- ನೇಮಕಾತಿ ಪರೀಕ್ಷೆ ವೇಳೆ ಕುಸಿದು ಬಿದ್ದಿದ್ದ ಮಹಿಳೆ
- ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರೇಪ್- ಸರಣಿ ಹತ್ಯೆ ಬಳಿಕ ಬಿಹಾರದಲ್ಲಿ ಪೈಶಾಚಿಕ ಕೃತ್ಯ
ಗಯಾಜಿ: ಬಿಹಾರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಹತ್ಯೆ ಘಟನೆಗಳ ಬಳಿಕ ಇದೀಗ ಮಹಿಳೆಯೊಬ್ಬಳ ಮೇಲೆ ಪೈಶಾಚಿಕ ರೀತಿಯಲ್ಲಿ ಗ್ಯಾಂಗ್‌ರೇಪ್ ನಡೆದಿದೆ. ಹೋಮ್ ಗಾರ್ಡ್ ನೇಮಕಾತಿಯ ದೈಹಿಕ ಪರೀಕ್ಷೆ ವೇಳೆ ಕುಸಿದು ಬಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅಂಬ್ಯುಲೆನ್ಸ್‌ನಲ್ಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.ಜು.24ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಇಲ್ಲಿನ ಗಯಾ ಜಿಲ್ಲೆಯ ಬಿಹಾರ ಮಿಲಿಟರಿ ಪೊಲೀಸ್ ಮೈದಾನದಲ್ಲಿ ನಡೆದ ಗೃಹರಕ್ಷಕ ದಳದ ನೇಮಕಾತಿಯ ದೈಹಿಕ ಪರೀಕ್ಷೆ ವೇಳೆ 26 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದಿದ್ದರು. ಈ ವೇಳೆ ಅಲ್ಲಿದ್ದ ಅಧಿಕಾರಿಗಳು ಆಕೆಯನ್ನು ಸ್ಥಳದಲ್ಲಿದ್ದ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಯಾ ಪೊಲೀಸ್ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಹೊಣೆಯನ್ನು ಎಸ್‌ಐಟಿ ಮತ್ತು ವಿಧಿವಿಜ್ಞಾನ ತಂಡಕ್ಕೆ ವಹಿಸಲಾಗಿದೆ.ಘಟನೆ ಸಂಬಂಧ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಆ್ಯಂಬುಲೆನ್ಸ್ ಚಾಲಕ ವಿನಯ್ ಕುಮಾರ್ ಮತ್ತು ಟೆಕ್ನಿಷಿಯನ್ ಅಜಿತ್ ಕುಮಾರ್‌ನ್ನು ಎಸ್‌ಐಟಿ ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ.
ಜೆಡಿಯು ಬೆಂಬಲಿಸಿದ್ದಕ್ಕೆನಾಚಿಕೆ: ಕೇಂದ್ರ ಸಚಿವ
ಚಿರಾಗ್ ಪಾಸ್ವಾನ್ ಕಿಡಿಪಟನಾ: ಬಿಹಾರದಲ್ಲಿ ಸರಣಿ ಕೊಲೆ, ಅಂಬ್ಯುಲೆನ್ಸ್‌ನಲ್ಲೇ ಮಹಿಳೆ ಮೇಲೆ ಅತ್ಯಾಚಾರದಂತಹ ಹೀನಕೃತ್ಯ ನಡೆದ ಬೆನ್ನಲ್ಲೇ ಬಿಹಾರ ಸರ್ಕಾರದ ವಿರುದ್ಧ ಎನ್‌ಡಿಐ ಮೈತ್ರಿ ನಾಯಕರೇ ತಿರುಗಿ ಬಿದ್ದಿದ್ದಾರೆ. ಈ ಬಗ್ಗೆ ಲೋಕ ಜನಶಕ್ತಿ ಪಕ್ಷದ ನಾಯಕ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಕಿಡಿ ಕಾರಿದ್ದು, ‘ಅಪರಾಧಗಳು ಅತಿರೇಕವಾಗಿ ನಡೆಯುತ್ತಿದ್ದರೂ ನಿಯಂತ್ರಿಸದ ಸರ್ಕಾರವನ್ನು ಬೆಂಬಲಿಸುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ. ಆಡಳಿತವು ಅಪರಾಧಿಗಳ ಎದುರು ಸಂಪೂರ್ಣ ತಲೆಬಾಗಿದೆ. ಇಂತಹ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪರಿಸ್ಥಿತಿ ಭಯಾನಕವಾಗಿರುತ್ತದೆ. ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪಿತೂರಿಯಾಗಿರಬಹುದು. ಆದರೆ ಅದನ್ನು ನಿಯಂತ್ರಿಸುವುದು ಆಡಳಿತದ ಜವಾಬ್ದಾರಿ. ಆದರೆ ಸರ್ಕಾರ ಸಂಪೂರ್ಣ ನಿಷ್ಪ್ರಯೋಜಕವಾಗಿದೆ. ಜನರ ಜೀವನದ ಜೊತೆ ಸರ್ಕಾರ ಆಟವಾಡು ತ್ತಿದೆ’ಎಂದು ಹರಿಹಾಯ್ದಿದ್ದಾರೆ.