ಅಪ್ಪೇನಹಳ್ಳಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಚಾಲನೆ

KannadaprabhaNewsNetwork |  
Published : May 12, 2026, 01:30 AM IST
ಫೋಟೋ:ಅಪ್ಪೆನಹಳ್ಳಿ ಗ್ರಾಮದಲ್ಲಿ 75 ಲಕ್ಷ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದ ಕ್ಷಣ. | Kannada Prabha

ಸಾರಾಂಶ

ಪ್ರಕೃತಿಯ ವೈಪರೀತ್ಯದಿಂದ ಮಳೆಗಾಲದ ಅವಧಿ ಮತ್ತು ಮಳೆಯ ಪ್ರಮಾಣದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬರುತ್ತಿದೆ. ಇದರಿಂದ ಭೂಗರ್ಭ ಜಲಮಟ್ಟ ಕುಸಿದು ರೈತರು ಕೃಷಿ ನಡೆಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗ ನೀರನ್ನು ವ್ಯರ್ಥವಾಗಿ ಹರಿದುಹೋಗಲು ಬಿಡದೇ, ಸೂಕ್ತ ಸ್ಥಳಗಳಲ್ಲಿ ತಡೆಹಿಡಿದು ಸಂಗ್ರಹಿಸುವ ಕೆಲಸ ಅಗತ್ಯವಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಬರ ಮತ್ತು ಅನಿಯಮಿತ ಮಳೆಯ ಹೊಡೆತಕ್ಕೆ ತತ್ತರಿಸಿರುವ ಬಯಲು ಸೀಮೆ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿ ರೈತರಿಗೆ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಭಾಗವಾಗಿ, ಗಂಡಸಿ ಹೋಬಳಿ ರಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೆನಹಳ್ಳಿ ಗ್ರಾಮದಲ್ಲಿ 75 ಲಕ್ಷ ವೆಚ್ಚದ ಬ್ರಿಡ್ಜ್ ಹಾಗೂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿಯ ವೈಪರೀತ್ಯದಿಂದ ಮಳೆಗಾಲದ ಅವಧಿ ಮತ್ತು ಮಳೆಯ ಪ್ರಮಾಣದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬರುತ್ತಿದೆ. ಇದರಿಂದ ಭೂಗರ್ಭ ಜಲಮಟ್ಟ ಕುಸಿದು ರೈತರು ಕೃಷಿ ನಡೆಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗ ನೀರನ್ನು ವ್ಯರ್ಥವಾಗಿ ಹರಿದುಹೋಗಲು ಬಿಡದೇ, ಸೂಕ್ತ ಸ್ಥಳಗಳಲ್ಲಿ ತಡೆಹಿಡಿದು ಸಂಗ್ರಹಿಸುವ ಕೆಲಸ ಅಗತ್ಯವಾಗಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಚೆಕ್ ಡ್ಯಾಂ, ಬ್ಯಾರೇಜ್, ಸೇತುವೆ ಸೇರಿದಂತೆ ನೀರು ಸಂಗ್ರಹಿಸುವ ಅನೇಕ ಯೋಜನೆಗಳನ್ನು ಕ್ಷೇತ್ರದಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ. ನಾನು ಶಾಸಕನಾದ ನಂತರ ಸಾವಿರಾರು ನೀರು ಸಂಗ್ರಹ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಪರಿಣಾಮ ಅನೇಕ ಗ್ರಾಮಗಳಲ್ಲಿ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ ಎಂದು ವಿವರಿಸಿದರು.ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಿದ ಶಿವಲಿಂಗೇಗೌಡರು, “ನಮ್ಮ ಭಾಗದ ಜನರ ದಶಕಗಳ ಕನಸಾದ ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿ ದೊರೆತಿದೆ. ಇದರಿಂದ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಮತ್ತೆ ವೇಗ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಕೆರೆ-ಕಟ್ಟೆಗಳಿಗೆ ನೀರು ಹರಿಯುವ ದಿನ ದೂರವಿಲ್ಲ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಕಾಮಗಾರಿಯಿಂದ ಸುತ್ತಮುತ್ತಲಿನ ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚುವ ಜೊತೆಗೆ ಭೂಗರ್ಭ ಜಲಮಟ್ಟ ಸುಧಾರಿಸಿ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ಸಿಗಲಿದೆ ಎಂಬ ನಿರೀಕ್ಷೆ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ.ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಎ.ಇ.ಇ ಸುಂದರರಾಜ್, ಗ್ರಾಮ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭತ್ತದ ಬೆಳೆ ರಕ್ಷಣೆಗೆ ನೀರು ಹರಿಸಲು ರವೀಂದ್ರ ಶ್ರೀಕಂಠಯ್ಯ ಆಗ್ರಹ
ನೀರಿದ್ದಾಗ ತಾತ್ಸಾರ, ಬರವಿದ್ದಾಗ ಲೆಕ್ಕಾಚಾರ..!