ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ, ಪಿಎಸ್‌ಐ ಮಾರಾಮಾರಿ : ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್

KannadaprabhaNewsNetwork | Updated : Mar 16 2025, 12:25 PM IST

ಸಾರಾಂಶ

ಪಿಎಸ್ಐ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಸಂಸದ ಗೋವಿಂದ ಕಾರಜೋಳ, ಮೇಲ್ಮನೆ ಕೆ.ಎಸ್.ನವೀನ್, ಮಾಜಿ ಶಾಸಕ ತಿಪ್ಪಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ ಎಸ್ಪಿ ಕಚೇರಿಯಲ್ಲಿ ಒಂದು ತಾಸು ಪಟ್ಟು ಹಿಡಿದು ಕುಳಿತರು.

 ಚಿತ್ರದುರ್ಗ : ತುಮಕೂರು ಜಿಲ್ಲೆ ಮಧುಗಿರಿಯ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಾಗೂ ಚಿತ್ರದುರ್ಗ ನಗರಠಾಣೆ ಪಿಎಸ್ಐ ಗಾದಿಲಿಂಗಪ್ಪ ಅವರಿಬ್ಬರ ಮಾರಾಮಾರಿ ದೃಶ್ಯಾವಳಿಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಹನುಮಂತೇಗೌಡ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಯಾಗಿ ಪಿಎಸ್‌ಐ ಮೇಲೆ ಹನುಮಂತೇಗೌಡ ನೀಡಿದ ದೂರು ದಾಖಲಿಸುವಂತೆ ಆಗ್ರಹಿಸಿ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಂಜೆಯವರೆಗೆ ಎಸ್‌ಪಿ ಕಚೇರಿಯಲ್ಲಿ ಕಸರತ್ತುಗಳ ನಡೆದವು.

ಚಿತ್ರದುರ್ಗದ ಪ್ರತಿಷ್ಠಿತ ಐಶ್ವರ್ಯ ಪೋರ್ಟ್ ಹೋಟೆಲ್ ಮುಂಭಾಗ ಶುಕ್ರವಾರ ರಾತ್ರಿ12.30ರ ವೇಳೆಗೆ ಊಟ ಮುಗಿಸಿಕೊಂಡು ಬಂದು ನಿಂತಿದ್ದ ಹನುಮಂತೇಗೌಡಗೆ ಪಿಎಸ್ಐ ಗಾದಿಲಿಂಗಪ್ಪ ಇಲ್ಲಿಂದ ಹೋಗುವಂತೆ ಸೂಚಿಸಿದ್ದಾರೆ. ಮಾತಿಗೆ ಮಾತು ಬೆಳೆದು ಹನುಮಂತೇಗೌಡಗೆ ಪಿಎಸ್‌ಐ ಕೆನ್ನೆಗೆ ಹೊಡಿದಿದ್ದಾರೆ. ನಂತರ ಪ್ರತಿಯಾಗಿ ಹನುಮಂತೇಗೌಡ ಪಿಎಸ್ಐಗೆ ಬಾರಿಸಿದ್ದಾರೆ. ಪರಸ್ಪರ ಅವಾಚ್ಯ ಶಬ್ದಗಳ ವಿನಿಮಯವಾಗಿದೆ. ಅಂತಿಮವಾಗಿ ಪೊಲೀಸರು ಹನುಮಂತೇಗೌಡ ಅವರನ್ನು ನಗರಠಾಣೆಗೆ ಕರೆದೊಯ್ಯಲಾಗಿದೆ. ಬಳಿಕ ಪಿಎಸ್ಐ ಮತ್ತು ಹನುಮಂತೇಗೌಡ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆಂದು ಹನುಮಂತೇಗೌಡ ಅವರ ಮೇಲೆ ಪಿಎಸ್ಐ ಗಾದಿಲಿಂಗಪ್ಪ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಪ್ರತಿಯಾಗಿ ಹನುಮಂತೇಗೌಡ ಕೂಡಾ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆಂದು ಪಿಎಸ್‌ಐ ಮೇಲೆ ನೀಡಿದ ದೂರನ್ನು ಪೊಲೀಸರು ದಾಖಲು ಮಾಡಿಕೊಂಡಿಲ್ಲ.

ಹನುಮಂತೇಗೌಡ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಯೋಗಕ್ಷೇಮ ವಿಚಾರಿಸಲು ಆಗಮಿಸಿದ ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮೇಲ್ಮನೆ ಸದಸ್ಯ ನವೀನ್ ಪೊಲೀಸರ ನಡೆ ಉಗ್ರವಾಗಿ ಖಂಡಿಸಿದರು.

ಈ ವೇಳೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ರಾತ್ರಿ ಹೋಟೆಲ್ ಬಳಿ ನಿಂತವರ ಮೇಲೆ ಪಿಎಸ್ಐ ಏಕಾಏಕಿ ಹಲ್ಲೆ ನಡೆಸಿದ್ದಾರೆ. ರಿವಾಲ್ವರ್ ತೋರಿಸಿ ಫೈರಿಂಗ್ ಮಾಡಲು ಯತ್ನಿಸಿದ್ದಾರೆ. ರಕ್ಷಿಸಿಕೊಳ್ಳಲು ಕೈಹಿಡಿದಾಗ ಪಿಎಸ್ಐ ಬೆರಳಿಗೆ ಗಾಯ ಆಗಿದೆ.

ರಸ್ತೆ ಮೇಲೆ ಓಡಾಡುವವರ ಮೇಲೆ ಹಲ್ಲೆ ನಡೆಸುವುದು ರಾಕ್ಷಸಿ ಪ್ರವೃತ್ತಿ. ದುರ್ನಡತೆಯ ಗಾದಿಲಿಂಗಪ್ಪನನ್ನು ಅಮಾನತ್ತಿಗೆ ಒಳಪಡಿಸಬೇಕು. ಇಲಾಖೆ ತನಿಖೆ ನಡೆಸಿ ಶಾಶ್ವತವಾಗಿ ಖಾಕಿ ಕಳಚಿಸಬೇಕು. ಈ ಬಗ್ಗೆ ವಿಧಾನಸಭೆ ಒಳಗೆ, ಹೊರಗೆ ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು.

ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಅವರ ಹಣೆ, ಎದೆ ಹಾಗೂ ಖಾಸಗಿ ಅಂಗಕ್ಕೆ ಪಿಎಸ್ಐ ಒದ್ದಿದ್ದಾರೆ. ಪೊಲೀಸ್ ಠಾಣೆಗೆ ಕರೆದೊಯ್ಯಲು ಹನುಮಂತೇಗೌಡ ರೌಡಿನಾ, ಸ್ಮಗ್ಲರಾ? ಎಂದು ಪ್ರಶ್ನಿಸಿದರು. ಸ್ಮಗ್ಲರ್ ಗೆ ಪ್ರೊಟೊಕಾಲ್, ರಾಜ ಮರ್ಯಾದೆ ಕೊಡ್ತೀರಿ. ಪೊಲೀಸ್ ಇಲಾಖೆಗೆ ನಾಚಿಕೆ ಆಗಬೇಕು ಎಂದ ಸಂಸದ ಕಾರಜೋಳ ಇಂಥ ಹೊಲಸು ಕೆಲಸ ಮಾಡುವವರು ಇಲಾಖೆಯಲ್ಲಿ ಇರಬಾರದು ಎಂದರು.

ಹನುಮಂತೇ ಗೌಡ ನೀಡಿದ ಪ್ರತಿ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ನಾಯಕರು ನೇರವಾಗಿ ಎಸ್‌ಪಿ ಕಚೇರಿಗೆ ಹೋಗಿ ಮಾತುಕತೆ ನಡೆಸಿದರು. ಈಗಲೂ ಎಸ್‌ಪಿ ಅವರೊಂದಿಗೆ ಮಾತುಕತೆ ನಡೆಸಿದ ಗೋವಿಂದ ಕಾರಜೋಳ, ಜನರಿಗೆ ಹಲ್ಲೆ ಮಾಡುವ ಅಧಿಕಾರ ಪೊಲೀಸರಿಗೆ ಯಾರು ಕೊಟ್ಟರು. ಪಿಎಸ್ಐ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಕ್ಕೆ ಪ್ರತಿಯಾಗಿ ಹನುಮಂತೇಗೌಡ ತಿರುಗೇಟು ನೀಡಿದ್ದಾರೆ. ಹಾಗಾಗಿ ನಾವು ಕೊಟ್ಟ ದೂರು ದಾಖಲಿಸಿ ಪಿಎಸ್ಐ ನ ಬಂಧಿಸಬೇಕೆಂದು ಪಟ್ಟು ಹಿಡಿದರು. ಅಲ್ಲಿ ತನಕ ಕಚೇರಿ ಬಿಟ್ಟು ಹೋಗುವುದಿಲ್ಲವೆಂದರು.

ಸುಮಾರು ಒಂದು ತಾಸಿನ ಬಳಿಕ ಮತ್ತೆ ಸಂಸದ ಗೋವಿಂದ ಕಾರಜೋಳ ಬಳಿ ಮಾತನಾಡಿ, ಹನುಮಂತೇಗೌಡ ಕೊಟ್ಟ ದೂರನ್ನು ಸ್ವೀಕರಿಸಿದ್ದೇವೆ. ವಿಚಾರಣೆ ನಡೆಸಿದ ನಂತರ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಗೋವಿಂದ ಕಾರಜೋಳ ನಿಲುವು ಸಡಿಲಗೊಳಿಸಿದರು.

Share this article