ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಭೈರಪ್ಪ

KannadaprabhaNewsNetwork |  
Published : Sep 28, 2025, 02:00 AM IST
27ಎಚ್ಎಸ್ಎನ್11 :  | Kannada Prabha

ಸಾರಾಂಶ

ಕನ್ನಡ ಸಾಹಿತ್ಯದ ಕಾದಂಬರಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಶ್ರೇಷ್ಠ ಕೃತಿಗಳನ್ನು ನೀಡುವುದರ ಮೂಲಕ ಕನ್ನಡದ ಅದರಲ್ಲೂ ಹಾಸನದ ನೆಲದನಿಯ ಕಂಪನ್ನು ರಾಜ್ಯ, ದೇಶ, ಹೊರದೇಶಗಳಲ್ಲಿಯೂ ಪಸರಿಸುವುದರ ಮುಖೇನ ನಾಡುನುಡಿಗೆ ಕೀರ್ತಿ ತಂದ ಅಪ್ರತಿಮ ಬರಹಗಾರ ಎಸ್‌. ಎಲ್. ಭೈರಪ್ಪ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಆಲೂರು

ಕನ್ನಡ ಸಾಹಿತ್ಯದ ಕಾದಂಬರಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಶ್ರೇಷ್ಠ ಕೃತಿಗಳನ್ನು ನೀಡುವುದರ ಮೂಲಕ ಕನ್ನಡದ ಅದರಲ್ಲೂ ಹಾಸನದ ನೆಲದನಿಯ ಕಂಪನ್ನು ರಾಜ್ಯ, ದೇಶ, ಹೊರದೇಶಗಳಲ್ಲಿಯೂ ಪಸರಿಸುವುದರ ಮುಖೇನ ನಾಡುನುಡಿಗೆ ಕೀರ್ತಿ ತಂದ ಅಪ್ರತಿಮ ಬರಹಗಾರ ಎಸ್‌. ಎಲ್. ಭೈರಪ್ಪ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್‌ ಅಭಿಪ್ರಾಯಪಟ್ಟರು.

ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲೂಕು ಘಟಕ ಪಟ್ಟಣದ ಬಿಲಿವರ್ಸ್‌ ಚರ್ಚಿನಲ್ಲಿ ನಾಡಿನ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರ ಅಗಲಿಕೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರದಲ್ಲಿ ಜನಿಸಿ ಬಾಲ್ಯದಲ್ಲಿಯೇ ಕಡುಕಷ್ಟದಲ್ಲಿ ಬೆಳೆದು ಉನ್ನತ ವ್ಯಾಸಂಗಕ್ಕೆಂದು ಮೈಸೂರಿಗೆ ತೆರಳಿ ನೆಲೆನಿಂತು ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಕಾದಂಬರಿ ವಿಭಾಗದಲ್ಲಿ ಉತ್ತಮೋತ್ತಮ ಕೃತಿಗಳನ್ನು ನೀಡುವುದರ ಮುಖೇನ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಇವರ ‘ನಾಯಿ ನೆರಳು’, ‘ವಂಶವೃಕ್ಷ’, ‘ಮತದಾನ’, ‘ತಬ್ಬಲಿಯು ನೀನಾದೆ ಮಗನೆ’ ನಾಲ್ಕು ಕಾದಂಬರಿಗಳು ಸಿನೆಮಾ ಆಗಿ ಮನಗೆದ್ದಿವೆ. ‘ದಾಟು’, ‘ಗೃಹಭಂಗ’ ದಾರವಾಹಿಗಳಾಗಿ ಖ್ಯಾತಿ ಪಡೆದರೆ, ‘ಪರ್ವ’ ನಾಟಕವಾಗಿ ಮನಸೂರೆಗೊಂಡಿದೆ. ಭಾರತೀಯ ಬಹುತೇಕ ಇತರೆ ಭಾಷೆಗಳಿಗೆ ಇವರ ಕಾದಂಬರಿಗಳು ತರ್ಜುಮೆಗೊಂಡು ಅಸಂಖ್ಯಾತ ಓದುಗರನ್ನು ತಲುಪಿದ್ದಾರೆ. ಭೈರಪ್ಪನವರ ಅಗಲಿಕೆ ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಕತ್ತಲು ಕವಿದಂತಾಗಿದೆ ಎಂದರು.

ಶಿಕ್ಷಕ ಕೆ.ಎಲ್.ವೆಂಕಟರಂಗಯ್ಯ ಮಾತನಾಡಿ ನಾವು ಚಿಕ್ಕ ವಯಸ್ಸಿನಿಂದಲೇ ಭೈರಪ್ಪನವರ ಕಾದಂಬರಿಗಳನ್ನು ಓದಿಕೊಂಡು, ಅವರ ಧಾರಾವಾಹಿಗಳನ್ನು ವೀಕ್ಷಿಸಿಕೊಂಡು ಬೆಳೆದವರು. ಮುಂದಿನ ಹತ್ತಾರು ತಲೆಮಾರು ಬಂದರೂ ಇಂತಹ ಅದ್ಭುತವಾದ ಕಾದಂಬರಿಕಾರನನ್ನು ಕಾಣಲು ಸಾಧ್ಯವಿಲ್ಲವೇನೋ. ಗ್ರಾಮೀಣ ಬದುಕನ್ನು ತಮ್ಮ ಕಾದಂಬರಿಗಳಲ್ಲಿ ನೈಜವಾಗಿ ಚಿತ್ರಿಸುತ್ತಿದ್ದರು. ಅವರ ಬರವಣಿಗೆ ಶೈಲಿ ಸಾಮಾಜಿಕ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ ಎಂದರು. ಗ್ರಂಥಾಲಯ ಸಹಾಯಕರಾದ ಟಿ.ಕೆ.ನಾಗರಾಜ್ ಮಾತನಾಡಿ, ವಾರನ್ನದಲ್ಲಿ ಬೆಳೆದ ಭೈರಪ್ಪನವರಿಗೆ ಗ್ರಾಮೀಣ ಹಾಗೂ ಕಡುಬಡತನದ ಬದುಕಿನ ಸ್ಪರ್ಶವಿತ್ತು. ಬೆಂದು ಬಸವಳಿದು ಉನ್ನತ ಹಂತಕ್ಕೆ ತಲುಪಿದ್ದರಿಂದಲೇ ಅವರ ಕಾದಂಬರಿಗಳಲ್ಲಿ ತಳ ಸಮುದಾಯದ ತಲ್ಲಣಗಳನ್ನು ಹೃದ್ಯವಾಗಿ ಚಿತ್ರಿಸಿದ್ದಾರೆ ಎಂದರು.

ಬಿಲಿವಿರ್ಸ್‌ ಚರ್ಚಿನ ಫಾದರ್‌ ಡಿ.ಸಿ. ಬಸವರಾಜ್ ಮಾತನಾಡಿ, ಪ್ರತಿ ವ್ಯಕ್ತಿ ಹುಟ್ಟಿದ ಮೇಲೆ ಸಾಯಲೇಬೇಕು ಆದರೆ ಹುಟ್ಟು ಸಾವಿನ ನಡುವಿರುವ ಬದುಕಿನಲ್ಲಿ ಏನನ್ನು ಚಿರಸ್ಥಾಯಿಯನ್ನಾಗಿಸಿದ್ದೇವೆ ಎನ್ನುವುದು ಬಹಳ ಮುಖ್ಯ. ಈ ದಿಸೆಯಲ್ಲಿ ಭೈರಪ್ಪನವರು ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇಯಾದ ಸುವರ್ಣಾಕ್ಷರಗಳಲ್ಲಿ ಬಿಂಬಿತವಾಗಿದ್ದಾರೆ. ಅವರು ಕೊಟ್ಟ ಬರವಣಿಗೆ ಎಷ್ಟೇ ಸಹಸ್ರಾರು ವರ್ಷಗಳೂ ಗತಿಸಿದರೂ ಅವರ ಸಾಹಿತ್ಯ ಧ್ವನಿಸುತ್ತಲೇ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ನಾಗಮ್ಮ, ಸವಿತಾ, ಲೋಹಿಯಾ, ಅರ್ಚನಾ, ನಾಗೇಶ್, ಚಿರಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ