ಕೃಷ್ಣಬೈರೇಗೌಡ ಸೇರಿ 5 ಸಚಿವರು ಸರ್ಕಾರಕ್ಕೆ ವಕ್ತಾರರು

KannadaprabhaNewsNetwork | Published : Mar 14, 2024 2:00 AM

ಸಾರಾಂಶ

ರಾಜ್ಯ ಸರ್ಕಾರದ ಸಾಧನೆಗಳು, ಕೆಲಸ ಕಾರ್ಯಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಐವರು ಸಚಿವರನ್ನು ರಾಜ್ಯ ಸರ್ಕಾರದ ವಕ್ತಾರರನ್ನಾಗಿ ನೇಮಕ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಆದೇಶ ಹೊರಡಿಸಿದ್ದಾರೆ.

- ದಿನೇಶ್‌, ಪ್ರಿಯಾಂಕ್‌, ಖಂಡ್ರೆ, ಲಾಡ್‌ಗೂ ಹೊಣೆ ನೀಡಿದ ಸಿಎಂ- ರಾಜ್ಯ ಸರ್ಕಾರದ ಸಾಧನೆ, ಕೆಲಸ ಜನರಿಗೆ ತಿಳಿಸುವ ಜವಾಬ್ದಾರಿಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದ ಸಾಧನೆಗಳು, ಕೆಲಸ ಕಾರ್ಯಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಐವರು ಸಚಿವರನ್ನು ರಾಜ್ಯ ಸರ್ಕಾರದ ವಕ್ತಾರರನ್ನಾಗಿ ನೇಮಕ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಆದೇಶ ಹೊರಡಿಸಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಸರ್ಕಾರದ ವಕ್ತಾರನ್ನಾಗಿ ನೇಮಕ ಮಾಡಲಾಗಿದೆ. ಈ ಐದೂ ಮಂದಿ ಸಚಿವರಿಗೆ ದಾಖಲೆಗಳು ಹಾಗೂ ಮಾಹಿತಿಗಳನ್ನು ಕಾಲ ಕಾಲಕ್ಕೆ ಒದಗಿಸುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡುವಂತೆ ಮುಖ್ಯಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಸರ್ಕಾರದ ವಕ್ತಾರರಾಗಿ ನೇಮಕಗೊಂಡಿರುವ ಸಚಿವರು ಸರ್ಕಾರದ ಸಾಧನೆಗಳನ್ನು ಸಮರ್ಥವಾಗಿ ರಾಜ್ಯದ ಜನರ ಮುಂದಿಡಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಈ ನೇಮಕ ಮಾಡಲಾಗಿದ್ದು, ರಾಜ್ಯ ಸರ್ಕಾರದ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡುವ ನಿಟ್ಟಿನಲ್ಲಿ ಈ ಸಚಿವರಿಗೆ ಮುಖ್ಯಮಂತ್ರಿಗಳು ಜವಾಬ್ದಾರಿ ನೀಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧದ ಆರ್ಥಿಕ ಅನ್ಯಾಯ ಆರೋಪ, ಪ್ರತಿಪಕ್ಷ ಬಿಜೆಪಿ ನಾಯಕಗಳ ಆರೋಪಗಳಿಗೆ ತಿರುಗೇಟು, ಬಿಜೆಪಿಯ ಮತೀಯ ನಿಲುವುಗಳು ಮತ್ತು ಸಂಘ ಪರಿವಾರದ ವಿರುದ್ಧವೂ ಈ ಸಚಿವರು ಮುಖ್ಯಮಂತ್ರಿ ಅವರ ಜೊತೆಗೆ ಗಟ್ಟಿಯಾಗಿ ಟೀಕಿಸುವ, ಸದನದಲ್ಲಿ ಹಾಗೂ ಬಹಿರಂಗವಾಗಿ ಧನಿ ಎತ್ತುವ ಕೆಲಸ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಈ ಸಚಿವರನ್ನೇ ವಕ್ತಾರರನ್ನಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

Share this article