ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಿಳೆಯರ ಆರ್ಥಿಕ ಸಂಕಷ್ಟ ನಿವಾರಣೆಗಾಗಿ ಸ್ಥಾಪನೆಗೊಂಡ ಬ್ಯಾಂಕ್ ಕೆನರಾ ಬ್ಯಾಂಕ್ ಎಂದು ಬ್ಯಾಂಕಿನ ಅಧಿಕಾರಿ ಗೀತಾಂಜಲಿ ಪ್ರಸನ್ನ ಕುಮಾರ್ ಹೇಳಿದರು.ಇಲ್ಲಿನ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಶಿವಮೊಗ್ಗದ ವತಿಯಿಂದ ರೋಟರಿ ಕ್ಲಬ್ ಶಿವಮೊಗ್ಗದಲ್ಲಿ ಕ್ಯಾನ್ಸರ್ ಕೇರ್ ಹಾಗೂ ಅಪಘಾತ ವಿಮೆ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಮಹಿಳೆಯರಿಗೆ ಆರ್ಥಿಕವಾಗಿ ಹಾಗೂ ಆರೋಗ್ಯಕ್ಕಾಗಿ ಸದಾ ಕೆನರಾ ಬ್ಯಾಂಕ್ ನೆರವು ನೀಡುತ್ತಾ ಬಂದಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆ ಹರಡುತ್ತಿದ್ದು, ಅದಕ್ಕಾಗಿ ಜನರು ಬಹಳಷ್ಟು ಖರ್ಚು ಮಾಡುತ್ತಿದ್ದಾರೆ. ಮಹಿಳೆಯರಿಗೆ ನೆರವು ನೀಡುವ ಸಲುವಾಗಿ ಕೆನರಾ ಬ್ಯಾಂಕಿನಿಂದ ಕೆನರಾ ಏಂಜಲ್ ಎಂಬ ಉಳಿತಾಯ ಖಾತೆ ಪರಿಚಯಿಸಿದ್ದು, ಪ್ರತಿ ವರ್ಷ ಯಾವುದೇ ಪ್ರೀಮಿಯಂನ ನೀಡದೆ ಸಾಮಾನ್ಯ ಉಳಿತಾಯ ಖಾತೆಯಲ್ಲಿಯೇ 5000 ಇದ್ದರೆ 18 ರಿಂದ 70 ವರ್ಷದ ಮಹಿಳೆಯರಿಗೆ ಕ್ಯಾನ್ಸರ್ ರೋಗದ ಚಿಕಿತ್ಸೆಗಾಗಿ ಮೂರು ಲಕ್ಷ ನೀಡುತ್ತದೆ. 30,000 ಇದ್ದರೆ 5 ಲಕ್ಷದವರೆಗೆ, 1 ಲಕ್ಷ ಇದ್ದರೆ 10 ಲಕ್ಷದವರೆಗೆ ಕ್ಯಾನ್ಸರ್ ಚಿಕಿತ್ಸೆಗೆ ನೀಡುತ್ತದೆ. ಅಪಘಾತಾವದಾಗ 26 ಲಕ್ಷದವರೆಗೆ ವಿಮೆ ಬ್ಯಾಂಕಿನಿಂದ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.ಕೆನರಾ ಏಂಜಲ್ ಖಾತೆ ಹೊಂದಿರುವ ಮಹಿಳೆಯರಿಗೆ ಬ್ಯಾಂಕಿನಲ್ಲಿ ಪಡೆಯುವ ಗೃಹ ಸಾಲ ಹಾಗೂ ರಿಟೇಲ್ ಸಾಲಗಳ ಮೇಲೆ ಶೇ.0.5 ಅಷ್ಟು ಬಡ್ಡಿದರ ಕಡಿಮೆ ಆಗುತ್ತದೆ. ಬ್ಯಾಂಕಿನಲ್ಲಿ ಪಡೆಯುವ ಲಾಕರ್ ಸೌಲಭ್ಯಗಳಲ್ಲಿ ರಿಯಾಯಿತಿ ಇರುತ್ತದೆ ಎಂದರು.
ಸ್ಥಳದಲ್ಲಿಯೇ ಕೆನರಾ ಏಂಜಲ್ ಖಾತೆ ತೆರೆಯುವ ಸೌಲಭ್ಯವನ್ನು ಸಹ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಯಾದ ಉತ್ತೇಜ್ ಹಾಗೂ ರೋಟರಿ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.