ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕು ಆರೋಗ್ಯಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಬೇಲೂರು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಇವರ ಸಂಯುಕ್ತ ಶ್ರಯದಲ್ಲಿ ಕ್ಷಯ ಮುಕ್ತ ಭಾರತದೆಡೆಗೆ 100 ದಿನಗಳ ಅಭಿಯಾನ ಕುರಿತು ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಜಾಥಾ ಕಾರ್ಯಕ್ರಮದ ಉದ್ಘಾಟನೆಯನ್ನು ಎಂಎಸ್ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಶಿಕಲಾ ನೆರವೇರಿಸಿ ಮಾತನಾಡಿ, ಕ್ಷಯ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು ಕ್ಷಯ ರೋಗದ ಲಕ್ಷಣಗಳಾದ ಎರಡು ವಾರಕ್ಕಿಂತ ಜಾಸ್ತಿ ಕೆಮ್ಮು, ಜ್ವರ, ಕಫ ಬರುವುದು, ಹಸಿವಾಗದೆ ಇರುವುದು, ತೂಕ ಕಡಿಮೆಯಾಗುವುದು, ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ ಕಫ ಪರೀಕ್ಷೆ ಮತ್ತು ಎಕ್ಸೆರೇ ಪರೀಕ್ಷೆಯನ್ನು ಮಾಡಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಲು ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ವಿಜಯರವರು ಮಾತನಾಡಿ, ಕ್ಷಯ ಮುಕ್ತ ಭಾರತವನ್ನು ಮಾಡಲು ನೂರು ದಿನಗಳ ಅಭಿಯಾನವನ್ನು ಹಮ್ಮಿಕೊಂಡಿದ್ದು ಪ್ರತಿ ಮನೆಯಲ್ಲೂ ಭೇಟಿ ನೀಡಿ ಕ್ಷಯರೋಗದ ಲಕ್ಷಣಗಳು ಕಂಡುಬಂದರೆ ಅಂಥವರನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು.ಅಪಾಯದ ಅಂಚಿನಲ್ಲಿರುವ ಮಧುಮೇಹಿಗಳು, ಧೂಮಪಾನಿಗಳು, ಮದ್ಯಪಾನ ಸೇವಿಸುವವರು, ಅಪೌಷ್ಟಿಕತೆಯಿಂದ ಬಳಲುವವರು ವಲಸೆ ಬಂದಿರುವಂತವರಿಗೆ ಗುರುತಿಸಿ ಸ್ಕ್ರೀನಿಂಗ್ ಮಾಡಲಾಗುವುದು ಮೇಲ್ಕಂಡ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆಗೆ ಒಳಪಡುವಂತೆ ತಿಳಿಸಿದರು.
ಇದೇ ಡಿ. 7ರಿಂದ 24 ಮಾರ್ಚ್ 2025ರವರೆಗೆ 100 ದಿನಗಳ ಅಭಿಯಾನದ ರೀತಿಯಲ್ಲಿ ಸ್ಕ್ರೀನಿಂಗ್ ಮಾಡಿ ಕ್ಷಯ ರೋಗವು ಪತ್ತೆಯಾದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುವುದು. 2025ಕ್ಕೆ ಕ್ಷಯ ಮುಕ್ತ ಕರ್ನಾಟಕ 20030 ಕ್ಕೆ ಕ್ಷಯ ಮುಕ್ತ ಭಾರತವನ್ನು ಮಾಡಲು ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು.ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಅವರಿಂದ ಜಾಥಾ ಕಾರ್ಯಕ್ರಮವನ್ನು ನಡೆಸಿ ಸಾರ್ವಜನಿಕರಿಗೆ ಕ್ಷಯ ರೋಗ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಸುಧಾ, ಸರ್ಕಾರಿ ಸಹಾಯಕ ಅಭಿಯೋಜರಾದ ಶಶಿಕಲಾ,ವಕೀಲರ ಸಂಘದ ಜಿ ಸಿ ಪುಟ್ಟಸ್ವಾಮಿಗೌಡ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಉಷಾ ಕೆಎಸ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಯಾನಂದ್, ಕ್ಷಯ ರೋಗದ ಮೇಲ್ವಿಚಾರಕರಾದ ದೇವರಾಜ್, ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು ಮತ್ತು ತಂಡದವರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.