ಹೊಸಕೋಟೆ: ತಾಲೂಕಿನ ಗುಂಡೂರು ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ವಿಚಾರವಾಗಿ ವಕೀಲ ಸಂಪತ್ ಮೇಲೆ ಅನುಗೊಂಡನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಚನ್ನೇಶ್ ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ಹೊಸಕೋಟೆ ಡಿವೈಎಸ್ಪಿ ಕಚೇರಿ ಮುಂದೆ ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ರಾಮನಗರದಲ್ಲಿ ವಕೀಲನ ಮೇಲೆ ದೌರ್ಜನ್ಯ ಪ್ರಕರಣ ಮಾಸುವ ಮುನ್ನವೇ ಹೊಸಕೋಟೆಯಲ್ಲಿ ಈ ರೀತಿ ವಕೀಲನ ಮೇಲೆ ಇನ್ಸ್‌ಪೆಕ್ಟರ್ ಚನ್ನೇಶ್ ದೌರ್ಜನ್ಯ ಮಾಡಿರುವುದು ಖಂಡನೀಯ. ಘಟನಾ ಸ್ಥಳದ ವಿಡಿಯೋ ಸಾಕ್ಷಿ ಇದ್ದು, ವಕೀಲ ಸಂಪತ್‌ರನ್ನು ತಳ್ಳಾಟ-ನೂಕಾಟ ಮಾಡಿದ್ದು ಕೂಡಲೇ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.
ಅಖಿಲ ಭಾರತ ವಕೀಲರ ಸಂಘದ ರಾಜ್ಯಾಧ್ಯಕ್ಷ ಹರೀಂದ್ರ ಮಾತನಾಡಿ, ನ್ಯಾಯ ಕೊಡಿಸುವ ವಕೀಲರಿಗೆ ಸಾರ್ವಜನಿಕರ ಎದುರಲ್ಲೇ ದೌರ್ಜನ್ಯ ಮಾಡಿದರೆ, ಸಾರ್ವಜನಿಕರಿಗೆ ವಕೀಲರಾದ ನಾವು ಯಾವ ರೀತಿ ನ್ಯಾಯ ಕೊಡಿಸಲು ಸಾಧ್ಯ. ಆದ್ದರಿಂದ ಅವರನ್ನು ಕೂಡಲೆ ಅಮಾನತು ಮಾಡಿ ಪ್ರಕರಣದ ವಿಚಾರಣೆ ಮಾಡಬೇಕು ಎಂದರು.ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ನವೀನ್, ಮಾಜಿ ಅಧ್ಯಕ್ಷರಾದ ರಮೇಶ್, ಸುಬ್ರಹ್ಮಣಿ, ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಫೋಟೋ: 13 ಹೆಚ್‌ಎಸ್‌ಕೆ 1
ವಕೀಲನ ಮೇಲೆ ದೌರ್ಜನ್ಯವೆಸಗಿರುವ ಇನ್ಸ್‌ಪೆಕ್ಟರ್ ಚನ್ನೇಶ್ ಅಮಾನತಿಗೆ ಆಗ್ರಹಿಸಿ ಹೊಸಕೋಟೆ ಡಿವೈಎಸ್ಪಿ ಕಚೇರಿ ಮುಂದೆ ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.