ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬರ ನಿರ್ವಹಣೆ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತಾ ಕ್ರಮಗಳನ್ಙು ತೆಗೆದುಕೊಳ್ಳಬೇಕು. ಗ್ರಾಮೀಣ ಪ್ರದೇಶಗಳು ಮಾತ್ರವಲ್ಲದೇ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕೂಡ ಇದೇ ರೀತಿ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಕಂಡುಬಂದಿಲ್ಲ; ಆದಾಗ್ಯೂ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸಮಸ್ಯೆ ಉದ್ಭವಿಸಿದರೆ ಅದನ್ನು ಸಮರ್ಪಕವಾಗಿ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ ಕಲಾದಗಿ ವಿವರಿಸಿದರು. ಬರಪೀಡಿತ ತಾಲೂಕುಗಳಿಗೆ ಈಗಾಗಲೇ ತಲಾ ₹ 25 ಲಕ್ಷ ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಇದಕ್ಕೂ ಮುಂಚೆ ಬೆಳಗಾವಿ ಜಿಲ್ಲೆಗೆ ₹2 ಕೋಟಿ ಕೂಡ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.ಬೆಳೆಹಾನಿ- ರೈತರ ಖಾತೆಗೆ ₹ 60.40 ಕೋಟಿ ಪರಿಹಾರ ಜಮೆ: ಬರಗಾಲದ ಬೆಳೆಹಾನಿ ಪರಿಹಾರಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ 326366 ರೈತರಿಗೆ ₹ 60.40 ಕೋಟಿ ಪರಿಹಾರ ಡಿಬಿಟಿ ಮೂಲಕ ಜಮೆ ಮಾಡಲಾಗಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿ ಕಾರ್ಯ ಆದಷ್ಟು ಬೇಗನೇ ಪೂರ್ಣಗೊಳಿಸಿ ಬೆಳೆಹಾನಿ ಪರಿಹಾರ ಸಮರ್ಪಕವಾಗಿ ವಿತರಿಸಬೇಕು. ಜಿಲ್ಲೆಯಲ್ಲಿ ಬರಗಾಲದಿಂದ ಬೆಳೆಹಾನಿಯಾಗಿರುವುದಕ್ಕೆ 4.65 ಲಕ್ಷ ರೈತರ ಪೈಕಿ ಇದುವರೆಗೆ 3.24 ಲಕ್ಷ ಜನರಿಗೆ ಪರಿಹಾರ ವಿತರಿಸಲಾಗಿದೆ. ಮುಂದಿನ ಹಂತದಲ್ಲಿ ಇನ್ನುಳಿದ ರೈತರಿಗೆ ಪರಿಹಾರ ವಿತರಣೆಗೆ ಕೂಡ ತ್ವರಿತವಾಗಿ ಅನುಮೋದನೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನಿತೇಶಪಾಟೀಲ ಮಾತನಾಡಿ, ಫಲಾನುಭವಿಗಳ ಹೆಸರು ಹಾಗೂ ಕ್ಷೇತ್ರಗಳ ಮಾಹಿತಿ ಹೊಂದಾಣಿಕೆ ಆಗದಿರುವುದರಿಂದ ತಾಂತ್ರಿಕ ಕಾರಣಗಳಿಂದ ಕೆಲವು ರೈತರಿಗೆ ಮಾತ್ರ ಇದುವರೆಗೆ ಪರಿಹಾರ ಮೊತ್ತ ಜಮೆಯಾಗಿರುವುದಿಲ್ಲ. ತಾಂತ್ರಿಕ ಸಮಸ್ಯೆ ಸರಿಪಡಿಸಿ ಆದಷ್ಟು ಬೇಗನೇ ಉಳಿದವರಿಗೂ ಪರಿಹಾರ ಜಮೆ ಮಾಡಲಾಗುವುದು. ₹72 ಸಾವಿರ ಮರಣ ಪ್ರಕರಣಗಳಿರುವುದರಿಂದ ಸ್ವಲ್ಪಮಟ್ಟಿಗೆ ತಡವಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಹೊರ ಗುತ್ತಿಗೆ ಆಧಾರಲ್ಲಿ ತಜ್ಞವೈದ್ಯರು ಆಸಕ್ತಿ ತೋರಿಸುತ್ತಿಲ್ಲ; ಆದ್ದರಿಂದ ಕಾಯಂ ತಜ್ಞ ವೈದ್ಯರನ್ನು ನೇಮಿಸಿದರೆ ಅನುಕೂಲವಾಗುತ್ತದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.
ಕ್ಯಾಲೆಂಡರ್ ಬಿಡುಗಡೆ: ಇದೇ ಸಂದರ್ಭದಲ್ಲಿ ಜಿಲ್ಲಾ ಪಙಚಾಯಿತಿ ಜಲಜೀವನ್ ಮಿಷನ್ ವತಿಯಿಂದ ಹೊರತರಲಾದ ಕ್ಯಾಲೆಂಡರ್ ಅನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ಮತ್ತಿತರರು ಇದ್ದರು.