ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ದಂಡುಮಂಡಳಿ ಸಭಾಂಗಣದಲ್ಲಿ ಬುಧವಾರ ನಡೆದ ದಂಡುಮಂಡಳಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ದಂಡುಮಂಡಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು. ಆದರೆ, ಸಾರ್ವಜನಿಕರ ಹೊಸ ಬೋರ್‌ವೆಲ್ ಕೊರೆಯಲು ಅನುಮತಿ ಪಡೆಯಬೇಕಾಗುತ್ತದೆ. ಯಾವುದೇ ಅನುಮತಿ ಪಡೆಯದೇ ಹಾಗೂ ಏಕಾಏಕಿ ಬೋರ್‌ವೆಲ್ ಕೊರೆದರೆ ₹5 ಸಾವಿರ ದಂಡ ಕಟ್ಟಬೇಕಾಗುತ್ತದೆ. ವ್ಯಾಪಾರಕ್ಕಾಗಿ ಬೋರ್‌ವೆಲ್ ಕೊರೆದರೆ ₹10 ಸಾವಿರ ದಂಡ ವಿಧಿಸಲಾಗುವುದು ಎಂದರು.
ಕೊಂಡಪ್ಪ ಗಲ್ಲಿಯಲ್ಲಿ ಪುರಾತನ ಬಾವಿ ಇದೆ. ಇದರಲ್ಲಿ ಸಾಕಷ್ಟು ಹೂಳು ತುಂಬಿದೆ. ಈ ಬಾವಿಯನ್ನು ಶುಚಿಗೊಳಿಸಿ ಈ ಗಲ್ಲಿಯ ಜನರಿಗೆ ನಿರಂತರವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗವುದು ಎಂದರು.ದಂಡುಮಂಡಳಿಯಲ್ಲಿ ಸಾಕಷ್ಟು ಸಂಚಾರ ಸಮಸ್ಯೆಯಾಗುತ್ತಿದೆ. ಪೊಲೀಸರು ನಗರದಲ್ಲಿ ಭಾರೀ ವಾಹನ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಗೋವಾ, ಖಾನಾಪುರದಿಂದ ಬರುವ ವಾಹನಗಳನ್ನು ದಂಡುಮಂಡಳಿ ವ್ಯಾಪ್ತಿಯಲ್ಲಿ ನಿಯಂತ್ರಣ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ದಂಡು ಮಂಡಳಿ ವ್ಯಾಪ್ತಿಯಲ್ಲಿ ಮೂರು ಉದ್ಯಾನಗಳು ಬರುತ್ತವೆ. ಅದರ ನಿರ್ವಹಣೆ ಮಾಡಲು ಬಿಕೇನ್ ನೆರ್ ಮಿಟಾಯಿವಾಲಾ ಅವರಿಗೆ ನೀಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಶ್ರೀಧರ ತುಪ್ಪೇಕರ್, ಮುಖ್ಯ ಎಂಜಿನಿಯರ್ ರಾಜೀವ ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೆಳಗಾವಿ ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ದಂಡುಮಂಡಳಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳು, ವೃದ್ಧರಿಗೆ ಸಾಕಷ್ಟು ತೊಂದರೆಯಾಗಿವೆ. ದೆಹಲಿ ಮಾದರಿಯಲ್ಲಿ ದಂಡು ಮಂಡಳಿ ವ್ಯಾಪ್ತಿಯ ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕು.