ಅಕ್ರಮವಾಗಿ 808 ಸ್ವತ್ತುಗಳಿಗೆ ‘ಎ’ ಖಾತಾ: ಎನ್‌.ಆರ್‌.ರಮೇಶ್‌

KannadaprabhaNewsNetwork |  
Published : Mar 14, 2024, 02:00 AM IST
ಎನ್‌.ಆರ್‌.ರಮೇಶ್‌ | Kannada Prabha

ಸಾರಾಂಶ

ಬಿಬಿಎಂಪಿಯಲ್ಲಿ "ಎ " ಖಾತಾ ನೀಡುವಲ್ಲಿ ಬಿಬಿಎಂಪಿ ಅಧಿಕಾರಿಗಳು ಅಕ್ರಮ ಎಸಗಿದ್ದು, ₹20 ಕೊಟಿಗೂ ಅಧಿಕ ಹಣ ನಷ್ಟ ಮಾಡಿದ್ದಾರೆ ಎಂದು ಎನ್‌.ಆರ್.ರಮೇಶ್‌ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಾಜರಾಜೇಶ್ವರ ನಗರದಲ್ಲಿ 808 ಸ್ವತ್ತುಗಳಿಗೆ ನಕಲಿ ಎ ಖಾತಾಗಳನ್ನು ಮಾಡಿಕೊಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಮಾಜಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆರೋಪಿಸಿ, ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಆರ್‌.ಆರ್‌.ನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ ವ್ಯಾಪ್ತಿಗೆ ಬರುವ ಚನ್ನಸಂದ್ರ, ಹಲಗೆವಡೇರಹಳ್ಳಿ ಮತ್ತು ಹೊಸಕೆರೆಹಳ್ಳಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಒಟ್ಟು 808 ನಕಲಿ ಖಾತೆಗಳನ್ನು ಸೃಷ್ಟಿಸಿ 20 ಕೋಟಿ ರು.ಗಿಂತ ಹೆಚ್ಚು ಹಣವನ್ನು ವಂಚಿಸಲಾಗಿದೆ ಎಂದು ದೂರಿದ್ದಾರೆ.

ನಕಲಿ ಭೂ ಪರಿವರ್ತನಾ ಆದೇಶ ಪತ್ರಗಳನ್ನು ಲಗತ್ತಿಸಿ ಎ ಖಾತಾಗಳನ್ನು ಮಾಡಲಾಗಿದೆ. ಕಚೇರಿಯಲ್ಲಿ ಮಿತಿ ಮೀರಿರುವ ಮಧ್ಯವರ್ತಿಗಳ ಹಾವಳಿಯಾಗಿದ್ದು, ಪಾಲಿಕೆಯ ಅಧಿಕಾರಿಗಳ ಆಸನಗಳಲ್ಲಿ ಕುಳಿತು ಪಾಲಿಕೆಯ ಕಡತಗಳನ್ನು ಪರಿಶೀಲಿಸುವ ಮತ್ತು ತಿದ್ದುವ ಕೆಲಸಗಳನ್ನು ಮಧ್ಯವರ್ತಿಗಳು ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಆರ್‌.ಆರ್‌.ನಗರ ವಲಯದ ಉಪ ಆಯುಕ್ತ ಅಬ್ದುಲ್‌ ರಬ್‌ ಅವರು ಅಧಿಕಾರಿಗಳು / ನೌಕರರು ಮತ್ತು ಮಧ್ಯವರ್ತಿಗಳ ಕಾನೂನು ಬಾಹಿರ ಕಾರ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

2022ರಲ್ಲಿ ಕಂದಾಯ ವಸೂಲಿಗಾರರಾಗಿದ್ದ ಸಿದ್ದನಾಯಕ್ ಎಂಬಾತ ನಿವೃತ್ತವಾಗಿ ಒಂದೂವರೆ ವರ್ಷಗಳು ಕಳೆದರೂ ಸಹ ಪ್ರತಿನಿತ್ಯ ಕಚೇರಿಗೆ ಹಾಜರಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸುವ ಕೆಲಸವನ್ನು ಮಾಡುತ್ತಿರುತ್ತಾರೆ. ಮಧ್ಯವರ್ತಿಗಳಾದ ಯಶವಂತ್ ಕುಮಾರ್, ವಿಜಯ್ ಕುಮಾರ್ ಮತ್ತು ಮುತ್ತುರಾಜ್ ಅವರ ಎಲ್ಲ ಕಾನೂನು ಬಾಹಿರ ಚಟುವಟಿಕೆಗಳಿಗೆ ಜಂಟಿ ಆಯುಕ್ತರ ಆಪ್ತ ಸಹಾಯಕ ಗುರುಶಾಂತಪ್ಪ ಎಂಬಾತ ಎಲ್ಲ ರೀತಿಯ ಸಹಾಯವನ್ನು ಮಾಡುತ್ತಿದ್ದಾನೆ ಎಂದಿದ್ದಾರೆ.

ಈ ಬೃಹತ್ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಎಲ್ಲ 808 ಸ್ವತ್ತುಗಳಿಗೆ ಸಂಬಂಧಿಸಿದ ನಕಲಿ ಎ ಖಾತಾಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ