ಕನ್ನಡಪ್ರಭ ವಾರ್ತೆ ಗೋಕಾಕ
ಸತತ ಪ್ರಯತ್ನ ಮತ್ತು ಶ್ರದ್ಧೆಯಿಂದ ಮಾತ್ರ ಅತ್ಯುತ್ತಮ ಸಾಧನೆ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಓದಿನ ಹಸಿವು ಇದ್ದವನಿಗೆ ಮಾತ್ರ ಜ್ಞಾನದ ಅಮೃತ ಒಲಿಯುತ್ತದೆ. ಹಾಗೂ ಅಕ್ಷರ ಜ್ಞಾನವು ಬದುಕಿನ ಕತ್ತಲೆಯನ್ನು ಕಳೆಯುತ್ತದೆ ಎಂದು ಕವಿ, ಶಿಕ್ಷಕ ಈಶ್ವರ ಮಮದಾಪೂರ ಹೇಳಿದರು.ಅವರು, ತವಗ ಗ್ರಾಮದ ಬ್ರಹ್ಮಶ್ರೀ ಬಾಳಯ್ಯಾ ಸ್ವಾಮಿ ವಿದ್ಯಾವರ್ಧಕ ಸಂಘ ಕುರಣಿ ಸಂಸ್ಥೆಯ ಶ್ರೀ ಮಲ್ಲಮ್ಮದೇವಿ ತವಗಮಠ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಅತ್ಯುತ್ತಮ ಅಂಕಗಳು ನೌಕರಿಯನ್ನು ಪಡೆಯಲು ಸಹಾಯವಾಗಬಹುದು. ಆದರೆ, ಅತ್ಯುತ್ತಮ ಮೌಲ್ಯಗಳನ್ನು ಗಳಿಸಿದಲ್ಲಿ ಅತ್ಯುತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹೊಳೆಯಾಚೆ ಮಾತನಾಡಿದರು. ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಧರ್ಮದರ್ಶಿ ಬ್ರಹ್ಮಶ್ರೀ ಆನಂದ ಸ್ವಾಮಿಗಳು ತವಗಮಠ ಇವರು ಆಶೀರ್ವಚನ ನೀಡಿದರು.ಸಾಧನೆಗೈದ ವಿವಿಧ ತರಗತಿಯ ವಿದ್ಯಾರ್ಥಿಗಳಿಗೆ ಸಾಧನಾ ಪತ್ರ ಹಾಗೂ ಬಹುಮಾನಗಳನ್ನು ಬ್ರಹ್ಮಶ್ರೀ ಆನಂದ ಸ್ವಾಮಿಗಳು ವಿತರಿಸಿದರು. ತವಗ ಕ್ಲಸ್ಟರ್ ಶಿಕ್ಷಣ ಸಂಪನ್ಮೂಲ ವ್ಯಕ್ತಿ ನಾಗಪ್ಪ ಎಸ್ ಜಕಾತಿ, ಗ್ರಾ.ಪಂ ಅಧ್ಯಕ್ಷೆ ಸುನಂದಾ ಶ್ರೀಕಾಂತ ದಂಡು, ಉಪಾಧ್ಯಕ್ಷ ಬಾಳೇಶ ಮೇಲ್ಮಟ್ಟಿ, ತವಗ ಪಿ.ಕೆ.ಪಿ.ಎಸ್. ಅಧ್ಯಕ್ಷ ಸಿದ್ಲಿಂಗಪ್ಪ ಬಡಕುರಿ, ಉಪಾಧ್ಯಕ್ಷ ದ್ಯಾಮಪ್ಪ ಶಿ ಮೇತ್ರಿ, ಕೃಷ್ಣಮೂರ್ತಿ ಹಂಜಿ, ರಾಮನಗೌಡ ಪಾಟೀಲ್, ಸರ್ಕಾರಿ ಶಾಲಾ ಪ್ರಧಾನ ಗುರು ಬಿ.ಎನ್.ಹೊಳೆಯಾಚೆ, ಕೈತನಾಳ ಗ್ರಾಮದ ಸರ್ಕಾರಿ ಶಾಲಾ ಪ್ರಧಾನ ಗುರು ಭಜಂತ್ರಿ, ಹಾಗೂ ಊರಿನ ಪ್ರಮುಖರು ಹಾಜರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್.ಎಚ್ ಜಗದಾಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.