ಕನ್ನಡಪ್ರಭ ವಾರ್ತೆ ತುಮಕೂರು
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆ, ಈಶ್ವರಿ ಮಹಿಳಾ ಸಮಾಜದ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಎಷ್ಟೆಲ್ಲಾ ಕಾಯ್ದೆ, ಕಾನೂನುಗಳು ರೂಪುಗೊಂಡಿದ್ದರೂ ಕೆಲವರಿಗೆ ಅವುಗಳ ಭಯವೇ ಇಲ್ಲ. ಪೋಕ್ಸೋ ಕಾಯ್ದೆ ಗಂಭೀರವಾಗಿದ್ದರೂ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ನಿಂತಿಲ್ಲ. ಇವೆಲ್ಲವನ್ನೂ ಗಮನಿಸಿದಾಗ ಇಂತಹ ದೌರ್ಜನ್ಯಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎನ್ನಿಸುತ್ತದೆ ಎಂದರು.ಹೆಣ್ಣು ಮಕ್ಕಳಿಗೆ ಭಾಷಣ ಮಾಡಿದರೆ ಸಾಲದು. ಅವರ ಹಕ್ಕುಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಸಮಾನ ಹಕ್ಕುಗಳಿಗಾಗಿ ಹೋರಾಡುತ್ತಲೇ ರಾಜಕೀಯ ಅವಕಾಶಗಳಿಗೂ ಬೇಡಿಕೆ ಇಡಬೇಕು. ಪ್ರಸ್ತುತ ಇರುವ ದೃಷ್ಟಿಕೋನಗಳು ಬದಲಾಗಿ ಘನತೆಯ ಬದುಕಿನ ಕಡೆಗೆ ಮಹಿಳೆಯರನ್ನು ಕೊಂಡೊಯ್ಯಬೇಕು. ಸಮಾನತೆ ಮತ್ತು ಘನತೆಯ ಬದುಕು ಪ್ರತಿಯೊಬ್ಬರ ಮನೆಯಿಂದಲೇ ಆರಂಭವಾಗಬೇಕು. ಆಗ ಮಾತ್ರ ಮಹಿಳಾ ಸಮಾನತೆ ಮತ್ತು ಸಬಲೀಕರಣಕ್ಕೆ ಅರ್ಥ ಸಿಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಚೇತನ್ ಕುಮಾರ್ ಮಾತನಾಡಿ, ಸಮಾನತೆ ಮತ್ತು ಸಬಲೀಕರಣ ಜೊತೆ ಜೊತೆಯಲ್ಲೇ ಸಾಗಬೇಕು. ೧೯೧೦ ರಿಂದ ಆರಂಭವಾಗಿರುವ ಕಾರ್ಮಿಕ ಮಹಿಳೆಯರ ಹೋರಾಟವನ್ನು ಗಮನಿಸಿದರೆ ಮಹಿಳಾ ದಿನಾಚರಣೆಯ ಅರ್ಥ ಏನೆಂಬುದು ತಿಳಿಯುತ್ತದೆ. ಈ ಹೋರಾಟಗಳ ಫಲವಾಗಿ ಇಂದು ಹಕ್ಕುಗಳು ಲಭ್ಯವಾಗಿವೆ. ಶಕ್ತಿ ಯೋಜನೆಯಂತಹ ವಿಶೇಷ ಯೋಜನೆಯನ್ನು ಸರ್ಕಾರ ಮಹಿಳೆಯರಿಗಾಗಿಯೇ ರೂಪಿಸಿದೆ. ಇದೆಲ್ಲದರ ಉದ್ದೇಶ ಮಹಿಳಾ ಸಬಲೀಕರಣ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷರಾದ ಎಂ.ಸಿ.ಲಲಿತ ಮಾತನಾಡಿ, ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸುತ್ತಾ ಬರಲಾಗಿದೆ. ಇದೇ ಪ್ರಥಮ ಬಾರಿಗೆ ದಿವಂಗತ ಕೆ.ಸಾಂಬಶಿವಪ್ಪ ಸ್ಮರಣಾರ್ಥ ಅನನ್ಯ ಪ್ರಕಾಶನದ ಸಾಹಿತ್ಯ ಪ್ರಶಸ್ತಿಯನ್ನು ಈ ಮಹಿಳಾ ದಿನಾಚರಣೆಯ ಮೂಲಕವೇ ಕೊಡ ಮಾಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ.ಶಿವಣ್ಣ ಬೆಳವಾಡಿ ಅವರು ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದಿನೇಶ್, ಈಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಆರ್.ರಂಗಮ್ಮ, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು. ಪಾರ್ವತಮ್ಮ, ಗಂಗಲಕ್ಷ್ಮೀ ತಂಡದವರು ಮಹಿಳಾ ಜಾಗೃತಿ ಗೀತೆಗಳನ್ನು ಹಾಡಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಸ್ವಾಗತಿಸಿದರು. ಸಿ.ಎಲ್.ಸುನಂದಮ್ಮ ಕಾರ್ಯಕ್ರಮ ನಿರೂಪಿಸಿ, ಪುಟ್ಟನರಸಯ್ಯ ವಂದಿಸಿದರು.