ಚೆನ್ನೈ: ದಶಕಗಳಿಂದಲೂ ತ್ರಿಭಾಷಾ ಸೂತ್ರ ವಿರೋಧಿಸಿಕೊಂಡೇ ಬಂದಿರುವ ಡಿಎಂಕೆ ನಾಯಕ, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್, ‘ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡದಿದ್ದಲ್ಲಿ ಹಿಂದಿ ಬಗ್ಗೆ ನಮ್ಮ ವಿರೋಧವಿಲ್ಲ. ಬಲವಂತವಾಗಿ ಹೇರುವುದು ತಮಿಳರ ಸ್ವಾಭಿಮಾನ ಜೊತೆ ಆಟವಾಡಿದಂತೆ’ ಎಂದು ಹೇಳಿದ್ದಾರೆ.
ಜೊತೆಗೆ ‘ತಮಿಳನ್ನು ವಿರೋಧಿಸುವವರು ತಮಿಳುನಾಡಿನ ಕಲ್ಯಾಣದ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆ? ತಮಿಳು ಯಾವುದೇ ಭಾಷೆಯನ್ನು ಶತ್ರುವೆಂದು ಪರಿಗಣಿಸಿಲ್ಲ. ತಮಿಳಿನ ಮೇಲೆ ಪ್ರಾಬಲ್ಯಕ್ಕೆ ಪ್ರಯತ್ನಿಸಿದರೆ ಇನ್ನೊಂದು ಭಾಷೆಯನ್ನು ಅನುಮತಿಸಿಲ್ಲ’ ಎಂದು ಕೇಂದ್ರಕ್ಕೆ ತಿರುಗೇಟು ನೀಡಿದ್ದಾರೆ.
ಹಿಂದಿ ನಾಮಫಲಕ ವಿವಾದದ ಬಗ್ಗೆಯೂ ಮಾತನಾಡಿರುವ ಸ್ಟಾಲಿನ್, ‘ರೈಲ್ವೆ ನಿಲ್ದಾಣಗಳಲ್ಲಿ ಹಿಂದಿ ವಿರೋಧಿಸುವುದು ಉತ್ತರ ಭಾರತದ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಬಿಜೆಪಿ ಹೇಳುತ್ತದೆ. ಆದರೆ ಉತ್ತರದ ನಾಮಫಲ ಕಗಳಲ್ಲಿ ತಮಿಳು ಮತ್ತು ಇತರ ದಕ್ಷಿಣ ಭಾರತೀಯ ಭಾಷೆಗಳಿವೆಯೇ?’ ಎಂದು ಪ್ರಶ್ನಿಸಿದ್ದಾರೆ.