ಎಬೋಲಾ ರೋಗವು ಆಫ್ರಿಕಾ ದೇಶಗಳಾದ ಕಾಂಗೋ ಮತ್ತು ಉಗಾಂಡಾದಲ್ಲಿ 88 ಜನರನ್ನು ಬಲಿ ತೆಗೆದುಕೊಂಡು, 300ಕ್ಕೂ ಹೆಚ್ಚು ಜನರಿಗೆ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ), ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ.
ಕಾಂಗೋ, ಉಗಾಂಡಾದಲ್ಲಿ ಕಾಯಿಲೆ ತೀವ್ರ
ಸುಮಾರು 300 ಜನಕ್ಕೆ ಸೋಂಕು ಶಂಕೆ
ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಣೆ
ಅಬುಜಾ (ನೈಜೀರಿಯಾ): ಎಬೋಲಾ ರೋಗವು ಆಫ್ರಿಕಾ ದೇಶಗಳಾದ ಕಾಂಗೋ ಮತ್ತು ಉಗಾಂಡಾದಲ್ಲಿ 88 ಜನರನ್ನು ಬಲಿ ತೆಗೆದುಕೊಂಡು, 300ಕ್ಕೂ ಹೆಚ್ಚು ಜನರಿಗೆ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ), ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ.
ಕಾಂಗೋದ ಪೂರ್ವ ಪ್ರಾಂತ್ಯವಾದ ಇಟುರಿ ಸಾಂಕ್ರಾಮಿಕದ ಕೇಂದ್ರಬಿಂದು. ಇಲ್ಲಿಗೆ ಸುಮಾರು 1,000 ಕಿ.ಮೀ. ದೂರದ ರಾಜಧಾನಿ ಕಿನ್ಶಾಸಾದ ವ್ಯಕ್ತಿಯೊಬ್ಬ ಭೇಟಿ ನೀಡಿದ್ದ. ಈಗ ಅವನಿಗೆ ಎಬೋಲಾ ಹರಡಿರುವುದು ದೃಢಪಟ್ಟಿದೆ. ಉತ್ತರ ಕಿವು ಪ್ರಾಂತ್ಯದಲ್ಲೂ ಸೋಂಕು ಪತ್ತೆಯಾಗಿದೆ. ಆದರೆ ಇದು ಕೋವಿಡ್ ರೀತಿಯ ಆತಂಕಕಾರಿ ಪರಿಸ್ಥಿತಿಯನ್ನು ಉಂಟುಮಾಡುವುದಿಲ್ಲ ಎಂದು ಡಬ್ಲ್ಯುಎಚ್‌ಒ ಟ್ವೀಟ್ ಮಾಡಿದೆ. ಲಸಿಕೆಯಿಲ್ಲದ ವೈರಸ್: ಸೋಂಕು ಬುಂಡಿಬುಗ್ಯೋ ವೈರಸ್‌ನಿಂದ ಉಂಟಾಗುತ್ತದೆ. ಪ್ರಾಣಿಗಳಲ್ಲಿ ಹರಡಿ ನಂತರ ಮನುಷ್ಯನಿಗೆ ತಾಗುತ್ತದೆ. ತೀವ್ರವಾದ ಜ್ವರ, ತಲೆನೋವು ಮತ್ತು ಮೈಕೈ ನೋವು, ವಾಂತಿ- ಇದರ ಲಕ್ಷಣಗಳು.
ಎಬೋಲಾ ರೋಗದ ಅಪರೂಪದ ರೂಪವಾಗಿದ್ದು, ಇದಕ್ಕೆ ಚಿಕಿತ್ಸೆ ಅಥವಾ ಲಸಿಕೆಗಳು ಲಭ್ಯವಿಲ್ಲ. ಬುಂಡಿಬುಗ್ಯೋ ವೈರಸ್ ಮೊದಲು 2007-2008ರಲ್ಲಿ ಉಗಾಂಡಾದ ಬುಂಡಿಬುಗ್ಯೋ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಆಗ 149 ಜನ ಬಾಧಿತರಾಗಿ 37 ಜನ ಮೃತಪಟ್ಟಿದ್ದರು. 2ನೇ ಬಾರಿ 2012ರಲ್ಲಿ ಕಾಂಗೋದ ಇಸಿರೋದಲ್ಲಿ ಹರಡಿತ್ತು. ಅಲ್ಲಿ 57 ಪ್ರಕರಣಗಳು ಮತ್ತು 29 ಸಾವುಗಳು ವರದಿಯಾಗಿದ್ದವು.ಹರಡುವಿಕೆ ತಡೆಯೇ ಸವಾಲು: ಕಾಂಗೋದ ಮೊಂಗ್ವಾಲು ಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇಲ್ಲಿ ಸೋಂಕಿನ ನಿಯಂತ್ರಣ ಮತ್ತು ಸಂಪರ್ಕಿತರ ಪತ್ತೆ ಕಷ್ಟಕರವಾಗಿದೆ. ಐಸಿಸ್ ಬೆಂಬಲಿತ ಗುಂಪುಗಳ ಮಿಲಿಟರಿ ಸಂಘರ್ಷ, ಗಣಿಗಾರಿಕೆಯಿಂದಾಗಿ ಜನರ ನಿರಂತರ ವಲಸೆ ಸೋಂಕು ಹರಡುವಿಕೆ ತಡೆಯಲು ಅಡ್ಡಿಪಡಿಸಿವೆ ಎಂದು ಆಫ್ರಿಕಾ ಸಿಡಿಸಿ ನಿರ್ದೇಶಕ ಡಾ. ಜೀನ್ ಕಸೆಯಾ ಶನಿವಾರ ಆತಂಕ ವ್ಯಕ್ತಪಡಿಸಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.