ನಿರೀಕ್ಷೆಯಂತೆ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಬಿ.ಶ್ರೀರಾಮುಲುಗೆ ಬಿಜೆಪಿ ಟಿಕೆಟ್; ಭಿನ್ನಮತಕ್ಕಿಲ್ಲ ಆಸ್ಪದ

KannadaprabhaNewsNetwork |  
Published : Mar 14, 2024, 02:00 AM IST
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಶ್ರೀರಾಮುಲು ಅಭ್ಯರ್ಥಿ ಎಂದು ಕನ್ನಡಪ್ರಭ ಫೆ.20 ರಂದು ವರದಿ ಮಾಡಿತ್ತು.ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಶ್ರೀರಾಮುಲು ಅಭ್ಯರ್ಥಿ ಎಂದು ಕನ್ನಡಪ್ರಭ ಫೆ.20 ರಂದು ವರದಿ ಮಾಡಿತ್ತು. | Kannada Prabha

ಸಾರಾಂಶ

ಹಾಲಿ ಸಂಸದ ವೈ.ದೇವೇಂದ್ರಪ್ಪ ಹಾಗೂ ಬಿ.ಶ್ರೀರಾಮುಲು ಹೊರತುಪಡಿಸಿ, ಬೇರೆ ಯಾರೂ ಟಿಕೆಟ್ ಆಕಾಂಕ್ಷಿಗಳು ಇರಲಿಲ್ಲ. ಹೀಗಾಗಿ ಪಕ್ಷದ ಮುಖಂಡರ ನಡುವೆ ಭಿನ್ನಮತಕ್ಕೆ ಆಸ್ಪದವಾಗುವ ಸಾಧ್ಯತೆಗಳಿಲ್ಲ.

ಕೆ.ಎಂ.ಮಂಜುನಾಥ್ ಬಳ್ಳಾರಿ: ನಿರೀಕ್ಷೆಯಂತೆಯೇ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಬಿ.ಶ್ರೀರಾಮುಲು ಹೆಸರನ್ನು ಪಕ್ಷ ಘೋಷಣೆ ಮಾಡಿದ್ದು, ಹಾಲಿ ಸಂಸದ ವೈ.ದೇವೇಂದ್ರಪ್ಪ ಅವರಿಗೆ ಟಿಕೆಟ್ ಕೈ ತಪ್ಪಿದೆ.

ಹಾಲಿ ಸಂಸದ ವೈ.ದೇವೇಂದ್ರಪ್ಪ ಹಾಗೂ ಬಿ.ಶ್ರೀರಾಮುಲು ಹೊರತುಪಡಿಸಿ, ಬೇರೆ ಯಾರೂ ಟಿಕೆಟ್ ಆಕಾಂಕ್ಷಿಗಳು ಇರಲಿಲ್ಲ. ಹೀಗಾಗಿ ಪಕ್ಷದ ಮುಖಂಡರ ನಡುವೆ ಭಿನ್ನಮತಕ್ಕೆ ಆಸ್ಪದವಾಗುವ ಸಾಧ್ಯತೆಗಳಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು, ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ವಿರುದ್ಧ ಸೋಲುಂಡಿದ್ದರು. ಹೀಗಾಗಿ ಯಾವುದೇ ಅಧಿಕಾರವಿಲ್ಲದೆ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಲೋಕಸಭಾ ಚುನಾವಣೆಗೆ ಶ್ರೀರಾಮುಲು ಅವರನ್ನೇ ಅಖಾಡಕ್ಕೆ ಇಳಿಸಲಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದ್ದವು. ಪಕ್ಷದ ಕಾರ್ಯಕರ್ತರ ನಿರೀಕ್ಷೆಯಂತೆಯೇ ಶ್ರೀರಾಮುಲು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದು, ಮತ್ತೊಂದು ಸುತ್ತಿನ ಗೆಲುವಿನ ರುಚಿ ನೋಡಬೇಕು ಎಂದುಕೊಂಡಿದ್ದ ಹಾಲಿ ಸಂಸದ ವೈ.ದೇವೇಂದ್ರಪ್ಪ ಅವರಿಗೆ ತೀವ್ರ ನಿರಾಸೆಯಾಗಿದೆ. ಟಿಕೆಟ್ ದಕ್ಕಿಸಿಕೊಳ್ಳಬೇಕು ಎಂದು ನಡೆಸಿದ ಶತಾಯಗತಾಯ ಪ್ರಯತ್ನ ವಿಫಲಗೊಂಡಿದೆ.

ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಪಕ್ಷದ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕ ವಲಯದಲ್ಲೂ ಯಾವುದೇ ಅಚ್ಚರಿ ತಂದಿಲ್ಲ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀರಾಮುಲು ಗೆಲುವು ಸಾಧಿಸಿದ್ದರು. 2018ರಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮೊಳಕಾಲ್ಮುರು ಕ್ಷೇತ್ರದಿಂದ ಗೆದ್ದು, ಬಾದಾಮಿ ಕ್ಷೇತ್ರದಲ್ಲಿ ಸೋಲುಂಡಿದ್ದರು.

ಕೈ ಪಕ್ಷದ ಅಭ್ಯರ್ಥಿಯ ಕುತೂಹಲ: ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದ್ದು ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಬಿಜೆಪಿಯಲ್ಲಿ ಹೆಚ್ಚಿನ ಆಕಾಂಕ್ಷಿಗಳು ಇರಲಿಲ್ಲ. ಆದರೆ, ಕಾಂಗ್ರೆಸ್‌ನಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಸಚಿವ ಬಿ.ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್, ಸಂಡೂರು ಶಾಸಕ ಈ.ತುಕಾರಾಂ ಪುತ್ರಿ ಚೈತನ್ಯಕುಮಾರಿ ಸೇರಿದಂತೆ ನಾಲ್ಕೈದು ನಾಯಕರು ಟಿಕೆಟ್‌ಗಾಗಿ ಹಾತೊರೆಯುತ್ತಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದು, ಬಿಜೆಪಿ ಗೆಲುವು ಅಷ್ಟೊಂದು ಸುಲಭವಿಲ್ಲ ಎಂಬುದು ಕೈ ಪಕ್ಷದ ಲೆಕ್ಕಾಚಾರ. ಜಿಲ್ಲೆಯ ಎಲ್ಲ ಶಾಸಕರು ಒಗ್ಗಟ್ಟಾಗಿ ಶ್ರಮಿಸಿದರೆ ಬಿಜೆಪಿ ಅಭ್ಯರ್ಥಿಗೆ ಸೋಲುಣಿಸಲು ಸುಲಭ ಎಂದರಿತಿರುವ ಕಾಂಗ್ರೆಸ್ ಮುಖಂಡರು, ಲೋಕಸಭಾ ಅಖಾಡಕ್ಕೆ ಧುಮುಕಲು ಅಣಿಯಾಗುತ್ತಿದ್ದಾರೆ. ಆದರೆ, ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ. ಶ್ರೀರಾಮುಲು ವಿರುದ್ಧ ಸೆಣಿಸುವವರು ಯಾರು ಎಂಬ ಕೌತುಕ ಮುಂದುವರಿದಿದೆ.

ಏತನ್ಮಧ್ಯೆ, ಶಾಸಕ ಗಾಲಿ ಜನಾರ್ದನ ರೆಡ್ಡಿ ಸಂಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಚುನಾವಣೆ ಅಖಾಡದಲ್ಲಿ ಧುಮುಕುವ ಎಲ್ಲ ಸಾಧ್ಯತೆಗಳಿವೆ. ರೆಡ್ಡಿ ಬಿಜೆಪಿ ಸೇರುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದ್ದು, ಒಂದು ವೇಳೆ ಕೆಆರ್‌ಪಿಪಿ ಅಭ್ಯರ್ಥಿ ಚುನಾವಣೆ ಅಖಾಡದಲ್ಲುಳಿದರೆ ಬಿಜೆಪಿ ಮತಗಳಿಗೆ ಹೊಡೆತ ಬೀಳುವ ಎಲ್ಲ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡಿ, ಪಕ್ಷ ಘೋಷಿಸುವ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ. ನಾನು ಸಹ ಆಕಾಂಕ್ಷಿಯಾಗಿದ್ದೆ ನಿಜ. ಆದರೆ, ಪಕ್ಷ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ಎಲ್ಲವನ್ನೂ ಅಳೆದು ತೂಗಿಯೇ ನಿರ್ಧಾರ ತೆಗೆದುಕೊಳ್ಳುತ್ತದೆ. ಹೀಗಾಗಿ ಪಕ್ಷದ ತೀರ್ಮಾನಕ್ಕೆ ತಲೆಬಾಗುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಘೋಷಿತ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ.

ತಪ್ಪಿದ ಬಿಜೆಪಿ ಟಿಕೆಟ್: ಸಂಸದ‌ ದೇವೇಂದ್ರಪ್ಪ ಭಾವುಕ

ಹೊಸಪೇಟೆ: ಬಳ್ಳಾರಿ ಹಾಲಿ ಸಂಸದ ವೈ.ದೆವೇಂದ್ರಪ್ಪಗೆ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆ ಯಲ್ಲಿ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಭಾವುಕರಾದರು.ಬಿಜೆಪಿ ಲಿಸ್ಟ್ ಹೊರ ಬೀಳುತ್ತಿದ್ದಂತೆಯೇ ವಿಜಯನಗರ ಜಿಲ್ಲಾಧಿಕಾರಿ ಕಚೇರಿಯಿಂದ ತರಾತುರಿಯಲ್ಲಿ ಹರಪನಹಳ್ಳಿ ಮನೆಯ ಕಡೆ ಹೊರಟರು. ಈ ವೇಳೆ ಮಾತನಾಡಿದ ಅವರು, ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿಯೇ ಇರುವೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಹೇಳಿ ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಭಾವುಕರಾಗಿ ತೆರಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ