುವುದಿಲ್ಲ’ ಎಂದರು.
ಇದೇ ವೇಳೆ, ‘ಜಿಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ಮತ್ತು ಆದೇಶ ಹೊರಡಿಸಲು ಪ್ರಾದೇಶಿಕ ಭಾಷೆಗಳನ್ನು ಬಳಸಲಾಗುತ್ತದೆ. ಆದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಇದು ಸಾಧ್ಯವಿಲ್ಲ. ಕಾರಣ, ಇಲ್ಲಿ ಇಂಗ್ಲಿಷ್ ಅಧಿಕೃತ ಭಾಷೆಯಾಗಿದೆ. ಇಲ್ಲದಿದ್ದರೆ ಒಂದು ನ್ಯಾಯಾಲಯದಿಂದ ಇನ್ನೊಂದಕ್ಕೆ ನ್ಯಾಯಾಧೀಶರ ವರ್ಗಾವಣೆ ಹೇಗೆ ಸಾಧ್ಯವಾಗುತ್ತಿತ್ತು?’ ಎಂದು ವಿವರಿಸಿದ್ದಾರೆ.