ನಾಳೆ ಬೆಂಗಳೂರಿನಲ್ಲಿ ಬಿಜೆಪಿ ವಿಜಯ ಸಿದ್ಧತಾ ಸಭೆ: ಸುನಿಲ್‌ ಕುಮಾರ್‌

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಜನವರಿ ೮ರಂದು ಬೆಂಗಳೂರಿನಲ್ಲಿ ಬಿಜೆಪಿ ವಿಜಯ ಸಿದ್ಧತಾ ಸಭೆ ಆಯೋಜಿಸಲಾಗಿದೆ ಎಂದು ಶಾಸಕ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಲು ಅಗತ್ಯ ಕಾರ್ಯತಂತ್ರಗಳನ್ನು ರೂಪಿಸುವುದಕ್ಕೆ ಜ.8ರಂದು ಬೆಂಗಳೂರಿನಲ್ಲಿ ವಿಜಯ ಸಿದ್ಧತಾ ಸಭೆ ಆಯೋಜಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಯಡಿಯೂರಪ್ಪ ಸೇರಿ ರಾಜ್ಯದ 54 ಪ್ರಮುಖರು ಭಾಗವಹಿಸಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆ ಕಾರ್ಯತಂತ್ರ, ಪಕ್ಷದ ಮುಂದಿರುವ ಸವಾಲಗಳು, ಕ್ಷೇತ್ರವಾರು ಇರುವ ಸಮಸ್ಯೆಗಳು ಮತ್ತು ಪರಿಹಾರ, ಪಕ್ಷದ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ಅಭಿಯಾನ ರೂಪಿಸುವುದು, ಮುಂದಿನ 4 ತಿಂಗಳಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು ಇತ್ಯಾದಿಗಳ ಬಗ್ಗೆ ಈ ಸಭೆಯಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತದೆ ಎಂದರು.

ಕಾಂಗ್ರೆಸ್ ಗೆ ಭ್ರಷ್ಟಾಚಾರ ಮುಖವಾಣಿಯಾಗಿದೆ, ಹಿಂದೂ ವಿರೋಧಿ ನೀತಿ ಕಾರ್ಯಸೂಚಿಯಾಗಿದೆ, ಇದು ಸರ್ವಜನರ ಸರ್ಕಾರ ಅಲ್ಲ, ಒಂದು ಕೋಮಿನ ಸರ್ಕಾರ, ರೈತ ವಿರೋಧಿ, ಹಿಂದೂ ವಿರೋಧಿ, ಕನ್ನಡ ವಿರೋಧಿ, ದಲಿತ ವಿರೋಧಿ ಸರ್ಕಾರ, ಇದನ್ನೆಲ್ಲಾ ರಾಜ್ಯದ ಎಲ್ಲಾ ಮನೆಗಳಿಗೆ ತಲುಪಿಸುತ್ತೇವೆ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಜೆಪಿಯ ಮತಗಳನ್ನಾಗಿ ಪರಿವರ್ತನೆ ಮಾಡುತ್ತೇವೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಕಾಂಗ್ರೆಸಿನವರು ಈ ಹಿಂದೆಯೂ ರಾಜ್ಯದಲ್ಲಿ ಬಿಜೆಪಿಗೆ ಲೋಕಸಭೆಯ 5 ಸ್ಥಾನಗಳನ್ನೂ ಗೆಲ್ಲುವುದಕ್ಕೆ ಬಿಡುವುದಿಲ್ಲ ಎಂದಿದ್ದರು, ಆದರೆ ಬಿಜೆಪಿ ಗೆದ್ದಿದೆ, ಈ ಬಾರಿ 28 ಸ್ಥಾನ ಗೆಲ್ಲುತ್ತೇವೆ, ಯಾಕೆಂದರೆ ಮೋದಿಗೆ ಜನರ ಬೆಂಬಲ ಇದೆ ಎಂದು ಹೇಳಿದರು.

ರಾಮಮಂದಿರ ಬಿಜೆಪಿಯ ಚುನಾವಣಾ ವಿಷಯ ಎಂಬ ಕಾಂಗ್ರೆಸ್ ಆರೋಪಕ್ಕೆ, ಯಾವ ಕಾಲಕ್ಕೆ ಯಾವ ವಿಷಯ ಸಿಗುತ್ತವೋ ಅವುಗಳನ್ನು ಬಳಸಿಕೊಳ್ಳುತ್ತೇವೆ, ಹತ್ತು ವರ್ಷದ ಮೋದಿ ಸಾಧನೆಗಳೂ ನಮಗೆ ಚುನಾವಣೆಯ ವಿಷಯವೇ ಆಗಿದೆ, ಆದರೆ ಕಾಂಗ್ರೆಸ್‌ಗೆ ಯಾವುದೇ ವಿಷಯಗಳೇ ಇಲ್ಲ, ಅದಕ್ಕೆ ಬಿಜೆಪಿಯನ್ನು ಟೀಕಿಸ್ತಾರೆ ಎಂದು ಪ್ರಶ್ನೆಯೊಂದಕ್ಕೆ ಸುನಿಲ್‌ ಕುಮಾರ್‌ ಉತ್ತರಿಸಿದರು.

ಕಾಂಗ್ರೆಸ್‌ ವಿರುದ್ಧ ಕೋರ್ಟ್‌ಗೆ: ತಮ್ಮ ಬಗ್ಗೆ ಕಾಂಗ್ರೆಸ್ ಆರಂಭಿಸಿರುವ ಪೋಸ್ಟರ್ ಅಭಿಯಾನದ ವಿರುದ್ಧ ತಾವು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಸುನಿಲ್ ಕುಮಾರ್ ಹೇಳಿದರು.

ಕಾಂಗ್ರೆಸ್ ಈ ರೀತಿ ವೈಯುಕ್ತಿಕ ಟೀಕೆ ಮಾಡುವುದನ್ನು ಬಿಡಬೇಕು, ವೈಚಾರಿಕ ಹೋರಾಟ ಮಾಡಬೇಕು, ಇಲ್ಲದಿದ್ದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇವೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಅವ್ಯವಹಾರ ಆಗಿದ್ರೆ ತನಿಖೆ ಮಾಡಿ ಎಂದು ನೂರು ಬಾರಿ ಹೇಳುತ್ತೇನೆ, ಆದರೂ ಕಾಂಗ್ರೆಸ್ ಸರ್ಕಾರ ತನಿಖೆ ಮಾಡುತ್ತಿಲ್ಲ, ಯೋಜನೆಯನ್ನು ಪೂರ್ಣಗೊಳಿಸುವುದಕ್ಕೂ ಬಿಡುತ್ತಿಲ್ಲ. ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ ಹಣವನ್ನೇ ತಡೆ ಹಿಡಿದಿದೆ. ಬಿಜೆಪಿ ಅವಧಿಯ ಯೋಜನೆ ಜನಪ್ರಿಯ ಆಗಬಾರದು ಎನ್ನುವುದು ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದೆ ಎಂದರು.

Share this article