ಜನರೇ ನೀಡಿದ ಅಧಿಕಾರ ಸದ್ಬಳಕೆಯಾಗುತ್ತಿದೆ: ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : Mar 14, 2024, 02:00 AM IST
೧೩ಕೆ.ಎಸ್.ಎ.ಜಿ.೨ | Kannada Prabha

ಸಾರಾಂಶ

ಸಾಗರದಲ್ಲಿ ಸುಮಾರು ೯೬೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧವನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಸಾಗರ

ಗ್ಯಾರಂಟಿ ಯೋಜನೆಗಳ ನಡುವೆಯೂ ರಾಜ್ಯ ಸರ್ಕಾರ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಮಾಡಿಲ್ಲ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ೯೬೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧವನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮ ಗ್ಯಾರಂಟಿಯನ್ನು ನಂಬಿ ನೀವು ನಮಗೆ ಅಧಿಕಾರ ನೀಡಿದ್ದೀರಿ. ನೀವು ನೀಡಿದ ಅಧಿಕಾರವನ್ನು ನಾವು ಸದ್ಭಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡಬೇಕಾದರೆ ಕೇಂದ್ರ ಸರ್ಕಾರದ ಸಹಾಯ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅದಕ್ಕೆ ಧ್ವನಿಯಾಗುವ ವ್ಯಕ್ತಿಯನ್ನು ಆಯ್ಕೆ ಮಾಡುವತ್ತ ನಾವು ಗಮನ ಹರಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರ ದಿನದಿಂದ ದಿನಕ್ಕೆ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಮೂಲ ಭೂತ ಸೌಲಭ್ಯಕ್ಕಾಗಿ ೫.೨೦ ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ. ಸಾಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ಗುಣಮಟ್ಟದ ಅಭಿವೃದ್ಧಿ ಕೆಲಸ ಮಾಡಲಾಗುತ್ತದೆ ಎಂದರು.

ಶಾಶ್ವತ ಧ್ವಜಸ್ತಂಭದ ಬಳಿ ಉದ್ಯಾನವನ ಹಾಗೂ ಫುಡ್‌ಕೋರ್ಟ್, ಹಳೆಯ ಬಸ್ ನಿಲ್ದಾಣ, ಕೆಳದಿ ರಸ್ತೆಯಲ್ಲಿ ಫುಡ್‌ಕೋರ್ಟ್ ನಿರ್ಮಾಣ, ೩೧ ವಾರ್ಡ್‌ಳಲ್ಲಿ ಉದ್ಯಾನವನ ನಿರ್ಮಾಣದ ಜೊತೆ ನಗರದ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಉಪವಿಭಾಗೀಯ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೆ ತಂದಿದೆ. ಸಾಗರವನ್ನು ಸಾಂಸ್ಕೃತಿಕವಾಗಿ ಗಟ್ಟಿಗೊಳಿಸಲು ೧೨ ಕೋಟಿ ರು. ವೆಚ್ಚದಲ್ಲಿ ಹೈಟೆಕ್ ರಂಗಮಂದಿರ ನೆಹರೂ ಮೈದಾನದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪ ವಿಭಾಗಾಧಿಕಾರಿ ಯತೀಶ್ ಆರ್., ತಹಶೀಲ್ದಾರ್ ಕಲಿಮುಲ್ಲಾಖಾನ್, ನಾಗೇಶ್ ಬ್ಯಾಲದ್, ಬಿ.ಎನ್.ಮಂಜುನಾಥ್, ತುಕಾರಾಂ ಡಿ. ಇನ್ನಿತರರು ಹಾಜರಿದ್ದರು. ಶಾಂತಮೂರ್ತಿ ಸ್ವಾಗತಿಸಿದರು. ದೀಪಕ್ ಸಾಗರ್ ನಿರೂಪಿಸಿದರು.ಕಾಗೋಡು ಉಪಸ್ಥಿತಿಯಲ್ಲೇ ಚಾಲನೆ

ಹಿರಿಯರಾದ ಕಾಗೋಡು ತಿಮ್ಮಪ್ಪನವರು ಆಡಳಿತ ಸೌಧ ಕಟ್ಟಡದ ಶಂಕು ಸ್ಥಾಪನೆ ಮಾಡಿದ್ದರು. ಅವರ ಉಪಸ್ಥಿತಿಯಲ್ಲಿಯೇ ನೂತನ ಕಟ್ಟಡ ಲೋಕಾರ್ಪಣೆ ಗೊಳಿಸಲಾಗಿದೆ. ಜನರು ತಮ್ಮ ಕೆಲಸವನ್ನು ಸುಲಭವಾಗಿ ಮಾಡಿಸಿಕೊಳ್ಳಲು ಆಡಳಿತಸೌಧ ಅತ್ಯಗತ್ಯವಾಗಿರುತ್ತದೆ. ಅಧಿಕಾರಿಗಳು ಸೌಲಭ್ಯ ಬಯಸಿ ಬರುವ ಜನರಿಗೆ ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು