ಮಹಿಳೆಯರ ಹಕ್ಕುಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ

KannadaprabhaNewsNetwork |  
Published : Mar 16, 2025, 01:50 AM IST
15ಎಚ್ಎಸ್ಎನ್20 :  | Kannada Prabha

ಸಾರಾಂಶ

ಜಗತ್ತಿನ ಮಹಿಳಾ ಕಾರ್ಮಿಕರ ಹೋರಾಟದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹೊರಹೊಮ್ಮಿದ್ದು, ಮಹಿಳೆಯರ ನ್ಯಾಯಯುತ ಹಕ್ಕುಗಳಿಗಾಗಿ ಮಂಡಿಸಿರುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಎನ್.ಡಿ.ಎ ಸರಕಾರದ ಅವಧಿಗಳಲ್ಲಂತೂ ಸರಕುಗಳು ಮತ್ತು ಅಗತ್ಯ ಸೇವೆಗಳ ಮೇಲಿನ ಜಿ.ಎಸ್.ಟಿ. ಅಗತ್ಯ ಔಷಧಗಳ ಬೆಲೆಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಮೇಲೆ ನಿಯಂತ್ರಣ ರದ್ದಾಗಿರುವುದು ದೇಶದ ಸಾಮಾನ್ಯ ಜನರ ದೈನಂದಿನ ವೆಚ್ಚಗಳನ್ನು ಹೆಚ್ಚಿಸಿವೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಜಗತ್ತಿನ ಮಹಿಳಾ ಕಾರ್ಮಿಕರ ಹೋರಾಟದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹೊರಹೊಮ್ಮಿದ್ದು, ಮಹಿಳೆಯರ ನ್ಯಾಯಯುತ ಹಕ್ಕುಗಳಿಗಾಗಿ ಮಂಡಿಸಿರುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಹೇಮಾವತಿ ಪ್ರತಿಮೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದಿಂದ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂತು. ಇದೇ ವೇಳೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ ಮಾಧ್ಯಮದೊಂದಿಗೆ ಮಾತನಾಡಿ, ಭಾರತದಲ್ಲಿನ ಮಹಿಳೆಯರು ಅತ್ಯಂತ ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸನ್ನಿವೇಶದಲ್ಲಿ ಈ ವರ್ಷದ ಮಹಿಳಾ ದಿನಾಚರಣೆಯು ಆಚರಿಸಲ್ಪಡುತ್ತಿದೆ. ಮಹಿಳೆಯರ ಹಕ್ಕುಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ. ತಾರತಮ್ಯ ಅಧಿಕವಾಗುತ್ತಿದೆ. ಸಾಮಾನ್ಯ ಜನರು ಅದರಲ್ಲೂ ದುಡಿಯುವ ಮಹಿಳೆಯರ ಮೇಲೆ ಅಗತ್ಯ ವಸ್ತುಗಳ ಬೆಲೆಯೇರಿಕೆಯ ಗಧಾ ಪ್ರಹಾರ ಆಗುತ್ತಿದೆ. ಇದು ಎಲ್ಲಾ ಜನರ ಬದುಕಿನ ಮೇಲೂ ಪರಿಣಾಮ ಬೀರುತ್ತಿದೆ, ಎನ್.ಡಿ.ಎ ಸರಕಾರದ ಅವಧಿಗಳಲ್ಲಂತೂ ಸರಕುಗಳು ಮತ್ತು ಅಗತ್ಯ ಸೇವೆಗಳ ಮೇಲಿನ ಜಿ.ಎಸ್.ಟಿ. ಅಗತ್ಯ ಔಷಧಗಳ ಬೆಲೆಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಮೇಲೆ ನಿಯಂತ್ರಣ ರದ್ದಾಗಿರುವುದು ದೇಶದ ಸಾಮಾನ್ಯ ಜನರ ದೈನಂದಿನ ವೆಚ್ಚಗಳನ್ನು ಹೆಚ್ಚಿಸಿವೆ ಎಂದರು.

ಲಿಂಗತಾರತಮ್ಯ ಮುಂದುವರಿದಿದೆ:

ಕೃಷಿ ಬಿಕ್ಕಟ್ಟು ತೀವ್ರವಾಗಿರುವುದರಿಂದ ಕೆಲಸ ಅರಸಿ ವಲಸೆ ಹೋಗುವವರ ಪ್ರಮಾಣ ಜಾಸ್ತಿಯಾಗಿದೆ. ಅದರ ಪರಿಣಾಮವಾಗಿ ಅನಿವಾರ್ಯವಾಗಿ ಮಹಿಳೆಯರು ಗ್ರಾಮೀಣ ಪ್ರದೇಶಗಳಲ್ಲಿಯೇ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನಿಶ್ಚಿತ ಮತ್ತು ವೇತನ ರಹಿತ ಕೆಲಸ ಮಾಡುವವರನ್ನು ಸೇರಿಸಿಕೊಂಡರೆ ಶೇ.೭೦ರಷ್ಟು ಮಹಿಳೆಯರು ನಿರುದ್ಯೋಗವನ್ನು ಅನುಭವಿಸುತ್ತಿದ್ದಾರೆ. ವೇತನದಲ್ಲಿ ಲಿಂಗತಾರತಮ್ಯ ಮುಂದುವರೆಯುತ್ತಲೇ ಇರುವುದರಿಂದ ಮಹಿಳೆಯರು ಪುರಷರಿಗಿಂತ ಶೇ.೪೦ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗದೇ ಇರುವುದರಿಂದ ಉದ್ಯೋಗ ಅವಕಾಶದಲ್ಲಿ ಮುಂಬಡ್ತಿಯಲ್ಲಿ ಲಿಂಗತಾರತಮ್ಯವು ತೀವ್ರವಾಗಿ ಮುಂದುವರೆದಿದೆ. ಶೇ.೩೧ರಷ್ಟು ಮಹಿಳೆಯರಿಗೆ ಮಾತ್ರವೇ ಹೆರಿಗೆ ಭತ್ಯೆ ಸಿಗುತ್ತದೆ. ಬಹು ಸಂಖ್ಯೆಯಲ್ಲಿ ಸರ್ಕಾರಿ ಯೋಜನಾ ಕಾರ್ಮಿಕರಲ್ಲಿ ಮಹಿಳೆಯರೇ ಹೆಚ್ಚಿರುವ ಅಸಂಘಟಿತ ಯೋಜನಾ ಕಾರ್ಮಿಕರು, ಕೃಷಿ, ಗುತ್ತಿಗೆ-ಹೊರಗುತ್ತಿಗೆ, ಖಾಸಗಿ ನರ್ಸಿಂಗ್ ಹೊಂ, ಖಾಸಗಿ ಶಿಕ್ಷಣ ಸಂಸ್ಥೆಗಳು, ಸಣ್ಣ ಕಾರ್ಖಾನೆಗಳು ಮುಂತಾದೆಡೆ ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆ ಭತ್ಯೆ ಸೌಲಭ್ಯ ಕನಸಾಗಿದೆ ಎಂದು ದೂರಿದರು.

ಐಟಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಮಾನವೀಯವಾಗಿ ವಿಸ್ತೃತಗೊಂಡಿರುವ ಕೆಲಸದ ಒತ್ತಡಗಳಿಗೆ ಮಹಿಳೆಯರು ಬಲಿಯಾಗಿದ್ದಾರೆ. ಆರೋಗ್ಯ, ಶಿಕ್ಷಣ, ಆಹಾರ ಮುಂತಾದ ಸಾಮಾಜಿಕ ವಲಯಗಳ ಮೇಲೆ ಸರ್ಕಾರದ ವೆಚ್ಚ ಕಡಿಮೆಯಾಗುತ್ತಿದ್ದು ಇದರ ಪ್ರತಿಕೂಲ ಪರಿಣಾಮವು ಮಹಿಳೆಯರ ರಕ್ತಹೀನತೆ, ಮಕ್ಕಳ ಅಪೌಷ್ಟಿಕತೆಗೂ ಕಾರಣವಾಗುತ್ತಿದೆ. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣವು ಹೆಚ್ಚಳವಾಗುತ್ತಿದೆ. ಕೌಟುಂಬಿಕ ಹಿಂಸೆಯ ಕಾರಣದಿಂದ ಪ್ರತಿ ಆರು ಗಂಟೆಗೆ ಒಬ್ಬ ವಿವಾಹಿತ ಮಹಿಳೆ ಕೊಲೆಗಿಡಾಗುತ್ತಿದ್ದಾಳೆ. ಹೆಣ್ಣು ಭ್ರೂಣ ಹತ್ಯೆಯೂ ಸೇರಿದಂತೆ ಪ್ರತಿ ವರ್ಷಕ್ಕೆ ೫ ಲಕ್ಷ ಹೆಣ್ಣು ಮಕ್ಕಳು ಕೊಲ್ಲಲ್ಪಡುತ್ತಿದ್ದಾರೆ. ೧೫ ನಿಮಿಷಕ್ಕೊಂದು ಅತ್ಯಾಚಾರ, ಅತ್ಯಾಚಾರ ಆದ ಶೇ.೧೫ರಲ್ಲಿ ೧೮ ವರ್ಷದೊಳಗಿನ ಮಕ್ಕಳು ಇದ್ದಾರೆ ಎಂಬುದು ಆತಂಕದ ವಿಷಯವಾಗಿದೆ ಎಂದರು.

ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವುದಾಗಿ ಬಿಜೆಪಿ ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಿಲ್ಲ. ಬಿಜೆಪಿ ಆಡಳಿತ ಇರುವ ಎಲ್ಲಾ ರಾಜ್ಯದ ಸರ್ಕಾರಗಳೂ ಮಹಿಳಾ ವಿರೋಧಿ ಸಾಮಾಜಿಕ ಆಚರಣೆಗಳನ್ನು ಕಾನೂನುಬದ್ಧ ಮಾಡುತ್ತಿವೆ. ಲಿಂಗ ಅಸಮಾನತೆ ಕೂಡ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು. ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಶೋಷಣೆ ಹೋಗಲಾಡಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕಾಗಿದೆ ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಾಹಿತಿ ರೂಪ ಹಾಸನ, ಅಂಗನವಾಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ, ತೋಟದ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ಸೌಮ್ಯ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮೀನಾಕ್ಷಿ, ಜಿಲ್ಲಾ ಖಜಾಂಚಿ ಶೈಲಜ, ಅರವಿಂದ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''