10,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಇನ್ನು 1 ಗಂಟೆ ಕಾಯುವ ನಿಯಮ ಕಡ್ಡಾಯ?

KannadaprabhaNewsNetwork |  
Published : Apr 18, 2026, 03:00 AM IST
UPI

ಸಾರಾಂಶ

ಡಿಜಿಟಲ್‌ ಪಾವತಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್‌ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಇದೀಗ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಮುಂದಾಗಿದೆ.

ನವದೆಹಲಿ: ಡಿಜಿಟಲ್‌ ಪಾವತಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್‌ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಇದೀಗ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಮುಂದಾಗಿದೆ.

₹10,000ಗಿಂತ ಹೆಚ್ಚಿನ ಮೌಲ್ಯದ ವರ್ಗಾವಣೆಗಳಿಗೆ ತಕ್ಷಣ ಹಣ ಕಡಿತವಾಗುವ ಬದಲು ಒಂದು ಗಂಟೆವರೆಗೆ ಆ ಹಣವನ್ನು ಬ್ಯಾಂಕ್‌ಗಳು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಜಾರಿಗೆ ಮುಂದಾಗಿದೆ.

ಹೇಗೆ ಕಾರ್ಯ ನಿರ್ವಹಣೆ?:

ಆರ್‌ಬಿಐ ಪ್ರಸ್ತಾಪಿಸಿರುವ ಈ ನಿಯಮದ ಪ್ರಕಾರ ₹10 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಹಣ ಯಾರ ಖಾತೆಗೆ ವರ್ಗಾವಣೆ ಮಾಡಲು ಉದ್ದೇಶಿಸಲಾಗಿತ್ತೋ ಅವರ ಖಾತೆಗೆ ತಕ್ಷಣ ಪಾವತಿ ಆಗುವುದಿಲ್ಲ. ಒಂದು ಗಂಟೆ ಕಾಲ ಬ್ಯಾಂಕ್‌ ಆ ಹಣವನ್ನು ಹಿಡಿದಿಟ್ಟುಕೊಳ್ಳುತ್ತದೆ, ಬಳಿಕ ಬಿಡುಗಡೆ ಮಾಡುತ್ತದೆ. ಈ ಅವಧಿಯಲ್ಲಿ ತಪ್ಪಾಗಿ ಅಥವಾ ಗೊತ್ತಿಲ್ಲದೆ ಹಣ ವರ್ಗಾವಣೆಯಾಗಿದ್ದರೆ ಈ ಪಾವತಿಯನ್ನು ರದ್ದು ಮಾಡಲು ಗ್ರಾಹಕರಿಗೆ ಅವಕಾಶ ಸಿಗುತ್ತದೆ.

ಯಾಕೆ ಈ ನಿರ್ಧಾರ?

ಕಳೆದ ವರ್ಷ ಭಾರತದಲ್ಲಿ 22,931 ಕೋಟಿ ರು. ಡಿಜಿಟಲ್‌ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಜತೆಗೆ, ದೇಶದಲ್ಲಿ 10 ಸಾವಿರಕ್ಕಿಂತ ರು.ಗಿಂತ ಮೇಲಿನ ಹಣ ವರ್ಗಾವಣೆ ಪ್ರಕರಣಗಳಲ್ಲಿ ಹೆಚ್ಚಿನ ವಂಚನೆ, ತಪ್ಪಾಗಿ ಹಣ ವರ್ಗಾವಣೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಇಂಥದ್ದೊಂದು ಪ್ರಸ್ತಾಪ ಮುಂದಿಟ್ಟಿದೆ. ಇದರಿಂದ ತಕ್ಷಣಕ್ಕೆ ಬಳಕೆದಾರರಿಗೆ ಕಿರಿಕಿರಿಯೆನಿಸಿದರೂ ದೀರ್ಘಕಾಲದಲ್ಲಿ ಅನಾನುಕೂಲಕ್ಕಿಂತ ಅನುಕೂಲವೇ ಹೆಚ್ಚು ಎಂದು ಹೇಳಲಾಗುತ್ತಿದೆ. ಅಕ್ರಮಗಳಿಗೆ ಕಡಿವಾಣ ಹಾಕಲು ಇದು ಮಹತ್ವದ ಪಾತ್ರವಹಿಸಲಿದೆ ಎಂಬುದು ತಜ್ಞರ ಅಭಿಪ್ರಾಯ.

ನಿತ್ಯದ ಪಾವತಿಗಳ ಮೇಲೆ ಪರಿಣಾಮ ಇಲ್ಲ? 

ಅಂಗಡಿಗಳಲ್ಲಿ ಖರೀದಿಯ ಮೇಲಿನ ಪಾವತಿಗಳು, ಇಎಂಐಗಳು, ಮ್ಯೂಚುವಲ್‌ ಫಂಡ್‌ ಎಸ್‌ಐಪಿ, ಎಲ್‌ಐಸಿ ಪ್ರೀಮಿಯಂ ಕಡಿತಗಳು, ಸಬ್‌ಸ್ಕ್ರಿಪ್ಷನ್‌ಗಳ ಮೇಲೆ ಈ ಹೊಸ ನಿಯಮದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿ ಬಳಕೆದಾರರು ನಿರ್ದಿಷ್ಟ ವ್ಯಕ್ತಿಗಳ ಪಟ್ಟಿ ಮಾಡುವ ಮೂಲಕ ಆ ವ್ಯಕ್ತಿಗಳಿಗೆ ಯಾವುದೇ ಅಡೆತಡೆ ಇಲ್ಲದೆ ಹಣದ ವರ್ಗಾವಣೆಯಾಗುವಂತೆ ನೋಡಿಕೊಳ್ಳಬಹುದಾಗಿದೆ. ಅನುಮಾನಾಸ್ಪದ ಹಾಗೂ ಹೊಸ ವರ್ಗಾವಣೆಗಳಿಗೆ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಸರ್ಕಾರದ ಮೊದಲ ಮಸೂದೆ ಮಹಿಳಾ ಮೀಸಲಿಗೆ ಸೋಲು
ಹೋರ್ಮುಜ್‌ ಸಂಪೂರ್ಣ ಮುಕ್ತ : ಇರಾನ್‌ ಘೋಷಣೆ