-ನನಗೆ ರಾಷ್ಟ್ರ ಮೊದಲು, ಖರ್ಗೆ ಅವರಿಗೆ ತುಷ್ಟೀಕರಣ ಮೊದಲು: ಸಿಎಂ- ಯೋಗಿ ಕಾವಿ ವೇಷದಲ್ಲಿರುವ ತೋಳ ಎಂದಿದ್ದಕ್ಕೆ ತರಾಟೆ
ಮಂಗಳವಾರ ಮಹಾರಾಷ್ಟ್ರ ಬಿಜೆಪಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಯೋಗಿ, ‘ಕಳೆದ 3 ದಿನಗಳಿಂದ ನಾನು ಖರ್ಗೆ ಹೇಳಿಕೆ ಕೇಳುತ್ತಿದ್ದೇನೆ. ನಾನು ಯೋಗಿ ಮತ್ತು ನನಗೆ ರಾಷ್ಟ್ರ ಮೊದಲು, ಆದರೆ ಖರ್ಗೆ ಅವರಿಗೆ ತುಷ್ಟೀಕರಣ ರಾಜಕೀಯ ಮೊದಲು’ ಎಂದರು.ತಮ್ಮ ಮಾತಿಗೆ ಖರ್ಗೆ ಹಿನ್ನೆಲೆಯ ಉದಾಹರಣೆ ನೀಡಿದ ಅವರು, ‘ಖರ್ಗೆಯವರ ಹುಟ್ಟೂರಾದ ವಾರ್ವಟ್ಟಿ (ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಗ್ರಾಮ) ಹಿಂದೆ ಹೈದರಾಬಾದ್‌ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ, ಬ್ರಿಟಿಷ್ ಸಾಮ್ರಾಜ್ಯವು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ ಅನ್ನು ಪ್ರೋತ್ಸಾಹಿಸಿತು ಮತ್ತು ಇದಕ್ಕೆ ಕಾಂಗ್ರೆಸ್ ನಾಯಕತ್ವವು ಶರಣಾಯಿತು. ಆಗ ಸ್ವಾತಂತ್ರ್ಯ ಘೋಷಣೆ ಆದರೆ ತನ್ನ ಅಧಿಕಾರ ಹೋಗಿಬಿಡುತ್ತದೆ ಎಂದು ಭಯಪಟ್ಟ ಹೈದರಾಬಾದ್ ನಿಜಾಮ ವ್ಯಾಪಕ ಹಿಂಸಾಚಾರಕ್ಕೆ ಆದೇಶಿಸಿದ. ಈ ವೇಳೆ ಖರ್ಗೆ ಅವರ ಗ್ರಾಮವೂ ಹಿಂಸೆ ಅನುಭವಿಸಿತು. ರಜಾಕಾರರು (ನಿಜಾಮನ ಬಂಟರು) ಗ್ರಾಮವನ್ನೇ ಸುಟ್ಟುಹಾಕಿದರು. ಖರ್ಗೆ ಅವರ ತಾಯಿ, ತಂಗಿ ಹಾಗೂ ಕುಟುಂಬವನ್ನೂ ಸುಟ್ಟುಹಾಕಲಾಯಿತು’ ಎಂದು ಸ್ಮರಿಸಿದರು.‘ಆದರೆ ಖರ್ಗೆಜೀ ಇಂದು ಈ ಸತ್ಯ ಒಪ್ಪಿಕೊಳ್ಳಲು ಬಯಸಲ್ಲ, ಏಕೆಂದರೆ ಅವರು ಅದನ್ನು ಹೇಳಿದರೆ ಮುಸ್ಲಿಂ ಮತಗಳು ತಮ್ಮಿಂದ ದೂರ ಆಗುತ್ತವೆ ಎಂದು ಅವರಿಗೆ ತಿಳಿದಿದೆ. ಅವರು ಮತಕ್ಕಾಗಿ ತಮ್ಮ ಕುಟುಂಬದ ತ್ಯಾಗವನ್ನು ಮರೆತಿದ್ದಾರೆ ಮತ್ತು ಈಗ ಕಾಂಗ್ರೆಸ್ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದೆ’ ಎಂದು ಯೋಗಿ ವಾಗ್ದಾಳಿ ನಡೆಸಿದರು.