ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ಕಾಣುತ್ತಿರುವ ಕಾರಣಕ್ಕೆ ವಾಹನ ದಟ್ಟಣೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದರು.
ಇತ್ತೀಚೆಗೆ ವಿಶ್ವ ಸಂಚಾರ ಸೂಚ್ಯಂಕ ಕುರಿತು ಡಚ್ ಲೋಕೇಶನ್ ಟೆಕ್ನಾಲಜಿ ಸಂಸ್ಥೆ ಟಾಮ್ ಬಿಡುಗಡೆ ಮಾಡಿದೆ. ಇದರಲ್ಲಿ ಬೆಂಗಳೂರು ನಗರವು ಸಂಚಾರ ವ್ಯವಸ್ಥೆ ಸೂಚ್ಯಂಕದಲ್ಲಿ ಗಣನೀಯ ಬದಲಾವಣೆಯಾಗಿದೆ. 2022ರಲ್ಲಿ ವಿಶ್ವದಲ್ಲೇ 2ನೇ ಅತಿ ಹೆಚ್ಚು ಸಂಚಾರ ದಟ್ಟಣೆ ನಗರವಾಗಿದ್ದ ಬೆಂಗಳೂರು 2023ರಲ್ಲಿ 6ನೇ ಸ್ಥಾನಕ್ಕೆ ಬಂದಿದೆ ಎಂದು ತಿಳಿಸಿದರು.ಆ ವರದಿಯ ಪ್ರಕಾರ ಪ್ರತಿ ಗಂಟೆಗೆ ಸರಾಸರಿ ಪ್ರಯಾಣದ ವೇಗವು 2023ರಲ್ಲಿ 18 ಕಿ.ಮೀ. ಗಂಟೆಯಾಗಿದ್ದು, 2022ರಲ್ಲಿ ಪ್ರತಿ ಗಂಟೆಗೆ ಈ ಸರಾಸರಿ ವೇಗವು 14 ಕಿ.ಮೀ. ಇತ್ತು. ಹೀಗಾಗಿ 2022 ಸಾಲಿಗಿಂತ 2023ರಲ್ಲಿ ಪ್ರತಿ ಗಂಟೆಗೆ ಸರಾಸರಿ ಪ್ರಯಾಣದ ವೇಗವು 4 ಕಿ.ಮೀ ಹೆಚ್ಚಾಗಿದೆ ಎಂದು ವಿವರಿಸಿದರು.
ಸುಧಾರಿತ ಸಂಚಾರ ನಿರ್ವಹಣೆಯಲ್ಲಿ ಪ್ರಮುಖವಾಗಿ ವಾಹನಗಳ ಸುಗಮ ಸಂಚಾರಕ್ಕೆ ನೀಡಲಾಗಿದೆಯೇ ಹೊರತು ಸಂಚಾರ ನಿಯಮ ಉಲ್ಲಂಘನೆಯನ್ನು ದಾಖಲಿಸುವುದ್ದಕ್ಕಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಸಂಚಾರ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಜಂಕ್ಷನ್ ಸುಧಾರಣೆಗಳು, ಮರು ವಿನ್ಯಾಸ, ಸೆಂಟರ್ ಮಿಡಿಯನ್ ಮುಚ್ಚುವಿಕೆ, ಬಸ್ ನಿಲ್ದಾಣಗಳ ಸ್ಥಳಾಂತರ, ಯೂರ್ಟನ್ ಮುಚ್ಚುವಿಕೆ, ಸಿಗ್ನಲ್ ಹಂತದಲ್ಲಿ ಬದಲಾವಣೆಗಳಾಗಿವೆ. ಹಾಗೆಯೇ ಸುಧಾರಿತ ಮೆಟ್ರೋ ಸಂಪರ್ಕ ಕೂಡ ಸಂಚಾರ ಸುಗಮವಾಗಿಸಿದೆ ಎಂದು ತಿಳಿಸಿದರು.
-ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಸಿಗ್ನಲ್‌ಗಳು (ಎಟಿಸಿಎಸ್) ಸ್ಥಾಪಿಸಲಾಗುತ್ತಿದ್ದು, ಇವು ಅತ್ಯುತ್ತಮ ಸಿಗ್ನಲಿಂಗ್ ವ್ಯವಸ್ಥೆಯಾಗಲಿದೆ. ಎಐ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸುಧಾರಣೆಗೆ ಬಳಸಲಾಗುತ್ತದೆ.
ನಗರದಲ್ಲಿ ಸಂಚಾರ ನಿರ್ವಹಣೆಗೆ 10 ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಇವುಗಳ ನಿರ್ವಹಣೆ ಜವಾಬ್ದಾರಿಯನ್ನು ಎಸಿಪಿಗಳಿಗೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.