ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಮೇಲೆ ದೌರ್ಜನ್ಯ ಆಗುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೇ ಕಾರಣ ನೀಡಿ ಈ ವರ್ಷ ಅಲ್ಲಿ ನಡೆಯಲಿರುವ ಜಿ.20 ಶೃಂಗಸಭೆಯನ್ನು ಬಹಿಷ್ಕರಿಸಿದ್ದಾರೆ. ಜತೆಗೆ ಅಮೆರಿಕದ ಯಾವೊಬ್ಬ ಅಧಿಕಾರಿಯೂ ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಆಫ್ರಿಕಾದಲ್ಲಿ ಬಿಳಿಯರ ಮೇಲೆ ದೌರ್ಜನ್ಯ: ಟ್ರಂಪ್‌ಮಾನವ ಹಕ್ಕು ಉಲ್ಲಂಘನೆಯ ಕಾರಣ ನಿರ್ಧಾರಮುಂದಿನ ವರ್ಷ ಜಿ20 ಅಮೆರಿಕದಲ್ಲೇ ನಡೆಯುತ್ತದೆಟ್ರಂಪ್ ಬಾರದಿದ್ದರೆ ಮೋದಿ ಹೋಗ್ತಾರೆ: ಕೈ ವ್ಯಂಗ್ಯನ್ಯೂಯಾರ್ಕ್/ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಮೇಲೆ ದೌರ್ಜನ್ಯ ಆಗುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೇ ಕಾರಣ ನೀಡಿ ಈ ವರ್ಷ ಅಲ್ಲಿ ನಡೆಯಲಿರುವ ಜಿ.20 ಶೃಂಗಸಭೆಯನ್ನು ಬಹಿಷ್ಕರಿಸಿದ್ದಾರೆ. ಜತೆಗೆ ಅಮೆರಿಕದ ಯಾವೊಬ್ಬ ಅಧಿಕಾರಿಯೂ ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ.
‘ಈ ತಿಂಗಳ ಕೊನೆಯಲ್ಲಿ (ನ.22, 23) ದಕ್ಷಿಣ ಆಫ್ರಿಕಾದಲ್ಲಿ ಜಿ20 ಸಭೆ ನಡೆಯುತ್ತಿರುವುದು ಅವಮಾನಕರ. ಅಲ್ಲಿ ಅಲ್ಪಸಂಖ್ಯಾತರಾಗಿರುವ ಡಚ್ ವಸಾಹತುಶಾಹಿಗಳು, ಫ್ರೆಂಚ್ ಮತ್ತು ಜರ್ಮನ್ ವಲಸಿಗರನ್ನು ಕೊಲ್ಲಲಾಗುತ್ತಿದೆ. ಅವರಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಆಫ್ರಿಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಿಲ್ಲುವ ತನಕ ಯಾವೊಬ್ಬ ಅಮೆರಿಕನ್ ಅಧಿಕಾರಿಯೂ ಅಲ್ಲಿಗೆ ಹೋಗುವುದಿಲ್ಲ’ ಎಂದು ಟ್ರಂಪ್ ತಮ್ಮ ಟ್ರುಥ್ ಸೋಷಿಯಲ್‌ನಲ್ಲಿ ಹೇಳಿದ್ದಾರೆ. ಜತೆಗೆ, 2026ರಲ್ಲಿ ಫ್ಲೋರಿಡಾದ ಮಿಯಾಮಿಯಲ್ಲಿ ಮುಂದಿನ ಜಿ20 ಶೃಂಗ ಏರ್ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. 2ನೇ ಬಾರಿಗೆ ಅಧ್ಯಕ್ಷ ಆದಾಗಿನಿಂದ ಆಫ್ರಿಕಾದ ವಿರುದ್ಧ ಇಂತಹ ಆರೋಪ ಮಾಡುತ್ತಿರುವ ಟ್ರಂಪ್, ಅಲ್ಲಿ ಬಿಳಿಯರ ಆಸ್ತಿಯನ್ನು ವಶಪಡಿಸಿಕೊಳ್ಳಲು ಅನುಕೂಲ ಮಾಡುವ ಕಾನೂನನ್ನು ಖಂಡಿಸಿದ್ದರು. ಮೇನಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆಯೂ ಇದೇ ವಿಷಯವಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಜತೆಗೆ, ಆ ದೇಶಕ್ಕೆ ನೀಡುತ್ತಿದ್ದ ನೆರವನ್ನೂ ನಿಲ್ಲಿಸಿದ್ದರು. ವಿಶ್ವಗುರು ಹೋಗ್ತಾರೆ-ಕೈ:ಟ್ರಂಪ್ ನಿರ್ಧಾರದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್, ‘ಈಗ ಖಂಡಿತವಾಗಿ ವಿಶ್ವಗುರು ಜಿ20 ಶೃಂಗಕ್ಕಾಗಿ ದಕ್ಷಿಣ ಆಫ್ರಿಕಾಗೆ ಹೋಗುತ್ತಾರೆ’ ಎಂದಿದೆ. ‘ಟ್ರಂಪ್‌ರನ್ನು ಭೇಟಿಯಾಗುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಕಳೆದ ತಿಂಗಳು ಮಲೇಷಿಯಾದಲ್ಲಿ ನಡೆದ ಆಸಿಯಾನ್ ಸಭೆಯಲ್ಲಿ ಮೋದಿ ವರ್ಚುವಲ್ ಆಗಿ ಭಾಗಿಯಾಗಿದ್ದರು. ಈಗ ಟ್ರಂಪ್ ಆಫ್ರಿಕಾಗೆ ಹೋಗದಿರುವುದರಿಂದ ಮೋದಿ ಖಂಡಿತ ಹೊರಡುತ್ತಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.